ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಂತೂ ಡೈವೋರ್ಸ್

ಬಿಜೆಪಿ ಮತ್ತು ಜೆಡಿಯು ನಡುವಿನ 17 ವರ್ಷಗಳಷ್ಟು ಹಳೆಯ ದೋಸ್ತಿ ಕೊನೆಗೂ ಮುರಿದುಬಿದ್ದಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ...

Mainashree
Updated On : 17 Jun 2013, 1:04 am

ಪಟ್ನಾ: ಬಿಜೆಪಿ ಮತ್ತು ಜೆಡಿಯು ನಡುವಿನ 17 ವರ್ಷಗಳಷ್ಟು ಹಳೆಯ ದೋಸ್ತಿ ಕೊನೆಗೂ ಮುರಿದುಬಿದ್ದಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದನ್ನೇ ನೆಪ ಮಾಡಿಕೊಂಡು ಬಿಜೆಪಿಯಿಂದ ದೂರ ಸರಿಯುವ ನಿರ್ಧಾರಕ್ಕೆ ಬಂದಿದ್ದ ಜೆಡಿಯು ಭಾನುವಾರ ಬಿಜೆಪಿ ಜತೆಗಿನ ಸಖ್ಯ ಮುರಿಯುವ ನಿರ್ಧಾರ ಪ್ರಕಟಿಸಿದೆ.
ಈ ಮೂಲಕ ಹಳೆಯ ಮಿತ್ರನನ್ನು ಎನ್‌ಡಿಎ ಮೈತ್ರಿಕೂಟದಲ್ಲೇ ಉಳಿಸಬೇಕೆನ್ನುವ ಬಿಜೆಪಿ ನಾಯಕರ ಪ್ರಯತ್ನ ವಿಫಲವಾದಂತಾಗಿದೆ.
ಇದಕ್ಕೂ ಮೊದಲು ಮೈತ್ರಿ ಕುರಿತು ಪಕ್ಷದ ಮುಖಂಡರು, ಶಾಸಕರ ಜತೆ ನಿರ್ಣಾಯಕ ಸಭೆ ನಡೆಸಿದ ಬಳಿಕ ಜೆಡಿಯು ಅಧ್ಯಕ್ಷ ಶರದ್ ಯಾದವ್ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎಯಿಂದ ಹೊರನಡೆಯುವ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಎನ್‌ಡಿಎ ಸಂಚಾಲಕ ಸ್ಥಾನಕ್ಕೂ ಜೆಡಿಯು ಅಧ್ಯಕ್ಷ ಶರದ್ ಯಾದವ್ ರಾಜಿನಾಮೆ ನೀಡಿದ್ದಾರೆ. ಈ ನಡುವೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಪಾಲರನ್ನು ಭೇಟಿಯಾಗಿ 11 ಬಿಜೆಪಿ ಸಚಿವರನ್ನು ವಜಾ ಮಾಡುವಂತೆ ಮನವಿ ಮಾಡಿದ್ದಾರೆ. ಅದರಂತೆ ಬಿಜೆಪಿ ಬೆಂಬಲವಿಲ್ಲದೆ ಅಲ್ಪಮತಕ್ಕೆ ಕುಸಿಯುವ ನಿತೀಶ್ ಸರ್ಕಾರ ಜೂ.19ರಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಸವಾಲು ಎದುರಿಸಬೇಕಿದೆ.
ಮೋದಿ ಕಾರಣ: ಜೆಡಿಯು ವಿರೋಧದ ನಡುವೆಯೂ ಮೋದಿ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಿದ್ದು, ಪ್ರಧಾನಿ ಅಭ್ಯರ್ಥಿಯಂತೆ ಬಿಂಬಿಸಿದ್ದು ಬಿಜೆಪಿ ಜತೆಗಿನ ಸಖ್ಯ ತೊರೆಯಲು ಪ್ರಮುಖ ಕಾರಣ ಎಂದು ಜೆಡಿಯು ಆರೋಪಿಸಿದೆ. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದನ್ನು ಸಿಎಂ ನಿತೀಶ್ ಕುಮಾರ್ ವಿರೋಧಿಸುತ್ತಲೇ ಬಂದಿದ್ದರು. ಇಷ್ಟಾದರೂ ಬಿಜೆಪಿ ಗೋವಾ ಕಾರ್ಯಕಾರಿಣಿಯಲ್ಲಿ ಮೋದಿ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಿದ್ದು ನಿತೀಶ್ ಕುಮಾರ್ ಅವರಿಗೆ ಇರಸುಮುರುಸು ಉಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ಎನ್‌ಡಿಎಯಿಂದ ಹೊರಬರಲು ಜೆಡಿಯು ನಿರ್ಧರಿಸಿತು.
ಮಹಾ ಚುನಾವಣೆಗೆ ಒಂದೇ ವರ್ಷ ಬಾಕಿ ಇದೆ ಎನ್ನುವಾಗ ಎನ್‌ಡಿಎ ಮೈತ್ರಿಕೂಟದಿಂದ ಜೆಡಿಯು ಹೊರ ನಡೆದಿರುವುದು ಬಿಜೆಪಿ ಪಾಲಿಗೆ ಭಾರಿ ಹಿನ್ನಡೆಯಾಗಿದೆ. ಈ ನಡುವೆ, ಜೆಡಿಯು ವಿಶ್ವಾಸದ್ರೋಹವನ್ನು ಖಂಡಿಸಿ ಬಿಜೆಪಿಯು ಜೂ.18ರಂದು ಬಿಹಾರ ಬಂದ್‌ಗೆ ಕರೆ ನೀಡಿದೆ.

ಆತುರ ತಂದ ಎಡವಟ್ಟು!
ನವದೆಹಲಿ:
ಗುಜರಾತ್ ಸಿಎಂ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದೇ ಎನ್‌ಡಿಎ ಒಕ್ಕೂಟದಿಂದ ಜೆಡಿಯು ಹೊರ ಹೋಗಲು ಮುಖ್ಯ ಕಾರಣ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ. ಮೋದಿ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನಮಾನ ನೀಡುವ ವಿಚಾರದಲ್ಲಿ ಬಿಜೆಪಿ ಆತುರದ ನಿರ್ಧಾರ ತಳೆಯಬಾರದಿತ್ತು ಎಂದು ಆಡ್ವಾಣಿ ಅವರು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್‌ಗೆ ಹೇಳಿದ್ದಾರೆ.

4 ಸದಸ್ಯರ ಕೊರತೆ
ಬಿಜೆಪಿ ಜತೆಗಿನ ಮೈತ್ರಿ ಮುರಿಯುತ್ತಿದ್ದಂತೆ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾದರೆ ಜೆಡಿಯುಗೆ 4 ಶಾಸಕರ ಕೊರತೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಜೆಡಿಯು ಆರು ಮಂದಿ ಪಕ್ಷೇತರರ ಮನವೊಲಿಸುವ ಕಾರ್ಯ ಆರಂಭಿಸಿದೆ. ಮೂಲಗಳ ಪ್ರಕಾರ, ಆರು ಮಂದಿಯಲ್ಲಿ ನಾಲ್ಕು ಶಾಸಕರು ನಿತೀಶ್ ಸರ್ಕಾರಕ್ಕೆ ಬೆಂಬಲ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ. ಹೀಗಾಗಿ ನಿತೀಶ್‌ಕುಮಾರ್ ನೇತೃತ್ವದ ಸರ್ಕಾರ 19ರಂದು ನಡೆಯುವ ವಿಶ್ವಾಸ ಮತ ಕೇಳುವ ಸಂದರ್ಭರ್ದದಲ್ಲಿ ಗೆಲವು ಸಾಧಿಸುವುದು ನಿಶ್ಚಿತವಾಗಿದೆ.

6 ತಿಂಗಳ ಬೆಳವಣಿಗೆಗಳಿಂದ ತೀವ್ರ ನೋವಾಗಿದೆ. ಸದ್ಯ ಮೈತ್ರಿಕೂಟದಲ್ಲಿ ಮುಂದುವರಿಯಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ.
-ಶರದ್ ಯಾದವ್,
ಜೆಡಿಯು ಅಧ್ಯಕ್ಷ

ಬಿಜೆಪಿ ಬದಲಾವಣೆಯತ್ತ ಸಾಗುತ್ತಿದೆ. ನಾವು ಈ ಬದಲಾವಣೆಯನ್ನು ಒಪ್ಪಿಕೊಳ್ಳುವುದಿಲ್ಲ. ನಾವು ನಮ್ಮ ಪಕ್ಷ ಮೂಲ ತತ್ವಗಳ ಜತೆ ರಾಜಿಮಾಡಿಕೊಳ್ಳುವುದಿಲ್ಲ.
- ನಿತೀಶ್ ಕುಮಾರ್, ಬಿಹಾರ ಸಿಎಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement