ನಿತೀಶ್ ಕೈ ಬಲ
ನಿರೀಕ್ಷೆ ನಿಜವಾಗಿದೆ. ಬಿಹಾರದಲ್ಲಿ 17 ವರ್ಷಗಳ ಬಿಜೆಪಿ ಸಖ್ಯ ಕಡಿದುಕೊಂಡ ನಿತೀಶ್‌ಕುಮಾರ್ ನೇತೃತ್ವದ ಜೆಡಿಯು ಸರ್ಕಾರ...
ಪಟನಾ: ನಿರೀಕ್ಷೆ ನಿಜವಾಗಿದೆ. ಬಿಹಾರದಲ್ಲಿ 17 ವರ್ಷಗಳ ಬಿಜೆಪಿ ಸಖ್ಯ ಕಡಿದುಕೊಂಡ ನಿತೀಶ್‌ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಬುಧವಾರ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸಿದೆ. ನಿತೀಶ್‌ಕುಮಾರ್ ನೇತೃತ್ವದ ಸರ್ಕಾರದ ಪರವಾಗಿ ಒಟ್ಟು 126 ಮತಗಳು ಪ್ರಾಪ್ತಿಯಾಗಿವೆ.
ಅತ್ಯಂತ ಅಚ್ಚರಿಯ ಬೆಳವಣಿಗೆಯೆಂದರೆ ಕಾಂಗ್ರೆಸ್‌ನ ನಾಲ್ವರು ಶಾಸಕರು ಜೆಡಿಯು ಪರವಾಗಿ ಮತ ಹಾಕಿದ್ದು. ಮಂಗಳವಾರವಷ್ಟೇ ಕಾಂಗ್ರೆಸ್ ಶಾಸಕರು ವಿಶ್ವಾಸಮತ ಯಾಚನೆ ವೇಳೆ ಸದನದಿಂದ ಹೊರ ನಡೆಯುವುದಾಗಿ ಪ್ರಕಟಿಸಿದ್ದರು. ಏಕೈಕ ಸಿಪಿಎಂ ಶಾಸಕ ನಿತೀಶ್ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಲೋಕಜನಶಕ್ತಿ ಪಕ್ಷದ ಶಾಸಕ ಗೈರುಹಾಜರಾಗಿದ್ದರು. ಆರ್‌ಜೆಡಿಯ 22 ಮಂದಿ ಮತ್ತು ಇಬ್ಬರು ಪಕ್ಷೇತರ ಶಾಸಕರು ಸರ್ಕಾರದ ವಿರುದ್ಧ ಮತ ಹಾಕಿದ್ದಾರೆ.
ಮೋದಿ ಮಾದರಿಗೆ ಟೀಕೆ: ವಿಧಾನಸಭೆಯಲ್ಲಿ ವಿಶ್ವಾಸಮತ ಕೋರಿ ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ನಿತೀಶ್‌ಕುಮಾರ್ 'ಗುಜರಾತ್ ಮಾದರಿ ಅಭಿವೃದ್ಧಿ' ಎಂಬ ಹೇಳಿಕೆಯನ್ನೇ ಪ್ರಶ್ನಿಸಿದರು. ಗುಜರಾತ್ ಮುಖ್ಯಮಂತ್ರಿಯನ್ನು ಉನ್ನತ ಸ್ಥಾನಕ್ಕೆ ಏರಿಸಿದ್ದೇ ಬಿಜೆಪಿ ಜತೆ ಮೈತ್ರಿ ಮುರಿಯಲು ಕಾರಣ ಎಂದರು. ಬಿಜೆಪಿ ವಿರುದ್ಧ ವಾಕ್ಪ್ರಹಾರ ನಡೆಸಿದ ನಿತೀಶ್ 'ಸಮಾಜವನ್ನು ವಿಭಜಿಸುವ ತತ್ವ ಹೊಂದಿರುವವರಿಂದ ಬಿಹಾರ ಮತ್ತು ದೇಶವನ್ನು ಆಳಲು ಸಾಧ್ಯವಿಲ್ಲ. ಜಾತ್ಯತೀತ ತತ್ವದಲ್ಲಿ ಯಾವುದೇ ರಾಜಿಯನ್ನು ಜೆಡಿಯು ಮಾಡಿಕೊಳ್ಳಲು ಸಿದ್ಧವಿಲ್ಲ' ಎಂದರು.