ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಾಲ್ಕು ಹಸುಳೆ ಬಲಿ: ತನಿಖೆಗೆ ಆದೇಶ

Mainashree
Updated On : 20 Jun 2013, 10:15 am

ಬಾಗಲಕೋಟೆ: ಯಡಹಳ್ಳಿ ಹಿನ್ನೀರು ಸಂತ್ರಸ್ತರ ತಗಡಿನ ಶೆಡ್‌ನಲ್ಲಿ ಬೇಸಿಗೆಯ ತಾಪಕ್ಕೆ ನಾಲ್ಕು ಹಸುಳೆಗಳು ಬಲಿಯಾದ ಮನ ಕಲಕುವ ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಗುರುವಾರ 'ಕನ್ನಡಪ್ರಭ'ದಲ್ಲಿ ಪ್ರಕಟವಾದ 'ಬೇಸಿಗೆ ತಾಪಕ್ಕೆ 4 ಹಸುಳೆ ಬಲಿ' ವಿಶೇಷ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಇಲಾಖೆ ಸಚಿವ ಮತ್ತು ಹಿರಿಯ ಅಧಿಕಾರಿಗಳು ತಕ್ಷಣದಿಂದಲೇ ಸಮಗ್ರ
ತನಿಖೆ ಮಾಡಿ ವರದಿ ಸಲ್ಲಿಸಲು ಹಾಗೂ ಅಲ್ಲಿನ ನಿವಾಸಿಗಳಿಗೆ ತಕ್ಷಣ ಆರೋಗ್ಯ ಸೇವೆಗಳನ್ನು ಕಲ್ಪಿಸಲು ಆದೇಶಿಸಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಬಿ.ಡಿ. ಕಿತ್ತೂರ ಬೀಳಗಿ ತಾಲೂಕು ಆರೋಗ್ಯಾಧಿಕಾರಿ ಡಾ. ದಯಾನಂದ ಕರೆಣ್ಣವರ ನೇತೃತ್ವದಲ್ಲಿ ವೈದ್ಯರ ತನಿಖಾ ತಂಡವನ್ನು ರಚಿಸಿದ್ದಾರೆ. ಈ ತಂಡ ಶುಕ್ರವಾರ ಬೆಳಗ್ಗೆಯಿಂದಲೇ ತನಿಖೆ ಮತ್ತು ಅಲ್ಲಿನ ನಿವಾಸಿಗಳಿಗೆ ಆರೋಗ್ಯ ಸೇವೆ ಕಲ್ಪಿಸುವ ಕೆಲಸಕ್ಕೆ ಅಣಿಯಾಗಲಿದೆ.
ಈ ನಾಲ್ಕು ಹಸುಳೆಗಳ ಮರಣದ ಸಮಗ್ರ ವಿವರ ಸಂಗ್ರಹಿಸುವ ಜತೆಗೆ ಆ ತಗಡಿನ ಶೆಡ್‌ಗಳಲ್ಲಿ ವಾಸವಾಗಿದ್ದವರು ಅಸುನೀಗಿದ ಬಗೆಯನ್ನು ಚರ್ಚಿಸಿ ಮಾಹಿತಿ ಸಂಗ್ರಹಿಸಲಿದೆ ಈ ತಂಡ. ವೃದ್ಧರು, ರೋಗಿಗಳು ಮತ್ತು ಹಸುಳೆಗಳ ಸಾವಿನ ಬಗ್ಗೆ ತನಿಖೆ ನಡೆಸಲಿದೆ. ಹಸುಳೆಗಳು ಸಾವಿಗೀಡಾಗುವ ಮುನ್ನ ಅವುಗಳಿಗೆ ನೀಡಿದ ಚಿಕಿತ್ಸೆ, ಗರ್ಭಿಣಿಯಾಗಿದ್ದ ವೇಳೆ ಪಡೆದ ಚಿಕಿತ್ಸೆಯ ವಿವರ ಹಾಗೂ ಚಿಕಿತ್ಸೆ ನೀಡಿದ ವೈದ್ಯರ ಹೇಳಿಕೆಗಳನ್ನು ಈ ಸಂದರ್ಭದಲ್ಲಿ ಸಂಗ್ರಹಿಸಲಾಗುತ್ತದೆ. ಬಿಸಿಲಿನ ತಾಪಕ್ಕೆ ಚರ್ಮ ರೋಗ, ವಾಂತಿ-ಭೇದಿ, ಮೂರ್ಛೆ ರೋಗದ ಸಮಸ್ಯೆ ಎದುರಿಸುವವರಿಗೆ ತಕ್ಷಣಕ್ಕೆ ಚಿಕಿತ್ಸೆ ಲಭಿಸಲಿದೆ ಎಂದು ಡಿಎಚ್‌ಓ ಡಾ.ಬಿ.ಡಿ.ಕಿತ್ತೂರ 'ಕನ್ನಡಪ್ರಭ'ಕ್ಕೆ ವಿವರಣೆ ನೀಡಿದರು.
ಮೂರ್ನಾಲ್ಕು ದಿನಗಳಲ್ಲಿ ತನಿಖಾ ಕಾರ್ಯ ಮುಗಿಯಲಿದೆ. ಮುಂದಿನ ಒಂದ ವಾರದಲ್ಲಿ ಇಡೀ ಪ್ರಕರಣದ ವರದಿ ಕೈ ಸೇರುತ್ತದೆ. ಅದನ್ನು ಆಧರಿಸಿ ಮತ್ತು ಸರ್ಕಾರ ನೀಡುವ ನಿರ್ದೇಶನದಂತೆ ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದೂ ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement