ಶಂಕಿತ ಡೆಂಘೀಗೆ ಮೂವರು ಬಲಿ
ರಾಯಚೂರು/ಚಿಕ್ಕಮಗಳೂರು: ರಾಜ್ಯದಲ್ಲಿ ಶಂಕಿತ ಡೆಂಘೀ ಜ್ವರದಿಂದಾಗಿ ಮಂಗಳವಾರ 2 ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ರಾಯಚೂರು ತಾಲೂಕಿನ ತುಂಗಭದ್ರಾ ಗ್ರಾಮದ ಶ್ರುತಿ ಹನುಮಂತ(14) ಮತ್ತು ಲಿಂಗಸ್ಗೂರು ತಾಲೂಕಿನ ನಿಲೋಗಲ್ ಗ್ರಾಮದ ಚೆನ್ನಬಸವ ಎಂದು ಗುರುತಿಸಲಾಗಿದೆ. ತುಂಗಭದ್ರಾ ಗ್ರಾಮದ ಶ್ರುತಿ ತೀವ್ರ ಜ್ವರದಿಂದ ಬಳಲಿದ್ದರಿಂದ ಈಚೆಗೆ ಬಳ್ಳಾರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆಂದು ಕುಟುಂಬದ ಮೂಲಗಳು ತಿಳಿಸಿವೆ. ಅದೇ ರೀತಿ ಲಿಂಗಸ್ಗೂರು ತಾಲೂಕಿನ ನಿಲೋಗಲ್ ಗ್ರಾಮದ ಬಾಲಕ ಚೆನ್ನಬಸವ ಎಂಬಾತ ಸಹ ತೀವ್ರ ಜ್ವರದಿಂದ ಬಳಲಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾನೆಂದು ಮೂಲಗಳು ತಿಳಿಸಿವೆ.
ನವ ವಿವಾಹಿತ ಬಲಿ: 20 ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಗ್ರಾಮದ ಲಕ್ಷ್ಮಣ್ ಎಂಬಾತ ಡೆಂಘೀ ಜ್ವರದಿಂದ ಮೃತಪಟ್ಟಿದ್ದಾನೆ. ಹಿಂದೆ ಜ್ವರ ಕಾಣಿಸಿಕೊಂಡಿತ್ತು. ನಿಡಘಟ್ಟ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಜ್ವರ ಉಲ್ಬಣ ಗೊಂಡಿದ್ದರಿಂದ ಬೆಂಗಳೂರಿಗೆ ಕರೆದೊಹೋಗುವಾಗಲೇ ಮೃತಪಟ್ಟಿದ್ದಾನೆ.