ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೃಷ್ಣೆಗೆ ಪ್ರವಾಹ ಭೀತಿ

ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ಹಾಗೂ ಅದರ ಉಪ ನದಿಗಳಲ್ಲಿನ...

Mainashree
Updated On : 21 Jun 2013, 1:09 am

ಜಮಖಂಡಿ: ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ಹಾಗೂ ಅದರ ಉಪ ನದಿಗಳಲ್ಲಿನ ಒಳ ಹರಿವು ಹೆಚ್ಚಾಗುತ್ತಿದೆ. ಅಲ್ಲದೆ ಪ್ರವಾಹ ಭೀತಿ ಎದುರಾಗುವ ಸಂಭವವಿದ್ದು, ತಾಲೂಕಿನ  ಕೃಷ್ಣಾ ನದಿ ತೀರದ 27 ಗ್ರಾಮಗಳ ಗ್ರಾಮಸ್ಥರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಉಪವಿಭಾಗಾಧಿಕಾರಿ ಅಶೋಕ ದುಡದುಂಟಿ ಸೂಚಿಸಿದ್ದಾರೆ.
ಗುರುವಾರ ಬೆಳಗ್ಗೆ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಸುಮಾರು 519.95 ಮೀ. ನೀರು ಸಂಗ್ರಹವಾಗಿದ್ದು, 35 ಸಾವಿರ ಕ್ಯುಸೆಕ್ ಒಳ ಹರಿವಿದೆ. ಈ ಎಲ್ಲ ನೀರನ್ನೂ ಹೊರ ಬಿಡಲಾಗುತ್ತಿದೆ. ಹಿಪ್ಪರಗಿ ಬ್ಯಾರೇಜ್‌ನಲ್ಲಿ ಗರಿಷ್ಠ 524.87 ಮೀ. ನೀರು ಸಂಗ್ರಹಿಸಬಹುದು. ಗುರುವಾರ ತಾಲೂಕಿನ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನೀರಿಕ್ಷಕರು, ಪಿಡಿಒ, ಗ್ರಾಮ ಸೇವಕರ ಸಭೆ ಕರೆಯಲಾಗಿತ್ತು. ಕೃಷ್ಣಾ ನದಿಗೆ ಪ್ರವಾಹ ಬರುವ ಸಾಧ್ಯತೆ ಇರುವ ಬಗ್ಗೆ ಆಯಾ ಗ್ರಾಮಗಳಲ್ಲಿ ಡಂಗುರ ಸಾರುವಂತೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಆರ್.ವಿ. ಕಟ್ಟಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಜಮಖಂಡಿ ಹೋಬಳಿಯಲ್ಲಿ 9, ಸಾವಳಗಿ ಹೋಬಳಿಯಲ್ಲಿ 11 ಮತ್ತು ತೇರದಾಳ ಹೋಬಳಿಯಲ್ಲಿ 7 ಹೀಗೆ 27 ಹಳ್ಳಿಗಳು ನದಿ ತೀರದಲ್ಲಿದ್ದು, ನದಿ ಪಾತ್ರದ ಗ್ರಾಮಸ್ಥರು ಎಚ್ಚರದಿಂದಿರಬೇಕು ಎಂದು ಅವರು ತಿಳಿಸಿದ್ದಾರೆ.

ಆಲಮಟ್ಟಿ ಒಳಹರಿವು ಹೆಚ್ಚಳ: ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಸವನ ಬಾಗೇವಾಡಿ ತಾಲೂಕಿನಲ್ಲಿರುವ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲೂ ಹೆಚ್ಚಳ ಉಂಟಾಗಿದೆ. 519.5 ಮೀ. ಗರಿಷ್ಠ ಮಟ್ಟದ ಆಲಮಟ್ಟಿ ಜಲಾಶಯದಲ್ಲಿ ಗುರುವಾರ 508.20 ಮೀ. ನೀರು ಸಂಗ್ರಹವಾಗಿತ್ತು. ಜಲಾಶಯಕ್ಕೆ 25133 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಬುಧವಾರ 17338 ಕ್ಯುಸೆಕ್ ನೀರು ಹರಿದು ಬಂದಿತ್ತು. 123 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯ ಬೇಸಿಗೆಯಲ್ಲಿ ಬಹುತೇಕ ಖಾಲಿಯಾಗುವ ಹಂತ ತಲುಪಿದ್ದು, ಇದೀಗ 22 ಟಿಎಂಸಿ ನೀರು ಸಂಗ್ರಹವಾಗಿದೆ. ಹೊರ ಹರಿವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement