ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಲ್ಪಸಂಖ್ಯಾತ ಪ್ರೀತಿ 'ಕೈ' ಬಿಡದ ಸರ್ಕಾರ

Mainashree
Updated On : 18 Jun 2013, 10:13 am

ಬೆಂಗಳೂರು: ರಾಜ್ಯದಲ್ಲಿನ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತ ಕಾಲೇಜುಗಳಿಗೆ ಮೂಗುದಾರ ಹಾಕಲು ಸರ್ಕಾರ ಮತ್ತೆ ವಿಫಲವಾಗಿದೆ.
ಹಿಂದಿನ ಸರ್ಕಾರಗಳ ಅಕ್ರಮಗಳಿಗೆ ಅಂತ್ಯ ಹಾಡುತ್ತೇವೆ ಎಂದು ಬೀಗಿಕೊಳ್ಳುತ್ತಿರುವ ಹಾಲಿ ಮಂತ್ರಿಗಳು ಈ ವ್ಯವಸ್ಥೆಯನ್ನು ಸರಿದೂಗಿಸುವ ಬಗ್ಗೆ ಯಾವುದೇ ಪ್ರಯತ್ನ ಮಾಡಿಲ್ಲ. ಸೀಟು ಹಂಚಿಕೆಯಲ್ಲಿನ ಅಸಮತೋಲನ, ಕಳೆದ ವರ್ಷಗಳ ಅಕ್ರಮ ಹಾಗೂ ಒಪ್ಪಂದಗಳಲ್ಲಿನ ನ್ಯೂನ್ಯತೆಗಳನ್ನು ಹಾಗೆಯೇ ಮುಂದುವರಿಸಿಕೊಂಡು 2013- 14ನೇ ಶೈಕ್ಷಣಿಕ ಸಾಲಿನ ಒಪ್ಪಂದಕ್ಕೂ ಸಹಿ ಹಾಕಲು ರಾಜ್ಯ ಸರ್ಕಾರ ತರಾತುರಿಯ ಪ್ರಯತ್ನ ಮುಂದುವರಿಸಿದೆ.
ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಯಾವುದೇ ಪಾರದರ್ಶಕ ವ್ಯವಸ್ಥೆಯಿಲ್ಲ, ಸರ್ಕಾರಕ್ಕೆ ವಾಪಸ್ ಮಾಡಬೇಕಿದ್ದ 180ಕ್ಕೂ ಅಧಿಕ ಸೀಟುಗಳನ್ನು ವೈದ್ಯಕೀಯ ಕಾಲೇಜುಗಳು ನೀಡಿಲ್ಲ, ಸೀಟು ಹಂಚಿಕೆಗೆ ಸಂಬಂಧಿಸಿ ಏಕರೂಪ ವ್ಯವಸ್ಥೆಯೂ ಇಲ್ಲ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ವೃತ್ತಿಪರ ಮಹಾವಿದ್ಯಾಲಯಗಳ ಪ್ರವೇಶ ಮೇಲ್ವಿಚಾರಣೆ ಸಮಿತಿಯು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ಅದ್ಯಾವುದರ ಬಗೆಗೂ ಗಮನ ನೀಡದೇ ರಾಜ್ಯ ಸರ್ಕಾರವು ತನ್ನ 'ಅಲ್ಪಸಂಖ್ಯಾತ' ಪ್ರೀತಿಯನ್ನು ತೋರಿಸುತ್ತಿದೆ.
ವರದಿಯಲ್ಲೇನಿತ್ತು?: ರಾಜ್ಯದಲ್ಲಿ 16 ಎಂಜಿನಿಯರಿಂಗ್, 10 ದಂತವೈದ್ಯ ಹಾಗೂ 10 ವೈದ್ಯ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳು ರಾಜ್ಯದಲ್ಲಿವೆ. ನಿಯಮಾವಳಿ ಪ್ರಕಾರ ಎಲ್ಲ ಕಾಲೇಜುಗಳು ಶೇ.66ರಷ್ಟು ಸೀಟುಗಳನ್ನು ಅಲ್ಪಸಂಖ್ಯಾತ ಮಾನ್ಯತೆಯನ್ನು ಯಾವ ಆಧಾರದಲ್ಲಿ ಪಡೆಯಲಾಗಿದೆಯೋ ಅದೇ ಸಮುದಾಯದವರಿಗೆ ನೀಡಬೇಕು.
ಇದಲ್ಲದೇ ಆ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಸೇರಿರಬೇಕು. ಒಂದೊಮ್ಮೆ ಈ ನಿಯಮಗಳನ್ನು ಮುರಿದರೆ ಅಲ್ಪಸಂಖ್ಯಾತ ಸಂಸ್ಥೆ ಎಂಬ ಮಾನ್ಯತೆಯನ್ನು ರದ್ದುಪಡಿಸುವ ಅಧಿಕಾರ ಸರ್ಕಾರಕ್ಕಿರುತ್ತದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಹಾಗೂ ಹಿಂದಿನ ಸರ್ಕಾರಗಳ ಅಕ್ರಮದಿಂದ ಒಂದೊಂದು ಕಾಲೇಜಿಗೂ ಪ್ರತ್ಯೇಕ ಒಪ್ಪಂದ ಮಾಡಿಕೊಡಲಾಗಿದೆ. ಎಲ್ಲ ಕಾಲೇಜುಗಳ ಸೀಟು ಹಂಚಿಕೆಯು ಏಕರೂಪವಾಗಿಲ್ಲ, ಬದಲಾಗಿ ಶೇ.35ರಿಂದ ಶೇ.66ರವರೆಗೆ ವ್ಯತ್ಯಾಸವಿದೆ.
ಪ್ರೊ.ವೆಂಕಟರಾಮಯ್ಯ ಅವರ ವರದಿ ಹೇಳುವ ಪ್ರಕಾರ ವೈದ್ಯಕೀಯ ವೃತ್ತಿಪರ ಕಾಲೇಜುಗಳು ಸುಮಾರು 180 ಸೀಟುಗಳನ್ನು ಸರ್ಕಾರಕ್ಕೆ ನೀಡದೆ ಲಾಭ ಗಳಿಸಿವೆ. ಇದಲ್ಲದೇ ಕೆಲವು ಕಾಲೇಜುಗಳು ಶೇ.25ರಷ್ಟು ಮಾತ್ರ ಸೀಟುಗಳನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಿವೆ.
ಮತ್ತೊಂದೆಡೆ ಬೆಂಗಳೂರು ಹಾಗೂ ಮಂಗಳೂರಿನ ಕೆಲ ಕಾಲೇಜುಗಳು ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಅಲ್ಪಸಂಖ್ಯಾತ ಕೋಟಾದಡಿ ಸೇರಿಸಿಕೊಳ್ಳುತ್ತಿವೆ. ಇವೆಲ್ಲದರ ಸಂಪೂರ್ಣ ಇತಿಹಾಸವನ್ನು ಸರ್ಕಾರ ಕೆದಕಿದರೆ ದೊಡ್ಡ ಕರ್ಮಕಾಂಡವೇ ಹೊರಬೀಳಲಿದೆ. ರಾಜ್ಯದಲ್ಲಿನ ಅಲ್ಪಸಂಖ್ಯಾತ ಕಾಲೇಜುಗಳ ಒಪ್ಪಂದದ ಪ್ರತಿ ಇರಿಸಿಕೊಂಡು ಕೋಟೆಯನ್ನು ಕಟ್ಟಿಕೊಂಡಿವೆ.
ಹೊಸ ಸರ್ಕಾರವೂ ವಿಫಲ: ಈ ಅಕ್ರಮದ ಬಗ್ಗೆ ನೂತನ ಉನ್ನತ ಶಿಕ್ಷಣ ಸಚಿವರಾದ ಆರ್.ವಿ. ದೇಶಪಾಂಡೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಗಮನಕ್ಕೆ ಬಂದಿದೆ. ಹಿಂದಿನ ಸರ್ಕಾರಗಳು ಏಕರೂಪ ಮೀಸಲು ಪ್ರಕ್ರಿಯೆ ತರದಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಕುರಿತಂತೆ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಪಾಟೀಲ್ ಅವರು ಹೇಳಿದ್ದರು.
ಆದರೆ ಅದೇ ಒಪ್ಪಂದವನ್ನು ಮುಂದುವರಿಸಿಕೊಂಡು ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲು ಸರ್ಕಾರ ಈಗ ಮುಂದಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ. ಅಲ್ಪಸಂಖ್ಯಾತ ಕಾಲೇಜುಗಳ ಅಕ್ರಮಕ್ಕೆ ಮೂಗುದಾರ ಹಾಕಲು ಹೊಸ ಸರ್ಕಾರವೂ ವಿಫಲವಾದಂತಾಗಿದೆ.
ಅದರಲ್ಲೂ ವೈದ್ಯಕೀಯ ಸೀಟುಗಳಿಗೆ ವಿದ್ಯಾರ್ಥಿಗಳು ರಾಜ್ಯದಲ್ಲಿ ಕಷ್ಟಪಡುತ್ತಿದ್ದಾರೆ. ಪ್ರಸ್ತುತ ಲಭ್ಯವಿರುವ ಸೀಟುಗಳಲ್ಲಿ ಶೇ.10ಕ್ಕೂ ಹೆಚ್ಚು ಸೀಟುಗಳನ್ನು ಈ ಅಲ್ಪಸಂಖ್ಯಾತ ಕಾಲೇಜುಗಳು ಅಕ್ರಮವಾಗಿ ಪ್ರವೇಶ ನೀಡುತ್ತಿವೆ.
ಕಳೆದ 2006ರಿಂದ ತಡೆಹಿಡಿಯಲ್ಪಟ್ಟಿರುವ ವೃತ್ತಿಪರ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯಿದೆಯಲ್ಲೂ ಶೇ.66ರಷ್ಟು ಸೀಟುಗಳನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಹೇಳಲಾಗಿದೆ.

 ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement