ಟೆಟ್ರಾ ಪ್ಯಾಕೇಟ್ಟೊ...? ಹಾಲು ಉತ್ಪಾದಕ ಸಂಘವೊ..?
ಬೆಂಗಳೂರು: ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಹಾಲನ್ನು ಟೆಟ್ರಾ ಪ್ಯಾಕೇಟ್ಗಳಲ್ಲಿ ಪೂರೈಕೆ ಮಾಡಬೇಕೋ ಅಥವಾ ಹಾಲು ಉತ್ಪಾದಕ ಸಂಘಗಳ ಮೂಲಕ ನೇರವಾಗಿ ತಲುಪಿಸಬೇಕೋ ಎಂಬ ವಿಚಾರದಲ್ಲಿ ರಾಜ್ಯ ಸರ್ಕಾರ ಈಗ ಗೊಂದಲಕ್ಕೆ ಬಿದ್ದಿದೆ. ಹಾಲಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನಿಗದಿ ಮಾಡಿದ ನಂತರ ಪ್ರತಿ ತಿಂಗಳು 54 ಲಕ್ಷ ಲೀಟರ್ ಹಾಲು ಉತ್ಪತ್ತಿಯಾಗುತ್ತಿದೆ. ಈ ಪೈಕಿ 30 ಲಕ್ಷ ಲೀಟರ್ ಹಾಲಿಗೆ ಮಾತ್ರ ಬೇಡಿಕೆ ಇದೆ. 10 ಲಕ್ಷ ಲೀಟರ್ ಹಾಲನ್ನು ಪರಿವರ್ತನೆ ಮಾಡಲು ಅವಕಾಶವಿದ್ದು, ಇನ್ನುಳಿದ 10 ಲಕ್ಷ ಲೀಟರ್ ಹಾಲನ್ನು ಶಾಲಾ ಮಕ್ಕಳಿಗೆ ಪೂರೈಕೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಹಾಲನ್ನು ಟೆಟ್ರಾ ಪ್ಯಾಕೇಟ್ ರೂಪದಲ್ಲಿ ಪೂರೈಕೆ ಮಾಡುವುದಕ್ಕೆ ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರೆ ಒಂದು ಟೆಟ್ರಾ ಪ್ಯಾಕೇಟ್ ತಯಾರಿಸುವುದಕ್ಕೇ 8 ವೆಚ್ಚವಾಗುತ್ತದೆ. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿರುವ ಕಾನೂನು ಮತ್ತು ಪಶು ಸಂಗೋಪನೆ ಇಲಾಖೆ ಸಚಿವ ಟಿ.ಬಿ.ಜಯಚಂದ್ರ, ಟೆಟ್ರಾ ಪ್ಯಾಕೇಟ್ನಲ್ಲಿ ಹಾಲು ಪೂರೈಕೆ ಮಾಡುವುದರಿಂದ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಾಲೆಯಲ್ಲೇ ಬಿಸಿ ಮಾಡಿ ಕೊಡಲು ಚಿಂತನೆ: ಉತ್ಪಾದನೆಯಾದ ಹಾಲು ಸಾಮಾನ್ಯವಾಗಿ ಬೆಳಗ್ಗೆ 6 ಗಂಟೆ ಹೊತ್ತಿಗೆ ಸಂಘಗಳಿಗೆ ತಲುಪುತ್ತದೆ. ಶಾಲೆಗಳಲ್ಲಿ ತರಗತಿ ಆರಂಭವಾಗುವುದು 9 ಗಂಟೆಗೆ. ಹೀಗಾಗಿ ಪೂರೈಕೆಯಾದ ಹಾಲನ್ನು ಶಾಲೆಯಲ್ಲೇ ಬಿಸಿ ಮಾಡಿ ಮಕ್ಕಳಿಗೆ ಕೊಡಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.