ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅತ್ಯಾಚಾರಕ್ಕೊಳಗಾದ ಲಕ್ಷ್ಮಿ ಬದುಕಲ್ಲಿ ನವ ಪಲ್ಲವ

'ಆಡದೆ ಮಾಡುವವ ರೂಢಿಯೊಳಗುತ್ತಮನು...' ಎಂಬ ಸರ್ವಜ್ಞ ವಾಣಿಯಂತೆ ಗಡಿಲಿಂಗದಳ್ಳಿ ಬಲಾತ್ಕಾರ ಪ್ರಕರಣದಲ್ಲಿ ನೊಂದ ಬಾಲೆಯೊಂದಿಗೆ ಇಲ್ಲಿನ ಜಿಪಂ ಸಿಇಒ ಪಲ್ಲವಿ ಸ್ಪಂದಿಸಿದ ಪರಿ ಅನನ್ಯ.

Mainashree
Updated On : 22 Jun 2013, 12:41 pm

ಗುಲ್ಬರ್ಗ: 'ಆಡದೆ ಮಾಡುವವ ರೂಢಿಯೊಳಗುತ್ತಮನು...' ಎಂಬ ಸರ್ವಜ್ಞ ವಾಣಿಯಂತೆ ಗಡಿಲಿಂಗದಳ್ಳಿ ಬಲಾತ್ಕಾರ ಪ್ರಕರಣದಲ್ಲಿ ನೊಂದ ಬಾಲೆಯೊಂದಿಗೆ ಇಲ್ಲಿನ ಜಿಪಂ ಸಿಇಒ ಪಲ್ಲವಿ ಸ್ಪಂದಿಸಿದ ಪರಿ ಅನನ್ಯ. ಗುಲ್ಬರ್ಗದಲ್ಲಿನ ಈ ಪುಟ್ಟ ಬೆಳವಣಿಗೆ ಬಲಾತ್ಕಾರಕ್ಕೊಳಗಾದ ಬಾಲಕಿ ಬಾಳಲ್ಲಿ ನವ ಪಲ್ಲವ ಮೂಡಿಸಿದೆ.
ಕಿತ್ತು ತಿನ್ನುವ ಬಡತನ: ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿಯ ದನಗಾಹಿ ಲಕ್ಷ್ಮಿ(ಹೆಸರು ಬದಲಿಸಲಾಗಿದೆ) 2012ರ ಡಿಸೆಂಬರ್ ತಿಂಗಳಲ್ಲಿ ತಮ್ಮೂರಲ್ಲೇ ಕಾಮುಕರಿಂದ ಬಲಾತ್ಕಾರಕ್ಕೊಳಗಾದ ಬಾಲಕಿ. ಘಟನೆ ಸಂಭವಿಸಿದ 2 ದಿನದಲ್ಲೇ ಲಕ್ಷ್ಮೀಯನ್ನು ಮತ್ತೆ ದನ ಕಾಯುವ ಕೆಲಸಕ್ಕೆ ಅವರ ಪೋಷಕರು ಕಳುಹಿಸಿದ್ದರಂತೆ.  ಇದನ್ನು ತಿಳಿದ ಸಿಇಒ ಪಲ್ಲವಿ ಆಕುರಾತಿ, ಇದೇ ಸಂಗತಿ ತಾವು ಹಾಜರಿರುವ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿಯೂ ವಿಸ್ತೃತ ಚರ್ಚೆಗೆ ಗ್ರಾಸವಾದಾಗ ನತದೃಷ್ಟೆ ಲಕ್ಷ್ಮಿಯ ಬಗ್ಗೆ ತುಂಬಾ ಮುತುವರ್ಜಿ ಬೆಳೆಸಿಕೊಂಡರು.

ಲಕ್ಷ್ಮಿ ಜೊತೆ ಆಪ್ತ ಸಮಾಲೋಚನೆ: ತಕ್ಷಣ ಲಕ್ಷ್ಮಿಯನ್ನು ಬಾಲಕಿಯರ ಬಾಲ ಮಂದಿರಕ್ಕೆ ಕರೆತಂದು ಅಲ್ಲಿ ಆಕೆಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದರು. ಜೊತೆಗೆ ತಾವೇ ಖುದ್ದಾಗಿ ವಾರಕಾಲ ಲಕ್ಷ್ಮಿಯೊಂದಿಗೆ ಬೆರೆತು ಆಪ್ತ ಸಮಾಲೋಚನೆ(ಕೌನ್ಸೆಲಿಂಗ್) ಮಾಡಿದ್ದಾರೆ. ಕೊನೆಗೂ ಆಕೆಯ ಮನಃ ಪರಿವರ್ತನೆ ಮಾಡುವಲ್ಲಿ ಪಲ್ಲವಿ ಯಶಸ್ವಿಯಾಗಿದ್ದಾರೆ. ಜೂನ್ ಮೊದಲ ವಾರದಿಂದಲೇ ಸಮವಸ್ತ್ರ ಧರಿಸಿ ಲಕ್ಷ್ಮಿ ಶಾಲೆಗೆ ಹೋಗುತ್ತಿದ್ದಾಳೆ. ಲಕ್ಷ್ಮಿ ಸೇರಿದಂತೆ ಬಾಲ ಮಂದಿರದಲ್ಲಿ ಆಸರೆ ಪಡೆದಿರುವ ಎಲ್ಲಾ ಮಕ್ಕಳ ಯೋಗಕ್ಷೇವು ವಿಚಾರಿಸಲು, ಅವರೊಂದಿಗೆ ಬೆರೆತು ಕಾಲ ಕಳೆಯಲು ಸಿಇಒ ಪಲ್ಲವಿ ಕಳೆದ ಭಾನುವಾರ(ಜೂನ್ 16) ಬಾಲಮಂದಿರದಲ್ಲೇ ವಾಸ್ತವ್ಯ ಹೂಡಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರತ್ನಾ ಕಲಂದಾನಿ ಹಾಗೂ ಅವರ ಇಲಾಖೆ ಸಿಬ್ಬಂದಿ ಈ ಕಾರ್ಯದಲ್ಲಿ ಸಿಇಒ ಅವರಿಗೆ ಜೊತೆಯಾಗಿ ನೊಂದ ಲಕ್ಷ್ಮೀಯನ್ನು ಶಾಲೆಗೆ ಅಣಿಗೊಳಿಸುವಲ್ಲಿ ಪಟ್ಟಶ್ರಮ ಮರೆಯುವಂತಿಲ್ಲ.

ನನಗೆ ಮೊದಲಿನಿಂದಲೂ ನೊಂದವರಿಗೆ ಆಸರೆಯಾಗುವ ಬಯಕೆ. ಅತ್ಯಾಚಾರಕ್ಕೊಳಗಾದ ಲಕ್ಷ್ಮೀಗೆ ಜಿಪಂ.ನಿಂದ ನೆರವು ನೀಡಲಾಗಿತ್ತು. ಅದ್ಯಾಕೋ ನನಗೆ ಲಕ್ಷ್ಮಿಯನ್ನು ಕೌನ್ಸೆಲಿಂಗ್ ಮಾಡಿ ಶಾಲೆಗೆ ಅಣಿಗೊಳಿಸಬೇಕು ಅನ್ನಿಸಿತು. ಆ ಕೆಲಸ ಶ್ರದ್ಧೆಯಿಂದ ಮಾಡಿ ಯಶ ಕಂಡಿರುವೆ. ಲಕ್ಷ್ಮೀ ಈಗ ಬಾಲ ಮಂದಿರದಲ್ಲಿದ್ದು ಶಾಲೆಗೆ ಹೊರಟಿದ್ದಾಳೆ, ಇದು ಖುಷಿಯ ಸಂಗತಿ.
-  ಪಲ್ಲವಿ ಆಕುರಾತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯ್ತಿ, ಗುಲ್ಬರ್ಗ

- ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement