ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನನ್ನನ್ನು ಪಕ್ಕಕ್ಕಿಟ್ಟು ರಾಜಕಾರಣ ಕಷ್ಟ

'ನಾನು 24 ಗಂಟೆ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಆದರೆ 18 ಗಂಟೆ ರಾಜಕೀಯ ಮಾಡುವ ಶಕ್ತಿ ಇದೆ. ನನ್ನನ್ನು ಪಕ್ಕಕ್ಕೆ ಇಟ್ಟು ರಾಜಕಾರಣ ಮಾಡುವುದು ಅಷ್ಟು ಸುಲಭವಲ್ಲ'....

Mainashree
Updated On : 21 Jun 2013, 12:51 pm

ಕನ್ನಡಪ್ರಭ ವಾರ್ತೆ,  ಬೆಂಗಳೂರು,  ಜೂ. 20-
'ನಾನು 24 ಗಂಟೆ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಆದರೆ 18 ಗಂಟೆ ರಾಜಕೀಯ ಮಾಡುವ ಶಕ್ತಿ ಇದೆ. ನನ್ನನ್ನು ಪಕ್ಕಕ್ಕೆ ಇಟ್ಟು ರಾಜಕಾರಣ ಮಾಡುವುದು ಅಷ್ಟು ಸುಲಭವಲ್ಲ'. - ಇದು ಕಾಂಗ್ರೆಸ್‌ನ ಹಿರಿಯ ಮುಖಂಡ, ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಖಡಕ್ ನುಡಿ.
ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಶಿವಕುಮಾರ್, ಕಳೆದ ಕೆಲ ದಿನಗಳಿಂದ 'ಕುದಿಮೌನ'ಕ್ಕೆ ಶರಣಾಗಿದ್ದರು. ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ವಿಳಂಬ ಮಾಡಿದ್ದ ಅವರು, ಪಕ್ಷದೊಳಗಿನ ಬೆಳವಣಿಗೆ ಬಗ್ಗೆ ಇದೇ ಮೊದಲ ಬಾರಿಗೆ ಅಸಮಾಧಾನದ ಬಾಂಬ್ ಸ್ಫೋಟಿಸಿದ್ದಾರೆ.
'ಕನ್ನಡಪ್ರಭ'ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಮ್ಮನ್ನು ಮುಖ್ಯವಾಹಿನಿಯಿಂದ ಪಕ್ಕಕ್ಕೆ ಇಡುವುದು ಅಷ್ಟು ಸುಲಭವಲ್ಲ ಎಂದಿರುವ ಅವರು, 'ಸಂಪುಟಕ್ಕೆ ಸೇರದೇ ಇದ್ದ ಮಾತ್ರಕ್ಕೆ ಎಲ್ಲ ಮುಗಿದಿಲ್ಲ. ನನ್ನ ಬಳಿಯೂ ರಾಜಕೀಯ ಚದುರಂಗದಾಟದ ರಹಸ್ಯ ದಾಳಗಳಿವೆ' ಎಂದಿದ್ದಾರೆ.
ಸಂದರ್ಶನದ ಪೂರ್ಣಪಾಠ ಹೀಗಿದೆ.....

'ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಎಲ್ಲ ಕಾಲದಲ್ಲೂ ಅವಕಾಶವಿದೆ. ರಾಜಕೀಯ ವಿರೋಧಿಗಳ ಷಡ್ಯಂತ್ರದಿಂದ ನನಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ದೊರಕಿಲ್ಲ. ಆದರೆ ಇದನ್ನೇ ನನ್ನ ರಾಜಕೀಯ ಪತನ-ಗ್ರಹಣ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ. ನಾನೊಬ್ಬ ಆಶಾವಾದಿ. ಇಂಥ ಮಾತುಗಳಿಗೆ ಧೃತಿಗೆಡುವುದಿಲ್ಲ. ನಿತ್ಯ ಉದಯಿಸಿ, ಅಸ್ತಂಗತನಾಗುವ ಸೂರ್ಯನಿಗೆ ನಿತ್ಯ ಸಹಸ್ರ ಮೋಡಗಳು ಅಡ್ಡಿಯಾಗುತ್ತವೆ. ಆದರೆ ಪರಿಕ್ರಮಣ ನಿಲ್ಲುತ್ತದೆಯೇ? ರಾಜಕೀಯ ನಾಯಕತ್ವ ಎಂಬುದು ಚದುರಂಗದಾಟ. ಇಲ್ಲಿ ನಾವೆಲ್ಲರೂ ಆಟಗಾರರು. ನಾನು ಯಾವಾಗ, ಯಾವ ದಾಳ ಪ್ರಯೋಗಿಸುತ್ತೇನೆ ಎಂಬುದಕ್ಕೆ ಕಾಲವೇ ಉತ್ತರ ನೀಡುತ್ತದೆ. ಕಾದು ನೋಡಿ.
ನಮ್ಮ ರಾಜ್ಯದಲ್ಲಿ ದಿನದ 24 ಗಂಟೆಯೂ ರಾಜಕಾರಣ ಮಾಡುವ ರಾಜಕಾರಣಿಗಳಿದ್ದಾರೆ.
ಆದರೆ ನನಗೆ 18 ಗಂಟೆ ರಾಜಕೀಯವಾಗಿ ಯೋಚನೆ ಮಾಡುವ ಶಕ್ತಿ ಇದೆ. ನಿದ್ದೆ ಮಾಡುವ ಸಮಯವೊಂದನ್ನು ಬಿಟ್ಟು, ಉಳಿದ ಸಮಯವನ್ನು ರಾಜಕಾರಣಕ್ಕೆ ಮೀಸಲಿಡಬಲ್ಲೆ. ನನ್ನನ್ನು ರಾಜಕೀಯವಾಗಿ ಪಕ್ಕಕ್ಕೆ ಇಡುವುದು ಅಷ್ಟು ಸುಲಭವಲ್ಲ ಎಂದು ಮಾತ್ರ ಹೇಳಬಲ್ಲೆ.

ಮುಗಿದು ಹೋಗಿಲ್ಲ: ಕಾಂಗ್ರೆಸ್‌ನಲ್ಲಿ ಯಾರು ಪ್ರಬಲರು, ಯಾರು ದುರ್ಬಲರು ಎಂಬುದನ್ನು ನಿರ್ಧರಿಸುವವರು ಸ್ಥಳೀಯ ನಾಯಕರಲ್ಲ. ಜನ ಮತ್ತು ಹೈಕಮಾಂಡ್ ಇದನ್ನು ತೀರ್ಮಾನಿಸುತ್ತಾರೆ. ಈ ಹಿಂದೆ ವೀರೇಂದ್ರ ಪಾಟೀಲ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ನಮ್ಮ ಪಕ್ಷದ ಹಿರಿಯ ನಾಯಕರಾದ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ದಿವಂಗತ ಎಸ್.ಬಂಗಾರಪ್ಪ, ಎನ್.ಧರ್ಮಸಿಂಗ್ ಅವರನ್ನೇ ಸಂಪುಟದಿಂದ ಹೊರಗಿಡಲಾಗಿತ್ತು. ಇಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಂದು ಜನತಾ ಪರಿವಾರದಲ್ಲಿದ್ದರೂ ಶಾಸಕರಾಗಿರಲಿಲ್ಲ. ಆದರೆ ನಾನು ಶಾಸಕನಾಗಿದ್ದ ನಾನು ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ.
ಸಂಪುಟ ಸೇರಲು ಸಾಧ್ಯವಾಗದ ಎಸ್.ಎಂ.ಕೃಷ್ಣ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆಗಲೂ ಈ ಎಲ್ಲ ನಾಯಕರ ಪ್ರಭಾವ ಮುಗಿಯಿತು ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ ಕೇವಲ ಮೂರೇ ತಿಂಗಳಲ್ಲಿ ಪರಿಸ್ಥಿತಿ ಬದಲಾಯ್ತು. ಬಂಗಾರಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಹೈಕಮಾಂಡ್ ಪಾಟೀಲರಿಗೆ ಸೂಚನೆ ನೀಡಿತು. ಇದಾದ ಹನ್ನೊಂದು ತಿಂಗಳಲ್ಲಿ ಪಾಟೀಲರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು. ಬಂಗಾರಪ್ಪನವರೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು. ಕೃಷ್ಣ ಉಪಮುಖ್ಯಮಂತ್ರಿಯಾದರು. ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ಮೊಯ್ಲಿ ಮುಖ್ಯಮಂತ್ರಿಯಾದರು. ನೇಪಥ್ಯಕ್ಕೆ ಸರಿದರು ಎಂದೇ ಭಾವಿಸಲಾದ ಕೃಷ್ಣ ಮುಂದಿನ ಅವಧಿಯಲ್ಲಿ ಮುಖ್ಯಮಂತ್ರಿ, ವಿದೇಶಾಂಗ ಸಚಿವರಾದರು. ಧರ್ಮಸಿಂಗ್ ಅವರಿಗೂ ಸಿಎಂ ಹುದ್ದೆ ಏರುವ ಅವಕಾಶವೊದಗಿ ಬಂತು. ಮಲ್ಲಿಕಾರ್ಜುನ ಖರ್ಗೆ ಕೇಂದ್ರದಲ್ಲಿ ಪ್ರಭಾವಿ ಸಚಿವರಾದರು. ಪಕ್ಷದ ಹಿರಿಯ ನಾಯಕರು ಎದುರಿಸಿದ ಸ್ಥಿತಿ ಈಗ ನನ್ನ ಮುಂದೆ ಇದೆ. ನಾನೂ ಆಶಾವಾದಿ.

ಪಕ್ಷ ಹೂಡಿಕೆ ಮಾಡಿದೆ: ಸಾಮಾನ್ಯ ಕಾರ್ಯಕರ್ತನಾದ ನನ್ನ ಮೇಲೆ ಪಕ್ಷ ಜವಾಬ್ದಾರಿ ಎಂಬ ನಿಧಿಯನ್ನು ಹೂಡಿಕೆ ಮಾಡಿದೆ. ನಾನು ನಿಷ್ಠೆಯಿಂದ ಕಾಂಗ್ರೆಸ್‌ನ ಆಚಾರ-ವಿಚಾರವನ್ನು ಪ್ರಚಾರ ಮಾಡಿದ್ದೇನೆ. 1989ರಿಂದ ಇಲ್ಲಿಯವರೆಗೆ ನಾನು ಶಾಸನಸಭೆಯಲ್ಲಿ ಇದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಸೋತವರೆಲ್ಲ ಮುಖ್ಯಮಂತ್ರಿಯಾಗಿದ್ದಾರೆ. ನಾನು ಈ ಬಾರಿ ಸಚಿವನಾಗದೇ ಇರಬಹುದು, ಆದರೆ ಸ್ಪಷ್ಟ ಗುರಿ ಇದೆ. ನನಗೂ ರಾಜಕೀಯದ ದಾಳಗಳನ್ನು ಪ್ರಯೋಗಿಸುವುದು ಗೊತ್ತು. ರಾಜಕಾರಣದ ಪರಿಧಿಯಲ್ಲಿ ಆಗಾಗ ಗ್ಯಾಪ್ ಸೃಷ್ಟಿಯಾಗುತ್ತದೆ. ಅಲ್ಲಿ ಯಾರನ್ನು ಕುಳ್ಳಿರಿಸಬೇಕು ಎಂಬುದು ನನಗೆ ಗೊತ್ತು. ನಾನು ಯಾವಾಗ ರಾಜಕೀಯದ ದಾಳ ಪ್ರಯೋಗಿಸುತ್ತೇನೆ ಎಂಬುದನ್ನು ಕಾದು ನೋಡಿ.

ಜ್ಞಾನೋದಯವಾಗಿದೆ : ರಾಜಕಾರಣದಲ್ಲಿ ಎಷ್ಟೇ ಪ್ರಬಲರಿದ್ದರೂ ನನ್ನ ವಿರೋಧಿಗಳಿಗೆ ನಾನು ಮಾತ್ರ ಕಾಣುತ್ತಿದ್ದೇನೆ. ನನ್ನತ್ತಲೇ ಕಲ್ಲು ಹೊಡೆಯುತ್ತಿದ್ದಾರೆ. ಕಾಂಗ್ರೆಸ್ ಪ್ರಚಾರ ಸಮಿತಿ ಸಹ ಅಧ್ಯಕ್ಷನಾಗಿ ಸರ್ಕಾರದ ದುರಾಡಳಿತದ ಬಗ್ಗೆ ಪ್ರಚಾರ ಮಾಡಿದ ನನಗೇ ಕಳಂಕಿತ ಎಂಬ ಪಟ್ಟಕಟ್ಟಿದರು. ಸುಳ್ಳಿನ ಕಂತೆಯನ್ನು ಹೆಣೆದರು. ಇದೆಲ್ಲದರಿಂದ ನನ್ನ ಮನಸಿಗೆ ನೋವಾಗಿದೆ. ಆದರೆ ತಪ್ಪು ಮಾಡದಂತೆ ಇವರೆಲ್ಲರೂ ಸೇರಿ ಜ್ಞಾನೋದಯವುಂಟು ಮಾಡುತ್ತಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿ.

ಕೃಷ್ಣ ಬ್ರಿಗೇಡ್ ಅಲ್ಲ ಕಾಂಗ್ರೆಸ್ ಬ್ರಿಗೇಡ್
ರಾಜ್ಯ ರಾಜಕಾರಣದಲ್ಲಿ ಕೃಷ್ಣ ಬ್ರಿಗೇಡ್ ಕ್ಷೀಣಿಸುತ್ತಿದೆಯೇ ? ಎಂಬ ಪ್ರಶ್ನೆಗೆ ತಮ್ಮದೇ ಆದ ಶೈಲಿಯಲ್ಲಿ ವ್ಯಾಖ್ಯಾನ ಮಾಡಿರುವ ಶಿವಕುಮಾರ್, ನಮ್ಮೆಲ್ಲರನ್ನು ನೀವು ಕೃಷ್ಣ ಬ್ರಿಗೇಡ್ ಎಂದು ಉಲ್ಲೇಖಿಸುವುದೇ ತಪ್ಪು. ನಾವೆಲ್ಲರೂ ಕಾಂಗ್ರೆಸ್ ಬ್ರಿಗೇಡ್. ಯಾರು ಸ್ಟ್ರಾಂಗ್, ಯಾರು ವೀಕ್ ಎಂಬುದನ್ನು ಜನ ನಿರ್ಧರಿಸುತ್ತಾರೆ. ಕಾಂಗ್ರೆಸ್‌ನಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಕಾರ್ಯಕರ್ತರ ಬಲ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಸ್ವತಂತ್ರರು
ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸುವವರ ಪೈಕಿ ನೀವು ಒಬ್ಬರಾಗಿದ್ದೀರಾ? ಎಂಬ ಪ್ರಶ್ನೆಗೆ ಶಿವಕುಮಾರ್ ಜಾರಿಕೆ ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ಅವರನ್ನು ನಂಬಿ ಪಕ್ಷ ಜವಾಬ್ದಾರಿ ನೀಡಿದೆ. ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಅವರು ಸ್ವತಂತ್ರರು. ಆದರೆ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ನುಡಿದಂತೆ ನಡೆದಿದ್ದೇವೆ ಎಂಬ ಸಂದೇಶವನ್ನು ಜನರಿಗೆ ಕೊಡಬೇಕು. ನನಗೆ ಅವರ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ ಎಂಬುದು ಮುಖ್ಯವಲ್ಲ. ಆದರೆ ಜನರಿಗೆ ತೋರಿದ ಪ್ರೀತಿ ಉಳಿಸಿಕೊಳ್ಳಬೇಕು ಎಂದರು.

- ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement