ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮನೆಮಂದಿಗೆ ಆಸ್ಪದವಿಲ್ಲ, ಜನಸ್ಪಂದನ ತಪ್ಸಲ್ಲ

ನಾನು ಅಧಿಕಾರದಲ್ಲಿ ಇರುವವರೆಗೆ ನಿತ್ಯವೂ ನಡೆಯುತ್ತದೆ ಜನಸ್ಪಂದನ.ಆಸ್ತಿ ವಿವರ ಘೋಷಣೆ ಮಾಡುವಂತೆ ಸಂಪುಟದ ಎಲ್ಲ ಸದಸ್ಯರಿಗೆ ಶೀಘ್ರವೇ ಆದೇಶ...

Mainashree
Updated On : 15 Jun 2013, 11:21 am

ಕನ್ನಡಪ್ರಭ ವಾರ್ತೆ ಬೆಂಗಳೂರು  ಜೂ.15
ನಾನು ಅಧಿಕಾರದಲ್ಲಿ ಇರುವವರೆಗೆ ನಿತ್ಯವೂ ನಡೆಯುತ್ತದೆ ಜನಸ್ಪಂದನ.
ಆಸ್ತಿ ವಿವರ ಘೋಷಣೆ ಮಾಡುವಂತೆ ಸಂಪುಟದ ಎಲ್ಲ ಸದಸ್ಯರಿಗೆ ಶೀಘ್ರವೇ ಆದೇಶ ನೀಡುತ್ತೇನೆ. ಕಳೆದ 30 ವರ್ಷಗಳಿಂದ ನನ್ನ ಮನೆಯವರು ಅಧಿಕಾರದಲ್ಲಿ ಮೂಗು ತೂರಿಸಿಲ್ಲ, ಮುಂದೆಯೂ ಇಂಥದ್ದಕ್ಕೆ ಅವಕಾಶ ನೀಡುವುದಿಲ್ಲ..! - ಇದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪಷ್ಟನುಡಿ.
ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ 'ಕನ್ನಡಪ್ರಭ' ಆರಂಭಿಸಿದ್ದ 'ಸಿದ್ದುಗೆ ಸಲಹೆ' ಅಭಿಯಾನದ ಓದುಗರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೇ 29ರಿಂದ ಆರಂಭಗೊಂಡ ಈ ಅಭಿಯಾನ ಜೂನ್ 7ರಂದು ಮುಕ್ತಾಯಗೊಂಡಿದೆ. ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಓದುಗರು ಪತ್ರ ಬರೆದು ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಹೇಗಿರಬೇಕೆಂಬ ಬಗ್ಗೆ ಕಿವಿಮಾತು ಹೇಳಿದ್ದರು. ಜತೆಗೆ ಕೆಲ ಪ್ರಶ್ನೆಗಳನ್ನು ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದರು. ಈ ಪೈಕಿ 138 ಪತ್ರಗಳು ಪ್ರಕಟವಾಗಿದ್ದವು.
'ಕನ್ನಡಪ್ರಭ' ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಸಿದ್ದರಾಮಯ್ಯ, ಓದುಗರು ನೀಡಿರುವ ಸಲಹೆಯನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳುವ ಭರವಸೆ ನೀಡಿದ್ದಾರೆ. ಮಾತ್ರವಲ್ಲ ಓದುಗರ ಆಯ್ದ ಕೆಲ ಪ್ರಶ್ನೆಗಳಿಗೆ ನೀಡಿದ ಉತ್ತರ ಹೀಗಿದೆ...
-    ಭ್ರಷ್ಟಾಚಾರ ನಿಗ್ರಹಕ್ಕೆ ಯಾವ ಕ್ರಮ ಕೈಗೊಳ್ಳುತ್ತೀರಿ ?
ನಮಗೆ ಬಂದ ಪತ್ರಗಳಲ್ಲಿ ಭ್ರಷ್ಟಾಚಾರವೇ ಪ್ರಮುಖ ವಿಷಯ.
ನೋಡಿ ಭ್ರಷ್ಟಾಚಾರ ನಿಯಂತ್ರಣ ಮಾಡುತ್ತೇನೆ ಎಂದು ಹೇಳುವುದು ಸುಲಭ. ಪಾಲನೆ ಕಷ್ಟ ಎಂಬ ಮಾತಿದೆ. ಆದರೆ ನಾವು ಶುದ್ಧ ಹಸ್ತರಾಗಿದ್ದರೆ, ವೈಯಕ್ತಿಕವಾಗಿ ಪ್ರಾಮಾಣಿಕವಾಗಿದ್ದರೆ, ಆಡಳಿತ ವ್ಯವಸ್ಥೆಯಲ್ಲಿ ಮನೆ ಮಾಡಿರುವ ಭ್ರಷ್ಟಾಚಾರ ಹತ್ತಿಕ್ಕುವುದು ಕಷ್ಟವಲ್ಲ. ಭ್ರಷ್ಟಾಚಾರ ನಿಯಂತ್ರಣ ಕಾರ್ಯ ಮೊದಲು ನಮ್ಮ ಮನೆಯಿಂದಲೇ ಆರಂಭವಾಗಬೇಕು. ನಾವು ಪರಿಶುದ್ಧವಾಗಿದ್ದಾಗ ಮಾತ್ರ ಬೇರೆಯವರ ದೋಷಗಳ ಬಗ್ಗೆ ಮಾತನಾಡಲು ಸಾಧ್ಯ. ಮುಖ್ಯಮಂತ್ರಿಯಾಗಿ ನಾನು ಈ ನೀತಿ ಪಾಲಿಸುತ್ತೇನೆ. ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ಕಳಂಕಿತ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಾನದಲ್ಲಿಟ್ಟು ಮನ್ನಣೆ ನೀಡುವುದಿಲ್ಲ. ಜತೆಗೆ ಲೋಕಾಯುಕ್ತ ಸಂಸ್ಥೆ ನೀಡಿದ ವರದಿಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳುತ್ತೇನೆ.                   

 - ಗೋಹತ್ಯೆ ನಿಷೇಧ ವಿಧೇಯಕವನ್ನು ವಾಪಸ್ ತೆಗೆದುಕೊಳ್ಳುತ್ತೀರಾ?
ಗೋಹತ್ಯಾ ನಿಷೇಧ ಕಾಯಿದೆಯನ್ನೇ ನಮ್ಮ ಸರ್ಕಾರ ವಾಪಸ್ ತೆಗೆದುಕೊಳ್ಳುತ್ತದೆ ಎಂಬ ತಪ್ಪು ಅಭಿಪ್ರಾಯವನ್ನು ಜನರಲ್ಲಿ ಮೂಡಿಸಲಾಗುತ್ತಿದೆ. ಆದರೆ ಸತ್ಯ ಬೇರೆ. 1964ರಲ್ಲಿ ರಾಷ್ಟ್ರವ್ಯಾಪಿ ಅನ್ವಯವಾಗುವಂತೆ ಗೋ ಹತ್ಯಾ ನಿಷೇಧ ಕಾಯಿದೆಯನ್ನು ಜಾರಿಗೆ ತರಲಾಗಿದೆ. ನನ್ನ ಪ್ರಕಾರ ಜಾನುವಾರು ರಕ್ಷಣೆಗೆ ಈ ಕಾನೂನು ಸಾಕು. ಆದರೆ ಬಿಜೆಪಿ ಸರ್ಕಾರ ಇದಕ್ಕೆ ತಿದ್ದುಪಡಿ ತಂದಿದೆ. ಆ ವಿಧೇಯಕ ರಾಷ್ಟ್ರಪತಿಗಳ ಅಂಕಿತಕ್ಕೆ ಬಾಕಿ ಇದೆ. ನಾನು ಪ್ರತಿಪಕ್ಷ ನಾಯಕನಾಗಿದ್ದಾಗ ಸದನದ ಒಳಗೆ ಹಾಗೂ ಹೊರಗೆ ಈ ತಿದ್ದುಪಡಿ ವಿರೋಧಿಸಿದ್ದೆನೆಯೇ ಹೊರತು ಗೋಹತ್ಯಾ ನಿಷೇಧ ಕಾಯಿದೆಯನ್ನಲ್ಲ. ಬಿಜೆಪಿ ಸರ್ಕಾರ ಮಾಡಿರುವ ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆಯುವುದಕ್ಕೆ ಕಾನೂನು ಪ್ರಕಾರ ಅವಕಾಶವಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
-  ಅಕ್ಕಿ ಕೊಟ್ಟು ಜನರನ್ನು ಸೋಮಾರಿ ಮಾಡ್ತೀರಾ, ಅದಕ್ಕೆ ಬದಲಾಗಿ ಸೂಕ್ತ ಕೆಲಸ ಕೊಡಿ ಅಂತಾರೆ. ಇದಕ್ಕೆ ಏನು ಹೇಳ್ತೀರಿ?
ಬಡವರಿಗೆ ಕಡಿಮೆ ದರದಲ್ಲಿ ಅಕ್ಕಿ ಕೊಟ್ಟರೆ ಜನ ಸೋಮಾರಿ ಆಗ್ತಾರೆನ್ರಿ? ಇದು ಸರಿಯಾದ ಅಭಿಪ್ರಾಯವಲ್ಲ. ನನ್ನ ಪ್ರಕಾರ ಬಡವರು ಹಸಿದು ಬದುಕಬಾರದು. ಅವರ ಹೊಟ್ಟೆ ತುಂಬಿದರೆ ರಟ್ಟೆಗೆ ಬಲ ಬರುತ್ತದೆ. ಆಗ ಅವರು ಚೆನ್ನಾಗಿ ಕೆಲಸ ಮಾಡುತ್ತಾರೆ. ಅಕ್ಕಿ ಕೊಟ್ಟರೆ ಬಡವರು ಕೆಲಸ ಮಾಡುವುದಿಲ್ಲ, ಅವರು ಸೋಮಾರಿಗಳಾಗುತ್ತಾರೆ ಎಂಬ ವಾದದಲ್ಲಿ ಅರ್ಥವಿಲ್ಲ. ಕಡಿಮೆ ದರದಲ್ಲಿ ಬಡವರಿಗೆ ಅಕ್ಕಿ ಕೊಡುವುದೇ ತಪ್ಪು ಎನ್ನುವುದನ್ನು ನಾನು ಒಪ್ಪುವುದಿಲ್ಲ.
  ಎಲ್ಲ ಇಲಾಖೆಗಳಲ್ಲೂ ಸಕಾಲ ಜಾರಿ ಮಾಡಿ ಅಂತಾರೆ ಜನ. ಸಕಾಲ ಬಂದ್ರೆ ಚೆನ್ನಾಗಿರುತ್ತಲ್ಲವೇ?
ಈಗಾಗಲೇ ಹಲವು ಇಲಾಖೆಗಳಲ್ಲಿ ಸಕಾಲ ಸೇವೆ ನೀಡುತ್ತಿದ್ದೇವೆ. ಹಂತ ಹಂತವಾಗಿ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಸಕಾಲ ಜಾರಿಗೊಳಿಸಲಾಗುವುದು.
-  ಜನಪ್ರಿಯ ಘೋಷಣೆಗಳ ಬಗ್ಗೆ ತುಂಬಾ ಮಂದಿ ಆಕ್ಷೇಪವೆತ್ತಿದ್ದಾರೆ. ಇದು ಆರ್ಥಿಕ ಅಶಿಸ್ತಿಗೆ ಕಾರಣವಾಗುತ್ತದೆ ಅಂತಾರೆ. ಇದನ್ನು ನೀವು ಹೇಗೆ ಅರ್ಥೈಸುತ್ತೀರಿ?
ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವುದಕ್ಕೆ ಮುನ್ನವೇ ಅದರ ಜಾರಿಯಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಯೋಚನೆ ಮಾಡಿದ್ದೇನೆ. ರಾಜ್ಯದ ಆರ್ಥಿಕ ಪರಿಸ್ಥಿತಿಗೆ ತೊಂದರೆಯಾಗುವಂಥ ಯಾವುದೇ ಯೋಜನೆಯನ್ನು ನಾನು ಘೋಷಣೆ ಮಾಡಿಲ್ಲ. ಅರ್ಥ ವ್ಯವಸ್ಥೆ ಶಿಸ್ತಿನಲ್ಲಿಟ್ಟರೆ ಯಾವುದೂ ಅಸಾಧ್ಯವಲ್ಲ.
- ಕಾವೇರಿ ವಿವಾದದ ಬಗ್ಗೆ ಹೇಳಿರುವ ಜನ, ಬೇಗನೆ ಪರಿಹರಿಸಿ ಅಂತಾರೆ. ಜಯಲಲಿತಾಗೆ ಬಯ್ಯುತ್ತಲೇ ನೀವು ದೃಢ ನಿರ್ಧಾರ ಮಾಡಿ ಅಂತಾರೆ. ಕಾವೇರಿ ಬಗ್ಗೆ ನಿಮ್ಮ ನಡೆ ಏನು?
ಕಾವೇರಿ ವಿವಾದ ಈಗಾಗಲೇ ಸುಪ್ರೀಂ ಕೋರ್ಟ್‌ನ ಮುಂದೆ ಇದೆ. ಕಳೆದ ಹಲವು ದಶಕಗಳಿಂದ ಈ ಬಗ್ಗೆ ಕಾನೂನು ಸಮರ ನಡೆಯುತ್ತಿದೆ. ಕಾವೇರಿ ಜಲಾನಯನ ಪ್ರದೇಶದ ಜನರ ಹಿತಾಸಕ್ತಿ ಕಾಪಾಡುವುದಕ್ಕೆ ನಮ್ಮ ಸರ್ಕಾರ ಕಂಕಣ ಬದ್ಧವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸುವ ಮೂಲಕ ರಾಜ್ಯದ ಹಿತ ಕಾಪಾಡಲಾಗುವುದು.
- ಗುಟ್ಕಾವನ್ನೇನೋ ನಿಷೇಧ ಮಾಡಿದಿರಿ, ಆದರೆ ನಾವು ಬದುಕುವುದು ಹೇಗೆ ಎಂದು ಅಡಕೆ ಬೆಳೆಗಾರರು ಕೇಳುತ್ತಿದ್ದಾರೆ. ನಿಮ್ಮ ಪರಿಹಾರವೇನು?
ಗುಟ್ಕಾ ನಿಷೇಧದ ಬಗ್ಗೆ ಅಡಕೆ ಬೆಳೆಗಾರರು ವಿರೋಧಿಸಿಲ್ಲ. ಗುಟ್ಕಾ ತಯಾರಕರು ಮತ್ತು ಮಾರಾಟಗಾರರು ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ರಾಜಕೀಯಕ್ಕಾಗಿ ವಿರೋಧ ವ್ಯಕ್ತಪಡಿಸಿದರೆ, ಕೆಲವರು ವೈಯಕ್ತಿಕ ಹಿತಕ್ಕಾಗಿ ವಿರೋಧಿಸುತ್ತಿದ್ದಾರೆ.
- ಕಾನ್ವೆಂಟ್‌ಗಳಲ್ಲಿ ಡೊನೇಷನ್ ಪದ್ಧತಿಗೆ ಕಡಿವಾಣ ಹಾಕಿ ಅಂತಾರೆ. ಇದು ಸಾಧ್ಯವೇ?
ಈ ಬಗ್ಗೆ ನಮ್ಮ ಸರ್ಕಾರ ಈಗಾಗಲೇ ಪ್ರಯತ್ನ ಆರಂಭಿಸಿದೆ. ಕಾನ್ವೆಂಟ್‌ಗಳಲ್ಲಿ ಮಾತ್ರವಲ್ಲ ಉನ್ನತ ಶಿಕ್ಷಣ ಕ್ಷೇತ್ರದಲ್ಲೂ ಡೊನೇಶನ್ ಹಾವಳಿ ತಡೆಯುವುದಕ್ಕೆ ನಾನು ಚಿಂತನೆ ನಡೆಸಿದ್ದೇನೆ. ಉನ್ನತ ಶಿಕ್ಷಣ ಸಚಿವರ ಜತೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಶಿಕ್ಷಣಕ್ಕಾಗಿ ಹೆಚ್ಚು 'ಮೌಲ್ಯ' ವ್ಯಯವಾಗಬಾರದು. ಮೌಲ್ಯಯುತ ಶಿಕ್ಷಣ ದೊರೆಯಬೇಕು.
-  ಮಠ-ಮಾನ್ಯಗಳಿಗೆ ಅನುದಾನ ನಿಲ್ಲಿಸ್ತೀರಾ?
ಅನುದಾನ ಕೊಡಿ ಎಂದು ಯಾವ ಮಠ-ಮಾನ್ಯಗಳೂ ಸರ್ಕಾರವನ್ನು ಕೇಳುವುದಿಲ್ಲ. ಕಳೆದ 30 ವರ್ಷಗಳಿಂದ ನಾನು ಸಾರ್ವಜನಿಕ ಸೇವೆಯಲ್ಲಿದ್ದೇನೆ. ಆದರೆ ಯಾವುದೇ ಮಠಾಧೀಶರು ಹಣ ನೀಡಿ ಎಂದು ನನ್ನ ಬಳಿ ಬಂದಿರಲಿಲ್ಲ. ಮಠಗಳಿಗೆ, ದೇವಾಲಯಗಳಿಗೆ ಬಜೆಟ್‌ನಲ್ಲಿ ಹಣ ನಿಗದಿ ಮಾಡುವುದು ಇತ್ತೀಚಿಗೆ ಚಾಲ್ತಿಗೆ ಬಂದ ಪದ್ಧತಿ.
-  ದೇವಾಲಯಗಳ ಸ್ವಾಧೀನದ ಬಗ್ಗೆ ಮಾತನಾಡಿದ್ದೀರಿ. ಇದು ಸರಿಯಲ್ಲ ಅಂತಾರೆ ಜನ. ದೇವಾಲಯಗಳನ್ನು ಸರ್ಕಾರ ವಶಪಡಿಸಿಕೊಳ್ಳುವುದು ಸಾಧ್ಯವೇ?
ಎಲ್ಲ ದೇವಾಲಯಗಳನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಉಡುಪಿಯ ಶ್ರೀಕೃಷ್ಣ ಮಠ ಈ ಹಿಂದೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿತ್ತು. ಅದನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಡಿನೋಟಿಫೈ ಮಾಡಿದ್ದರು ಎಂದಷ್ಟೇ ಹೇಳಿದ್ದೆ. ಆದರೆ ಆ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ.
-  ನಿಮ್ಮನ್ನು ಸೇರಿ ಸಂಪುಟದ ಎಲ್ಲ ಸಚಿವರು ಆಸ್ತಿ ವಿವರ ಘೋಷಣೆ ಮಾಡುತ್ತೀರಾ?
ಕಾನೂನು ಪ್ರಕಾರ ಸಚಿವರು ಹಾಗೂ ಶಾಸಕರು ಪ್ರತಿ ವರ್ಷ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತ ಸಂಸ್ಥೆಗೆ ನೀಡಬೇಕು. ಈ ನಿಯಮವನ್ನು ಪಾಲಿಸುವಂತೆ ಎಲ್ಲ ಶಾಸಕರು ಹಾಗೂ ಸಚಿವರಿಗೆ ಸೂಚನೆ ನೀಡುತ್ತೇನೆ.
-  ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಸದನದಲ್ಲಿ ಸರಿಯಾಗಿ ಭಾಗವಹಿಸುತ್ತಿಲ್ಲ. ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಆಕ್ಷೇಪಕ್ಕೆ ಏನು ಉತ್ತರ.
ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಿದ್ದರೆ ಸದನದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು. ವಿಧಾನಸಭಾ ಕಲಾಪದ ಗುಣಮಟ್ಟ ಕುಸಿಯುತ್ತಿದೆ ಎಂಬ ಮಾತು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ. ನನಗೂ ಒಮ್ಮೊಮ್ಮೆ ಇದು ಸತ್ಯ ಎನಿಸಿದ್ದುಂಟು. ಹೀಗಾಗಿ ಎಲ್ಲ ಶಾಸಕರು ಅಧಿವೇಶನ ಮುಗಿಯುವವರೆಗೂ ಕಲಾಪದಲ್ಲಿ ಭಾಗವಹಿಸಬೇಕು ಎಂದು ವೈಯಕ್ತಿಕವಾಗಿ ಮನವಿ ಮಾಡುತ್ತೇನೆ. ಇಷ್ಟೆಲ್ಲ ಕಸರತ್ತು ಮಾಡಿ ನಾವು ಜನಪ್ರತಿನಿಧಿಗಳಾಗುವುದಾದರೂ ಏಕೆ? ಸಹಿ ಹಾಕಿದರೆ ಅಧಿವೇಶನದಲ್ಲಿ ಭಾಗಿಯಾದಂತೆ ಎಂಬ ಮನೋಭಾವ ಬದಲಾಗಬೇಕು.

ಪ್ರವಾಸ ಹೊರತುಪಡಿಸಿ, ನಿತ್ಯ ಜನಸ್ಪಂದನ
ಜನರ ಕಷ್ಟಗಳಿಗೆ ಕಿವಿಯಾಗುವುದು ಮುಖ್ಯಮಂತ್ರಿಯ ಕರ್ತವ್ಯ. ನನ್ನ ಅಧಿಕಾರಾವಧಿಯಲ್ಲಿ ನಿತ್ಯವೂ ಜನಸ್ಪಂದನ ಕಾರ್ಯಕ್ರಮ ನಡೆಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜನತಾ ದರ್ಶನ ಎಂದಿನಿಂದ ಆರಂಭಿಸುತ್ತೀರಿ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಏಕೆಂದರೆ ನಾನು ಈಗಾಗಲೇ ಜನಸ್ಪಂದನ ಕಾರ್ಯಕ್ರಮ ಆರಂಭಿಸಿದ್ದೇನೆ. ಪ್ರವಾಸ ಸಂದರ್ಭ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ ಗೃಹ ಕಚೇರಿಯಲ್ಲಿ ಜನಸ್ಪಂದನ ನಡೆಸಿ, ಜನರ ಕಷ್ಟಗಳಿಗೆ ಪರಿಹಾರ ದೊರಕಿಸಿ ಕೊಡುತ್ತೇನೆ ಎಂದರು. ಸಿಎಂ ಕೆಲಸ ಅಂದರೆ ಸುಲಭದ್ದಲ್ಲ. ಕೆಲಸ ಮಾಡುವುದಕ್ಕೆ ದಿನದ 24 ಗಂಟೆಯೂ ಸಾಲುವುದಿಲ್ಲ. ಈ ಹುದ್ದೆಯನ್ನು ನಿಭಾಯಿಸುವುದಕ್ಕೆ ತಾಳ್ಮೆ ಮತ್ತು ಪರಿಶ್ರಮ ಎರಡೂ ಬೇಕು.

ಮನೆ ಮಂದಿ ಮೂಗು ತೂರಿಸುವುದಿಲ್ಲ
ಮುಖ್ಯಮಂತ್ರಿ, ಮಂತ್ರಿ ಹಾಗೂ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಲ್ಲಿ ಅವರ ಮನೆಯವರು ಮೂಗು ತೂರಿಸುವುದನ್ನು ನಾನು ಕಳೆದ 30 ವರ್ಷಗಳಿಂದ ವಿರೋಧಿಸುತ್ತಾ ಬಂದಿದ್ದೇನೆ. ಸಾರ್ವಜನಿಕ ಬದುಕಿನಲ್ಲಿ ಇರುವವರ ಮೇಲೆ ಅವರ ಮನೆ ಮಂದಿ ಪ್ರಭಾವ ಇರಬಾರದು ಎಂಬುದು ನನ್ನ ವಾದ. ನಾನು ಈ ಹಿಂದೆ ಹಲವು ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದೇನೆ. ಆಗಲೂ ನನ್ನ ಮಡದಿ-ಮಕ್ಕಳು ಅಧಿಕಾರದಲ್ಲಿ ಮೂಗು ತೂರಿಸಿರಲಿಲ್ಲ. ಮುಂದೆಯೂ ಅದಕ್ಕೆ ಅವಕಾಶ ನೀಡುವುದಿಲ್ಲ.

ಯಾರವರು? ಅಡ್ರೆಸ್ ಕೊಡಿ..
ಪತ್ರಕರ್ತರ ಬಳಿಯೂ ಮಾತು ಕಡಿಮೆ ಮಾಡಿ ಎಂದು ಪತ್ರ ಬರೆದವರು ಯಾರು ? ಒಳ್ಳೆ ಸಲಹೆ ನೀಡಿದ್ದಾರೆ. ಅವರ ಅಡ್ರೆಸ್ ಕೊಡಿ ಮಾತಾಡ್ತೇನೆ. ಓದುಗರ ಪತ್ರವೊಂದಕ್ಕೆ ಸಿದ್ದರಾಮಯ್ಯ ಸಿಡಿಸಿದ ಹಾಸ್ಯ ಚಟಾಕಿ ಇದು. ಮಾತು ಮನೆ ಕೆಡಿಸಿತು ಎಂಬ ಗಾದೆ ನೆನಪುಮಾಡಿಕೊಂಡ ಓದುಗರೊಬ್ಬರು ಕನ್ನಡಪ್ರಭಕ್ಕೆ ಬರೆದ ಪತ್ರದಲ್ಲಿ ಹೆಚ್ಚು ಮಾತನಾಡೋದು ಬೇಡ. ಪತ್ರಕರ್ತರ ಬಳಿಯೂ ಕಡಿಮೆ ಮಾತನಾಡಿ ಎಂದಿದ್ದರು. ಈ ಪ್ರಶ್ನೆ ನೋಡಿ ತಮ್ಮ ವಿಶಿಷ್ಟ ಶೈಲಿಯಲ್ಲಿ ನಕ್ಕ ಅವರು, ಈ ಪತ್ರ ಬರೆದವರ ಅಡ್ರೆಸ್ ಕೊಡಿ ಅವರ ಜತೆ ಸ್ವಲ್ಪ ಮಾತಾಡಬೇಕು ಎಂದು ಚಟಾಕಿ ಹಾರಿಸಿದರು.


ಗಡ್ಡ ತೆಗೆಯೋಕ್ಕಾಗಲ್ಲ...
ನಾನು ಗಡ್ಡ ತೆಗೆಯೋಕೆ ಆಗಲ್ಲಾರಿ, ಆಗಾಗ ಟ್ರಿಮ್ ಮಾಡ್ತೀನಿ..!
ಓದುಗರು ನಿಮ್ಮ ಗಡ್ಡದ ಬಗ್ಗೆಯೂ ಚರ್ಚಿಸಿದ್ದಾರೆ. ಗಡ್ಡ ತೆಗಿಸ್ತೀರಾ? ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ನಾನು ಮೊದಲಿನಿಂದಲೂ ಗಡ್ಡ ಬಿಡುತ್ತಿದ್ದೆ. ಈ ಕಾರಣಕ್ಕಾಗಿಯೇ ನಮ್ಮ ಅಪ್ಪ ಆಗಾಗ ಬಯ್ಯುತ್ತಿದ್ದರು. ಆದರೆ ನಾನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಮದುವೆ ಸಂದರ್ಭದಲ್ಲಿ ಜಪ್ಪಯ್ಯ ಎಂದು ಹಠ ಹಿಡಿದು ನಮ್ಮ ಅಪ್ಪ ಗಡ್ಡ ತೆಗೆಸಿದ್ದರು. ನಮ್ಮ ಹಳ್ಳಿ ಕಡೆ ಅದೇನೋ 'ಮದನ ಕ್ಷೌರ' ಅಂತಾರಲ್ಲ. ಅದಕ್ಕೆ. ಅದಾದ ಮೇಲೆ ನಾನು ಗಡ್ಡ ತೆಗೆದಿಲ್ಲ. ಆದರೆ ಟ್ರಿಮ್ ಮಾಡಿಸ್ತೇನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement