ಪಾಸ್ ಕಡ್ಡಾಯ, ಸಿಸಿಇ ಹೊಸ ಅಧ್ಯಾಯ
ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ.16-
ಕಡ್ಡಾಯ ತೇರ್ಗಡೆ ನೀತಿ ಮತ್ತು ಸಮಗ್ರ ನಿರಂತರ ಮೌಲ್ಯಮಾಪನ (ಸಿಸಿಇ) ಪದ್ಧತಿಗೆ ಶಿಕ್ಷಕರ ವಿರೋಧ ಇದ್ದರೂ ಸರ್ಕಾರ ಎರಡೂ ಯೋಜನೆಗಳನ್ನು ಈ ವರ್ಷ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಜ್ಜಾಗಿದೆ.
ಈ ಕುರಿತು ಭಾರತ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ(ಎಂಎಚ್ಆರ್ಡಿ) ಕರೆದಿದ್ದ ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮತ್ತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಈ ವರ್ಷ ಎರಡು ವಿಷಯಗಳನ್ನು ಅನುಷ್ಠಾನಗೊಳಿಸಲು ಒಪ್ಪಿಗೆ ಸೂಚಿಸಿದೆ. ಎಂಎಚ್ಆರ್ಡಿ ಮೇ 31ರಂದು ನಡೆಸಿದ ಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಮತ್ತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶಕ ಎಚ್.ಎಸ್.ರಾಮರಾವ್ ಅವರು ಸಿಸಿಇ ಮತ್ತು ಕಡ್ಡಾಯ ತೇರ್ಗಡೆ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಬದ್ಧರಿದ್ದೇವೆ ಎಂದು ಹೇಳಿದ್ದಾರೆ.
ಈ ವರ್ಷದಿಂದ ಸಿಸಿಇ ಜಾರಿ ಮಾಡಲು ಶಿಕ್ಷಕರಿಗೆ ತರಬೇತಿ ಪ್ರಾರಂಭಿಸಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಮಾರ್ಗಸೂಚಿ ಪಡೆದುಕೊಳ್ಳಲಾಗಿದೆ. ತರಬೇತಿಯಲ್ಲಿ 'ಸಾಧನ ಪುಷ್ಠಿ' ಎಂಬ ಮಾಹಿತಿ ಪುಸ್ತಕವನ್ನು ನೀಡಲಾಗುವುದು. ಇದರಿಂದ ಸಿಸಿಇ ಸಮರ್ಪಕವಾಗಿ ಜಾರಿಮಾಡುವುದು ದೊಡ್ಡ ವಿಷಯ ಅಲ್ಲ ಎನ್ನುತ್ತಾರೆ ರಾಜ್ಯ ಶಿಕ್ಷಣ ಸಂಶೋಧನೆ, ತರಬೇತಿ ಇಲಾಖೆ ನಿರ್ದೇಶಕ ಎಚ್.ಎಸ್.ರಾಮರಾವ್.
ಶಿಕ್ಷಕರ ವಿರೋಧ: ಸಮಗ್ರ ನಿರಂತರ ಮೌಲ್ಯಮಾಪನ ಕಳೆದ ವರ್ಷದಿಂದ ಜಾರಿಯಲ್ಲಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಕಾರಣ, ಇದರಿಂದ ಶಿಕ್ಷಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ರಾಜ್ಯದಲ್ಲಿ ಸುಮಾರು 1.8 ಲಕ್ಷ ಶಿಕ್ಷಕರಿದ್ದು, ಪರೀಕ್ಷೆ ಮಾಡುವುದರ ಜತೆಗೆ ಪ್ರತಿ ವಿದ್ಯಾರ್ಥಿ ಬಗ್ಗೆ ಹೆಚ್ಚಿನ ಗಮನವಹಿಸುವುದು ಕಷ್ಟವಾಗುತ್ತದೆ ಎಂದು ಈ ಮೊದಲು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರ ಸಿಸಿಇ ಜಾರಿ ಮಾಡುವ ಮೊದಲು ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ ಮಾಡಿ ಆನಂತರ ಕ್ರಮಕೈಗೊಳ್ಳಲಿ ಎನ್ನುತ್ತಾರೆ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಗುರಿಕಾರ್.
ಸಂಸತ್ನಲ್ಲೂ ಚರ್ಚೆ: ಕಡ್ಡಾಯ ತೇರ್ಗಡೆ ನೀತಿ ಬಗ್ಗೆ ಸಂಸತ್ತಿನ ಸ್ಥಾಯಿ ಸಮಿತಿ ಎಂಎಚ್ಆರ್ಡಿ ಇಲಾಖೆಗೆ ಕೆಲವು ಅಂಶಗಳನ್ನು ವರದಿ ಮಾಡಿ ಈ ನೀತಿಯನ್ನು ಕೈ ಬಿಡುವಂತೆ ಒತ್ತಾಯಿಸಿತ್ತು. ಎಎಸ್ಇಆರ್ ವರದಿ ಪ್ರಕಾರ 2010ರಲ್ಲಿ 5ನೇ ತರಗತಿ ವಿದ್ಯಾರ್ಥಿಗಳ ಪೈಕಿ 2ನೇ ತರಗತಿ ಪುಸ್ತಕವನ್ನು ಓದಲು ಸಾಧ್ಯವಾಗದವರ ಪ್ರಮಾಣ ಶೇ.46.3ರಷ್ಟಿದೆ. ಇಂತಹ ಸಂದರ್ಭದಲ್ಲಿ ಕಡ್ಡಾಯ ತೇರ್ಗಡೆ ನೀತಿ ಅವಶ್ಯವಿಲ್ಲ ಎಂದು ಹೇಳಿತ್ತು.
ಏನಿದು ಸಿಸಿಇ ಮತ್ತು ನೀತಿ: ಆರ್ಟಿಇ ನಿಯಮಾವಳಿ ಕಾಲಂ 16ರಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದು ಹಾಗೂ ಹೊರಗಟ್ಟಲು ನಿಷೇಧ ಇರುವುದರಿಂದ 1-8ನೇ ತರಗತಿವರೆಗೂ ವಿದ್ಯಾರ್ಥಿಗಳನ್ನು ಅನುತೀರ್ಣಗೊಳಿಸಲು ಸಾಧ್ಯವಿರುವುದಿಲ್ಲ. ಕಾಲಂ 29(ಎಚ್) ಪ್ರಕಾರ ಮಗುವಿನ ಜ್ಞಾನ ಅರ್ಥೈಸಿಕೊಳ್ಳುವುದು ಮತ್ತು ಅರ್ಥೈಸಿಕೊಂಡಿದ್ದನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯಗಳ ಸಮಗ್ರ ಮತ್ತು ನಿರಂತರ ಮೌಲ್ಯಮಾಪನ ಮಾಡಬೇಕಿರುತ್ತದೆ. ಸಿಬಿಎಸ್ಇ ಮೊದಲ ಬಾರಿಗೆ ಈ ಪದ್ಧತಿ ಬಳಕೆ ತಂದಿತ್ತು.
ಸಿಸಿಇ ಜಾರಿ ಮಾಡುವ ಮೊದಲು ಸರ್ಕಾರ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿ ಆನಂತರದಲ್ಲಿ ಅನುಷ್ಠಾನ ಮಾಡಿದರೆ ಒಳ್ಳೆಯದು.
- ಬಸವರಾಜ್ ಗುರಿಕಾರ್, ಅಧ್ಯಕ್ಷ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಆರ್ಟಿಇನಲ್ಲಿ ಸಿಸಿಇ ಮತ್ತು ಕಡ್ಡಾಯ ತೇರ್ಗಡೆ ನೀತಿ ಇರುವುದರಿಂದ ಅದರ ಅನುಷ್ಠಾನ ನಮ್ಮ ಕರ್ತವ್ಯ. ಆರ್ಟಿಇ ರಾಜ್ಯದಲ್ಲಿ ಅನುಷ್ಠಾನಗೊಂಡು 2ನೇ ವರ್ಷ ಇದಾಗಿರುವುದರಿಂದ ಸ್ವಲ್ಪ ಕಷ್ಟ ಇದೆ.
- ಜಿ.ಕುಮಾರ್ ನಾಯಕ್, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ
- ದೇವರಾಜ್ ಎಲ್.