ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಂಡೀಪುರದಲ್ಲಿ ಬಿದಿರು ಬಿತ್ತನೆಗೆ ಚಿಂತನೆ

ಬಿದಿರು ಇಲ್ಲದೆ ಬರಿದಾಗುತ್ತಿರುವ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಬಿದಿರು ಬಿತ್ತನೆ ಮಾಡುವ ಬಗ್ಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ...

Mainashree
Updated On : 17 Jun 2013, 1:04 am

ಚಾಮರಾಜನಗರ: ಬಿದಿರು ಇಲ್ಲದೆ ಬರಿದಾಗುತ್ತಿರುವ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಬಿದಿರು ಬಿತ್ತನೆ ಮಾಡುವ ಬಗ್ಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
2011ರಲ್ಲಿ ಬಿದಿರು ಸತ್ತ ಪರಿಣಾಮ ಆನೆಗಳು ತತ್ತರಿಸಿ ಹೋಗಿವೆ. ಕಾಡಿನಲ್ಲಿ ಸಾಕಷ್ಟು ಮೇವಿಲ್ಲ. ಹಾಗಾಗಿ ಆನೆಗಳು ನಾಡಿನತ್ತ ಹೆಜ್ಜೆ ಹಾಕಿವೆ. ಇದನ್ನು ತಪ್ಪಿಸುವ ಸಲುವಾಗಿ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಬಿದಿರು ಬಿತ್ತನೆ ಮಾಡಲು ಅರಣ್ಯ ಇಲಾಖೆ ಮಳೆಗಾಗಿ ಕಾಯುತ್ತಿದೆ. ವರುಣ ಕೃಪೆ ತೋರಿದರೆ ಜುಲೈ ತಿಂಗಳಲ್ಲಿ ಬಿದಿರು ಬಿತ್ತನೆಯಾಗಲಿದೆ.
ಬಂಡೀಪುರ, ಬಿಆರ್‌ಟಿ, ಎಂಎಂ ಹಿಲ್ಸ್, ನಾಗರಹೊಳೆ, ಬನ್ನೇರುಘಟ್ಟ ಸೇರಿದಂತೆ ಪ್ರಮುಖ ಆನೆ ಕಾಡಿನಲ್ಲಿ ನಿರಂತರವಾಗಿ ಬಿದಿರು ಸಾಯುತ್ತ ಬಂದ ಪರಿಣಾಮ 2 ವರ್ಷದ ಅವಧಿಯಲ್ಲಿ ಬಿದಿರು ಸಂಪೂರ್ಣವಾಗಿ ನಶಿಸಿ ಹೋಗಿದೆ. ಬಹುತೇಕ ಅರಣ್ಯದಲ್ಲಿ ಒಣಗಿದ ಬಿದಿರಿನ ಬೊಂಬುಗಳನ್ನು ಮಾತ್ರ ಕಾಣಬಹುದು. ಕಳೆದ ಅವಧಿಗಳಲ್ಲಿ ಪ್ರಮುಖ ಅರಣ್ಯಗಳಲ್ಲಿ ವಾಡಿಕೆಯಷ್ಟು ಮಳೆಯಾಗದ ಪರಿಣಾಮ ಬಿದಿರು ಸತ್ತು ಉದುರಿದ ಅಕ್ಕಿಯಲ್ಲಿ ಜೊಳ್ಳು ಹೆಚ್ಚಾಯಿತು. ಉದುರಿದ ಅಕ್ಕಿ ಮೊಳೆಯೊಡೆಯಲು ಮಳೆಯಿಲ್ಲದೆ ಬಿದಿರು ನಶಿಸಿದ ಪ್ರಮಾಣದಲ್ಲಿ ಗಿಡಗಳು ಹುಟ್ಟಲಿಲ್ಲ. ಮುಂದಿನ ದಿನಗಳಲ್ಲಿ ಅರಣ್ಯದಲ್ಲಿ ಬಿದಿರು ಸಂಪೂರ್ಣವಾಗಿ ನಾಶವಾಗಬಹುದೆಂಬ ಮುನ್ನಚ್ಚರಿಕೆಯಿಂದ ಅರಣ್ಯ ಇಲಾಖೆ ಬಿದಿರು ಬಿತ್ತನೆಗೆ ಮುಂದಾಗಿದೆ.
1990ರಲ್ಲಿ ಏರೋಪ್ಲೇನ್ ಮೂಲಕ ಬಿತ್ತನೆ: ಈ ಹಿಂದೆ 1990ರಲ್ಲಿ ಏರೋಪ್ಲೇನ್ ಮೂಲಕ ಬಂಡೀಪುರ, ಬಿಆರ್‌ಟಿ ಅರಣ್ಯದಲ್ಲಿ ಬಿದಿರನ್ನು ಬಿತ್ತನೆ ಮಾಡಲಾಗಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಬಿದಿರು ಬೆಳೆ ಬರಲಿಲ್ಲ. ಆದ್ದರಿಂದ ಈ ಬಾರಿ ಅರಣ್ಯ ಇಲಾಖೆ ಸಿಬ್ಬಂದಿಯೇ ಬಿದಿರು ಬಿತ್ತನೆ ಮಾಡಲಿದ್ದಾರೆ. ಇದರಿಂದಾಗಿ ಖರ್ಚು ಕಡಿಮೆ. ಬಿತ್ತನೆ ಮಾಡಿದ ಬೀಜವೂ ಸಂಪೂರ್ಣವಾಗಿ ಮೊಳಕೆಯೊಡೆಯುತ್ತದೆ ಎಂಬುದು ತಜ್ಞರ ಲೆಕ್ಕಚಾರ.
ಬಿದಿರು ಏಕೆ ಸತ್ತಿತ್ತು?: ಪ್ರತಿ ಜೀವರಾಶಿಗೂ ಅಂತ್ಯ ಎಂಬುದು ಇರುತ್ತದೆ. ಅದರಂತೆ ಬಿದಿರಿಗೂ ಆಯಸ್ಸಿದೆ. ಅಂತೆಯೇ 40 ವರ್ಷಕ್ಕೊಮ್ಮೆ ಬಿದಿರು ಹೂ ಬಿಡುತ್ತದೆ. ಆ ಸಂದರ್ಭದಲ್ಲಿ ಬಿದಿರಿನ ಆಯಸ್ಸು ಮುಗಿದಿದೆ ಎಂದು ಅರ್ಥ. 2011ರಲ್ಲಿ ಬಂಡೀಪುರ, ನಾಗರಹೊಳೆ, ಬಿಆರ್‌ಟಿ ಸೇರಿದಂತೆ ಬಹುತೇಕ ಅರಣ್ಯದಲ್ಲಿ ಬಿದಿರು ಒಮ್ಮೆಗೆ ಹೂ ಬಿಟ್ಟ ಪರಿಣಾಮ ಕಳೆದ ಮೂರು ವರ್ಷದಲ್ಲಿ ಬಹುತೇಕ ಬಿದಿರು ಬೆಳೆದಿದ್ದ ಪ್ರದೇಶ ನಾಶವಾಗಿದೆ.
ಬಿದಿರೇ ಏಕೆ ಬೇಕು?: 2010ರ ಆನೆ ಗಣತಿ ಪ್ರಕಾರ ರಾಜ್ಯದಲ್ಲಿ 6,200 ಆನೆಗಳಿದ್ದು, ಇವುಗಳ ಹೊಟ್ಟೆ ತುಂಬಿಸುತ್ತಿದ್ದು ಬಿದಿರೇ. ನಿತ್ಯ ಸುಮಾರು 300ರಿಂದ 400 ಕೆ.ಜಿ. ಮೇವು ತಿನ್ನುವ ಆನೆಗಳು ಹೆಚ್ಚಾಗಿ ಇಷ್ಟ ಪಟ್ಟು ತಿನ್ನುವುದು ಬಿದಿರನ್ನೇ. ಬಿದಿರಿನಲ್ಲಿ ಪೌಷ್ಟಿಕಾಂಶವಿದ್ದು, ಆನೆಗಳ ದಣಿವನ್ನು ನಿವಾರಿಸುತ್ತದೆ. ಆದ್ದರಿಂದ ಆನೆಗಳಿಗೆ ಬಿದಿರು ಬೇಕೆ ಬೇಕು.
ಬಿದಿರು ಒಮ್ಮೆಗೆ ಹೂ ಬಿಟ್ಟ ಪರಿಣಾಮ ಬಿದಿರು ಸತ್ತು ಹೋಗಿದ್ದು, ಇದೀಗ ಬಿದಿರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬಂಡೀಪುರ ಹುಲಿ ರಕ್ಷಿತ  ಅರಣ್ಯದ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಬಿದಿರು ಬಿತ್ತನೆ ಮಾಡಲು ಚಿಂತನೆ ನಡೆಸಲಾಗಿದೆ.
- ಎಚ್.ಸಿ. ಕಾಂತರಾಜು, ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ ಹುಲಿ ರಕ್ಷಿತಾರಣ್ಯ.

- ದೇವರಾಜು ಕಪ್ಪಸೋಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement