ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಳೆ ಸರ್ಕಾರಕ್ಕೆ ಹೊಸ ಪೆಟ್ಟು

ಹಿಂದಿನ ಬಿಜೆಪಿ ಸರ್ಕಾರ ತನ್ನ ಕೊನೆಯ ದಿನಗಳಲ್ಲಿ ಕೈಗೊಂಡಿರುವ ಪ್ರಮುಖ ನಿರ್ಧಾರಗಳನ್ನು ಮರುಪರಿಶೀಲಿಸಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಈ ಕುರಿತಂತೆ...

Mainashree
Updated On : 16 Jun 2013, 12:48 pm

ಕನ್ನಡಪ್ರಭ ವಾರ್ತೆ  ಬೆಂಗಳೂರು  ಜೂ.15
ಹಿಂದಿನ ಬಿಜೆಪಿ ಸರ್ಕಾರ ತನ್ನ ಕೊನೆಯ ದಿನಗಳಲ್ಲಿ ಕೈಗೊಂಡಿರುವ ಪ್ರಮುಖ ನಿರ್ಧಾರಗಳನ್ನು ಮರುಪರಿಶೀಲಿಸಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ.
ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಬಿಜೆಪಿ ಸರ್ಕಾರ ಕೊನೆಯ ದಿನಗಳಲ್ಲಿ ಕೈಗೊಂಡಿರುವ ಯೋಜನೆಗಳನ್ನು ಮುಂದುವರಿಸಬೇಕೇ? ಬೇಡವೇ? ಎಂದು ನಿರ್ಧರಿಸುವ ಅಧಿಕಾರವನ್ನೂ ಆಯಾ ಸಚಿವರಿಗೇ ನೀಡಿದ್ದಾರೆ.
ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಲು ಇಲ್ಲವೇ ಇತರೆ ಕಾರಣಗಳಿಂದ ಕೊನೆಯ ಅವಧಿಯಲ್ಲಿ ಬಿಜೆಪಿ ಸರ್ಕಾರ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹೊಸ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.       

ಈ ಕಾರಣಕ್ಕಾಗಿ ಕಾರ್ಯಕ್ರಮಗಳನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಸಚಿವರಿಗೂ ಸೂಚಿಸಿದ್ದಾರೆ.
ರಾಜ್ಯದ ಎಂಟು ಕಡೆಗಳಲ್ಲಿ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿಚೆನ್ನಮ್ಮ ವಸತಿ ಶಾಲೆಗಳನ್ನು ಆರಂಭಿಸುವ ಕುರಿತು ಬಿಜೆಪಿ ಸರ್ಕಾರ ಕಳೆದ ಮಾರ್ಚ್ ತಿಂಗಳಲ್ಲಿ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಪ್ರಕಟಿಸಿತ್ತು. ಈಗಾಗಲೇ ಈ ಶಾಲೆಗಳನ್ನು ಆರಂಭಿಸದಂತೆ ಸರ್ಕಾರ ಆದೇಶ ಹೊರಡಿಸಿದೆ. ಇದರ ಜತೆಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಮರುಪರಿಶೀಲಿಸಲು ತೀರ್ಮಾನಿಸಲಾಗಿದೆ.
ಮದ್ಯದ ಬಾಕ್ಸ್ ದರ ಹೆಚ್ಚಳ: ಮುಖ್ಯಮಂತ್ರಿಗಳ ಸೂಚನೆಯಂತೆ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಇಲಾಖೆಗೆ ಸಂಬಂಧಿಸಿದ ಒಂದು ಆದೇಶವನ್ನು ಮರುಪರಿಶೀಲಿಸಲಿದ್ದಾರೆ. ಹಿಂದಿನ ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವ ಮುನ್ನ ವಿಸ್ಕಿ, ಬ್ರಾಂದಿ ಸೇರಿದಂತೆ ವಿವಿಧ ರೀತಿಯ ಮದ್ಯದ ಬಾಕ್ಸ್‌ಗಳಿಗೆ ಪ್ರತಿ ಬಾಕ್ಸ್‌ಗೆ 40 ಹೆಚ್ಚಳ ಮಾಡುವ ತೀರ್ಮಾನ ಕೈಗೊಂಡಿದ್ದರು.
ಇದರಿಂದ ಒಂದು ಮದ್ಯದ ಬಾಟಲ್ ದರ ಕನಿಷ್ಠ 2ರಿಂದ 5ರಷ್ಟು ಹೆಚ್ಚಾಗಿತ್ತು. ಆದರೆ, ಈ ದರ ಏರಿಕೆಯಿಂದ ಡಿಸ್ಟಿಲರಿಯವರಿಗೆ ಅನುಕೂಲವಾಗಿತ್ತೇ ಹೊರತು ಸರ್ಕಾರಕ್ಕೆ ಹೆಚ್ಚುವರಿ ಆದಾಯ ಬರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ದರ ಹೆಚ್ಚಳ ಪ್ರಸ್ತಾಪವನ್ನು ಮರುಪರಿಶೀಲಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ಸಂಬಂಧಿಸಿದರ ಕಡತಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮಠ, ಸಂಘ- ಸಂಸ್ಥೆಗಳಿಗೆ ಭೂಮಿ: ಈ ಮಧ್ಯೆ ಮಠ, ಮಂದಿರಗಳು, ದೇವಸ್ಥಾನಗಳು ಮತ್ತು ಸಂಘ ಸಂಸ್ಥೆಗಳಿಗೆ ಸುಮಾರು 35 ಎಕರೆ ಭೂಮಿಯನ್ನು ದಾನದ ರೂಪದಲ್ಲಿ ನೀಡಲು ಬಿಜೆಪಿ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರವನ್ನೂ ಮರುಪರಿಶೀಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
ಆದರೆ, ಏಕಾಏಕಿ ಈ ತೀರ್ಮಾನಗಳನ್ನು ವಾಪಸ್ ಪಡೆಯುವ ಬದಲು ಯಾರು ಜಾಗಕ್ಕಾಗಿ ಸರ್ಕಾರದ ಮುಂದೆ ಅರ್ಜಿ ಸಲ್ಲಿಸಿದ್ದರು? ಅವರಿಗೆ ಭೂಮಿ ಪಡೆದುಕೊಳ್ಳಲು ಅರ್ಹತೆ ಇದೆಯೇ? ಸರ್ಕಾರ ನೀಡಿದ ಭೂಮಿ ಸದುಪಯೋಗವಾಗುವುದೇ ಎಂಬಿತ್ಯಾದಿ ವಿಚಾರಗಳನ್ನು ಪರಿಶೀಲಿಸಿದ ಬಳಿಕ ಭೂಮಿ ನೀಡಬೇಕೇ? ಬೇಡವೇ ಎಂಬುದನ್ನು ಸರ್ಕಾರ ನಿರ್ಧರಿಸಲಿದೆ.
ಅದೇ ರೀತಿ ದೇವಾಲಯಗಳಿಗೆ ನೀಡುವ ತ್ವಸ್ತಿಕ್ ಹಣ ದ್ವಿಗುಣ ಮಾಡಿರುವುದು, ಮಧ್ಯ ಕರ್ನಾಟಕ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ವಾಟರ್ ಗ್ರಿಡ್ ಕೆನಾಲ್ ಸ್ಥಾಪನೆ, ನವೀಕರಿಸಬಹುದಾದ ಇಂಧನಗಳ ಇಲಾಖೆ ಮೂಲಕ 500 ಮೆಗಾವ್ಯಾಟ್ ಸೌರವಿದ್ಯುತ್ ಉತ್ಪಾದಿಸಲು ಟೆಂಡರ್ ಕರೆಯಲು ಒಪ್ಪಿಗೆ ನೀಡಿದ ಬಿಜೆಪಿ ಸರ್ಕಾರದ ಸಂಪುಟ ತೀರ್ಮಾನವೂ ಮರುಪರಿಶೀಲನೆಗೆ ಒಳಪಡುವ ಸಾಧ್ಯತೆ ಇದೆ. ಬಿಜೆಪಿ ಸರ್ಕಾರದ ಕಡೆಯ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಮತ್ತು ಹೊಸ ನೀರಾವರಿ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿತ್ತು. ಈ ಯೋಜನೆಗಳನ್ನು ರದ್ದುಗೊಳಿಸದೇ ಇದ್ದರೂ ಟೆಂಡರ್ ಪ್ರಕ್ರಿಯೆಯಲ್ಲಿ ಮಾರ್ಪಾಡು ಮಾಡುವುದು, ಇಲ್ಲವೇ ಯೋಜನಾ ವೆಚ್ಚವನ್ನು ಮರುಪರಿಶೀಲಿಸಿ ನಂತರ ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸುತ್ತಿದೆ.
ಒಟ್ಟಿನಲ್ಲಿ ಬಿಜೆಪಿ ಸರ್ಕಾರ ತನ್ನ ಕೊನೆಯ ಅವಧಿಯಲ್ಲಿ ಕೈಗೊಂಡಿರುವ ನಿರ್ಧಾರಗಳಿಂದ ಸರ್ಕಾರಕ್ಕೆ ನಷ್ಟವಾಗುವುದಾದರೆ ಅಥವಾ ಜನ ಸಾಮಾನ್ಯರಿಗೆ ಅನುಕೂಲವಾಗದೆ ಮೂರನೇ ವ್ಯಕ್ತಿಗಳಿಗೆ ಲಾಭವಾಗುವುದಾದರೆ ಅಂತಹ ಎಲ್ಲಾ ಕಾರ್ಯಕ್ರಮಗಳು ರದ್ದುಗೊಳ್ಳುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement