ಕರ್ನಾಟಕ 'ಡಮ್ಮಿ' ಪ್ರಾಧಿಕಾರ
ಕ.ಪ್ರ. ವಾರ್ತೆ ಬೆಂಗಳೂರು ಜೂ.17
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ 'ಡಮ್ಮಿ' ಆಪ್ಶನ್ ಎಂಟ್ರಿ ಪ್ರಾರಂಭವಾಗಿದೆ!
ಆದರೆ ಜೂ.15ರ ರಾತ್ರಿಯಿಂದ ಆರಂಭವಾಗಿರುವ ಡಮ್ಮಿ ಆಪ್ಶನ್ ಎಂಟ್ರಿ ವಿದ್ಯಾರ್ಥಿಗಳನ್ನೇ ಅಣಕಿಸುವಂತಿದೆ. 'ದಿಸ್ ಸೈಟ್ ಈಸ್ ಡೌನ್ ಫಾರ್ ಮೆಂಟೇನನ್ಸ್' ಎಂಬ ಸಂದೇಶವು ಸೋಮವಾರ ಬೆಳಗಿನಿಂದ ಬರುತ್ತಿದೆ. ಇನ್ನು ಅಪ್ಪಿ ತಪ್ಪಿ ಪುಟ ತೆರೆದುಕೊಂಡರೆ 5 ನಿಮಿಷದೊಳಗೆ ಇದ್ದಕ್ಕಿದ್ದಂತೆ ವೆಬ್‌ಪುಟವು ಸೈನ್ ಔಟ್ ಆಗುತ್ತಿದೆ. ರಾಜ್ಯದಲ್ಲಿ ಅತ್ಯುತ್ತಮ ಅಂತರ್ಜಾಲ ಸೌಲಭ್ಯ ಹೊಂದಿರುವ ಬೆಂಗಳೂರಿನ ವಿದ್ಯಾರ್ಥಿಗಳ ಪರಿಸ್ಥಿತಿಯಿದು. ಇನ್ನೊಂದು ಆತಂಕಕಾರಿ ವಿಚಾರವೆಂದರೆ ಪ್ರಸಕ್ತ ಸಾಲಿನಲ್ಲಿ ನೈಜ ಆಪ್ಶನ್ ಎಂಟ್ರಿಗೆ ಇರುವುದು ಕೇವಲ 3 ದಿನಗಳು.
ಪ್ರಸಕ್ತ ಸಾಲಿನಲ್ಲಿ 1 ಲಕ್ಷಕ್ಕೂ ಅಧಿಕ ರ್ಯಾಂಕ್‌ಗಳನ್ನು ನೀಡಲಾಗಿದೆ. ಅಂದಾಜಿನ ಪ್ರಕಾರ 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಆಪ್ಶನ್ ಎಂಟ್ರಿ ಮಾಡಲಿದ್ದಾರೆ. ಪ್ರಾರಂಭಿಕ ದಿನಗಳಲ್ಲಿಯೇ ಅಣಕು ಆಪ್ಶನ್ ಎಂಟ್ರಿ ಮಾಡುವುದೇ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ.
ಹೀಗಿರುವಾಗ ನೈಟ್ ಆಪ್ಶನ್ ಎಂಟ್ರಿ ಸಂದರ್ಭದಲ್ಲಿ ಕೊನೆಯ 3 ದಿನಗಳಿರುವಾಗ ಪ್ರಾಧಿಕಾರ ಅಂತರ್ಜಾಲದ ಒತ್ತಡವನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ಅರ್ಥವಾಗುತ್ತಿಲ್ಲ. ಮತ್ತೊಂದೆಡೆ ಯಾವ ಪುರುಷಾರ್ಥಕ್ಕೆ ಆಪ್ಶನ್ ಎಂಟ್ರಿಗೆ ಕೇವಲ 3 ದಿನಗಳ ಅವಕಾಶ ನೀಡಿ ವಿದ್ಯಾರ್ಥಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎನ್ನುವುದಕ್ಕೆ ಪ್ರಾಧಿಕಾರವೇ ಉತ್ತರಿಸಬೇಕು. ರಾಜ್ಯದ ಎಲ್ಲ 1 ಲಕ್ಷ ವಿದ್ಯಾರ್ಥಿಗಳು ಮನೆಯಲ್ಲಿಯೇ ಅಂತರ್ಜಾಲ ಸೌಲಭ್ಯ ಹೊಂದಿಲ್ಲ ಎನ್ನುವುದನ್ನು ಇಲಾಖೆ ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು.
ಕಾರ್ಯಮರೆತ ಪ್ರಾಧಿಕಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕ ಚಕ್ರವರ್ತಿ ಮೋಹನ್ ಅವರು ಕಳೆದ ಮೇ 27ರಂದು ನೀಡಿರುವ ಹೇಳಿಕೆ ಪ್ರಕಾರ ಜೂ.15ರಿಂದ ಜೂ.26ರವರೆಗೆ 12 ದಿನಗಳ ಕಾಲ ಆಪ್ಶನ್ ಎಂಟ್ರಿ ಪ್ರಕ್ರಿಯೆ ನಡೆಯಲಿದೆ. ಆದರೆ ಪ್ರಸ್ತುತ ನಡೆಯುತ್ತಿರುವ ಪ್ರಕ್ರಿಯೆ ಪ್ರಕಾರ ಜೂ.24ರಿಂದ 26ವರೆಗೆ ಮಾತ್ರ ಆಪ್ಶನ್ ಎಂಟ್ರಿಗೆ ಅವಕಾಶವಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಸೀಟ್ ಮ್ಯಾಟ್ರಿಕ್ಸ್ ಬರದಿರುವುದು ಈ ವಿಳಂಬಕ್ಕೆ ಕಾರಣ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಾರೆ. ಕಳೆದ ಬಾರಿ 80 ಸಾವಿರ ರ್ಯಾಂಕ್‌ಗಳನ್ನು ಮಾತ್ರ ನೀಡಲಾಗಿತ್ತು. ಈ ಬಾರಿ ಸುಮಾರು 20 ಸಾವಿರಕ್ಕೂ ಅಧಿಕ ರ್ಯಾಂಕ್ ಇರುವುದರಿಂದ ಆಪ್ಶನ್ ಎಂಟ್ರಿಗೆ ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ಕಳೆದ ಬಾರಿ ಪ್ರಾಥಮಿಕ ಆಪ್ಶನ್ ಎಂಟ್ರಿಗೆ ಜು.12ರಿಂದ ಜು.18ರವರೆಗೆ ಅವಕಾಶ ನೀಡಲಾಗಿತ್ತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಪಾಲಕರು ಆಪ್ಶನ್ ಎಂಟ್ರಿ ಕಾಲಾವಕಾಶವನ್ನು ಹೆಚ್ಚಿಸಬೇಕೆಂದು ಮನವಿ ಮಾಡುತ್ತಿದ್ದಾರೆ.
ಅಣಕು ಎಂಟ್ರಿ ಕೂಡ ಸಾಧ್ಯವಾಗುತ್ತಿಲ್ಲ: ಕಳೆದ ಜೂ.15ರ ರಾತ್ರಿಯಿಂದ ಅಣಕು ಆಪ್ಶನ್ ಎಂಟ್ರಿ ಪ್ರಾರಂಭವಾಗಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ಆಪ್ಶನ್ ಎಂಟ್ರಿ ಮಾಡಲು ಸಾಧ್ಯವಾಗುತ್ತಲೇ ಇಲ್ಲ. ಅಂತರ್ಜಾಲದ ಮೇಲೆ ಒತ್ತಡ ಹೆಚ್ಚಿದ್ದಾಗ ವೆಬ್‌ಪುಟವೇ ಸಿಗುವುದಿಲ್ಲ. ಇನ್ನುಳಿದ ಸಂದರ್ಭದಲ್ಲಿ 5 ನಿಮಿಷಕ್ಕಿಂತ ಹೆಚ್ಚು ಆಪ್ಶನ್ ಎಂಟ್ರಿ ಮಾಡಲಾಗುತ್ತಿಲ್ಲ. ಇದ್ದಕ್ಕಿದ್ದಂತೆ ಸೈನ್ ಔಟ್ ಆಗಿ ಮಾಡಿರುವ ಆಪ್ಶನ್ ಎಂಟ್ರಿಗಳೆಲ್ಲಾ ಅಳಿಸಿ ಹೋಗುತ್ತವೆ.
ಅಂತಿಮ ಹಂತದ ಆಪ್ಶನ್ ಎಂಟ್ರಿಗೆ ಮುಂಚೆ ತಾಂತ್ರಿಕ ಸಮಸ್ಯೆಗಳನ್ನು ಪ್ರಾಧಿಕಾರದ ಅಧಿಕಾರಿಗಳು ಸರಿಪಡಿಸದಿದ್ದರೆ ವಿದ್ಯಾರ್ಥಿಗಳು ಹಾಗೂ ಪಾಲಕರ ಶಾಪಕ್ಕೆ ತುತ್ತಾಗಬೇಕಾಗುತ್ತದೆ. ಮತ್ತೊಂದೆಡೆ ಪ್ರಾಧಿಕಾರಕ್ಕೆ ಮೊದಲ ದಿನಗಳಲ್ಲಿ ದಾಖಲೆ ಪರಿಶೀಲನೆಗೆ ಬಂದ ವಿದ್ಯಾರ್ಥಿಗಳಿಗೆ ಜೂ.15ರಿಂದ ಆಪ್ಶನ್ ಎಂಟ್ರಿ ಎಂದು ಹೇಳಿದ್ದರು. ಆದರೆ ಈಗ ಅಣಕು ಎಂಟ್ರಿ ದೊರೆಯುತ್ತಿರುವದರಿಂದಲೂ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ವೆಬ್‌ಪುಟದ ತಾಂತ್ರಿಕ ಸಮಸ್ಯೆಯ ಬಗ್ಗೆ ನನಗೆ ಗೊತ್ತಿಲ್ಲ, ಪರಿಶೀಲನೆ ಮಾಡುತ್ತೇನೆ. ಆಪ್ಶನ್ ಎಂಟ್ರಿ ಕಾಲಾವಕಾಶವನ್ನು ಹೆಚ್ಚಿಸುವ ಬಗ್ಗೆ ಪ್ರಾಧಿಕಾರವು ಸಧ್ಯದಲ್ಲಿಯೇ ತನ್ನ ನಿರ್ಧಾರ ತಿಳಿಸಲಿದೆ.
- ಎಸ್.ಪಿ. ಕುಲಕರ್ಣಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ
ರಾಜೀವ ಹೆಗಡೆ