ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಂಬಿ, ಕಿಗಾಲಿಯಲ್ಲಿ ಗೊರಿಲ್ಲಾ ನಾಮಕರಣ!

ಒಂದು ಅಪರೂಪದ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ಬೆಂಗಳೂರಿನಿಂದ ಆಫ್ರಿಕ ಖಂಡದ ರವಾಂಡಾ ಎಂಬ...

ನಾಮಕರಣಕ್ಕೆ ಸಜ್ಜಾದ 'ಕರಿಸ್ವಾಮಿ'...
Mainashree
Updated On : 22 Jun 2013, 12:37 pm

ಕಿಗಾಲಿ, ರವಾಂಡಾ: ಒಂದು ಅಪರೂಪದ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ಬೆಂಗಳೂರಿನಿಂದ ಆಫ್ರಿಕ ಖಂಡದ ರವಾಂಡಾ ಎಂಬ ಶಾಪ ವಿಮೋಚನೆ ಪಡೆದಂತಿರುವ ದೇಶದ ರಾಜಧಾನಿ ಕಿಗಾಲಿಗೆ ಬಂದಿದ್ದೇನೆಂದರೆ ನಿಮಗೆ ಅಚ್ಚರಿಯೆನಿಸದು. ಅದೂ ಬೆಂಗಳೂರಿನಿಂದ ದುಬೈಗೆ ಬಂದು, ದುಬೈನಿಂದ ಕೀನ್ಯಾದ ರಾಜಧಾನಿ ನೈರೋಬಿಯಲ್ಲಿಳಿದು, ನಂತರ ಬುರುಂಡಿ ರಾಜಧಾನಿ ಬಜುಂಬಾಕ್ಕೆ ಆಗಮಿಸಿ, ಬಳಿಕ ರವಾಂಡಾದ ಕಿಗಾಲಿಗೆ ಇಪ್ಪತ್ತೆರಡು ತಾಸು ವಿಮಾನ ಪ್ರಯಾಣ ಮಾಡಿ ಬಂದಿದ್ದೇನೆ ಅಂದ್ರೆ, ಹತ್ತಿರದ ನೆಂಟರೋ, ಸಂಬಂಧಿಕರೋ, ಆತ್ಮೀಯ ಸ್ನೇಹಿತರೋ ಅಥವಾ ತೀರಾ ಬೇಕಾದವರ ಮನೆಯಲ್ಲಿನ ನಾಮಕರಣ ಕಾರ್ಯಕ್ರಮವಿದ್ದಿರಬಹುದು ಎಂದು ಭಾವಿಸಬಹುದು.
ಒಂದು ರೀತಿಯಲ್ಲಿ ಇದು ಅವರೆಲ್ಲರಿಗಿಂತ ಹತ್ತಿರದವರ ಕಾರ್ಯಕ್ರಮ ಎಂದರೆ ತಪ್ಪಾಗಲಿಕ್ಕಿಲ್ಲ. ನಮ್ಮ ಪೂರ್ವಿಕರ ಕಾರ್ಯಕ್ರಮವಾದ್ದರಿಂದ ನನ್ನನ್ನು ಇಷ್ಟು ದೂರ ಕರೆದುಕೊಂಡು ಬಂದಿರಬಹುದೆಂದರೆ ನಿಮಗೆ ಇಷ್ಟು ಗೋಜಲು ಗೊಂದಲ ಆಗಬಹುದು. ಇನ್ನು ತಡ ಮಾಡದೇ ನಾನು ಇಲ್ಲಿಗೆ ಬಂದುದೇಕೆ ಎಂಬುದನ್ನು ಹೇಳುತ್ತೇನೆ.

ಗೊರಿಲ್ಲಾಗಳ ನಾಮಕರಣ ಸಮಾರಂಭ!: ಹೌದು. ಇಂಥದೊಂದು ಅಪರೂಪದ, ವಿಚಿತ್ರ ಕಾರ್ಯಕ್ರಮ ನನ್ನನ್ನು ಇಲ್ಲಿಗೆ ಅಷ್ಟು ದೂರದಿಂದ ಕರೆದುಕೊಂಡು ಬಂದಿದೆ. ಜಗತ್ತಿನಲ್ಲಿ ಇಂಥದೊಂದು ಕಾರ್ಯಕ್ರಮ ಇಲ್ಲೊಂದೇ ನಡೆಯೋದು.  'ಅಲ್ಲಾರಿ, ಪಕ್ಕದ ಮನೆಯಲ್ಲಿನ ನಾಮಕರಣಕ್ಕೇ ಹೋಗಲು ಆಗೋದಿಲ್ಲ. ಇನ್ನು ಗೊರಿಲ್ಲಾಗಳ ನಾಮಕರಣಕ್ಕೆ ಆಫ್ರಿಕಾದ ರವಾಂಡಾ ದೇಶಕ್ಕೆ ಹೋಗಿದ್ದೀರಲ್ಲಾ? ಬೇರೆ ಕೆಲಸ ಇಲ್ಲವಾ?' ಎಂದು ಕೇಳುವ ಮುನ್ನ ನಿಮಗೆ ಹೀಗೆ ಅನಿಸುವ ಮುನ್ನ ಈ ಕಾರ್ಯಕ್ರಮದ ವೈಶಿಷ್ಟ್ಯಗಳನ್ನು ಹೇಳಿದರೆ ನನ್ನ ಭೇಟಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಬಹುದು.
ಆಫ್ರಿಕಾದ ಕಾಡುಗಳಲ್ಲಿ ಗೊರಿಲ್ಲಾಗಳು ಕ್ರಮೇಣ ಕ್ಷೀಣಿಸುತ್ತಿವೆ. ಇವು ಬದುಕಿದ್ದರೆ, ರವಾಂಡಾದ ಅರಣ್ಯಗಳಲ್ಲಿ ಮಾತ್ರ. 2008ರ ಗಣತಿ ಪ್ರಕಾರ, ರವಾಂಡಾದಲ್ಲಿ ಸುಮಾರು 600 ಗೊರಿಲ್ಲಾಗಳಿವೆ. ಈ ಸಂತತಿಯನ್ನು ಉಳಿಸಿಕೊಳ್ಳದಿದ್ದರೆ, ಇನ್ನು ಕೆಲವೇ ವರ್ಷಗಳಲ್ಲಿ ಇವು ಭೂಮಿ ಮೇಲಿಂದ ಕಣ್ಮರೆಯಾಗಬಹುದು.. ಈ ಹಿನ್ನಲೆಯಲ್ಲಿ ನಮ್ಮ ಪೂರ್ವಿಕರನ್ನು ನೆನಪಿಸುವ ಗೊರಿಲ್ಲಾಗಳ ಸಂತತಿಯನ್ನು ಉಳಿಸಲೇಬೇಕೆಂದು ರವಾಂಡಾ ಸರ್ಕಾರ ನಿರ್ಧರಿಸಿತು. ಇದು ಕೇವಲ ತಮ್ಮ ದೇಶದ ಕಾಯಕ ಮಾತ್ರ ಆಗಬಾರದು, ಇದಕ್ಕೆ ಅಂತಾರಾಷ್ಟ್ರೀಯ ಸಹಭಾಗಿತ್ವ ಮಹತ್ವ ನೀಡಬೇಕೆಂಬ ಆಶಯದಿಂದ ಕಳೆದ ಒಂಭತ್ತು ವರ್ಷಗಳಿಂದ 'ಗೊರಿಲ್ಲಾ ನಾಮಕರಣ ಸಮಾರಂಭ'ವನ್ನು ರವಾಂಡಾ ಸರ್ಕಾರ ಏರ್ಪಡಿಸುತ್ತಿದೆ. ಪ್ರತಿ ವರ್ಷ ಬೇರೆ ಬೇರೆ ದೇಶಗಳ ಪ್ರಧಾನಿಗಳು, ರಾಷ್ಟ್ರಾಧ್ಯಕ್ಷರು, ಹಾಲಿವಡ್ ನಟ-ನಟಿಯರು, ಅತಿ ಗಣ್ಯವ್ಯಕ್ತಿಗಳು ಬಂದು ಆಯಾ ವರ್ಷ ಹುಟ್ಟಿದ ಗೊರಿಲ್ಲಾಗಳಿಗೆ ನಾಮಕರಣ ಮಾಡುವ ಸಂಪ್ರದಾಯ ಆರಂಭವಾಗಿದೆ.              

ಸ್ಥಳೀಯ ಭಾಷೆಯಲ್ಲಿ 'ಕ್ವಿಟಾ ಇಜಿನಾ' ಎಂದು ಕರೆಯಿಸಿಕೊಳ್ಳುವ ಈ ಕಾರ್ಯಕ್ರಮದಲ್ಲಿ ಇಲ್ಲಿಯ ವರೆಗೆ 161 ಗೊರಿಲ್ಲಾಗಳಿಗೆ ನಾಮಕರಣ ಮಾಡಲಾಗಿದೆ. ಜೂನ್ 22-23ರಂದು ನಡೆಯಲಿರುವ ಈ ವರ್ಷದ ಕಾರ್ಯಕ್ರಮದಲ್ಲಿ ಹನ್ನೆರಡು ಗೊರಿಲ್ಲಾ ಮರಿಗಳಿಗೆ ಹೆಸರಿಡಲಾಗುವುದು.
ಈ ಕಾರ್ಯಕ್ರಮದಲ್ಲ ಪಾಲ್ಗೊಳ್ಳಲು ಈಗಾಗಲೇ ಹತ್ತಾರು ಸಾವಿರ ಅಂತಾರಾಷ್ಟ್ರೀಯ ಅತಿಥಿಗಳು, ಪ್ರವಾಸಿಗರು, ಗಣ್ಯರು ಕಿಗಾಲಿಗೆ ಆಗಮಿಸಿದ್ದಾರೆ. ಹಾಲಿವುಡ್ ತಾರೆಯರ ನಿರೀಕ್ಷೆಗಾಗಿ  ಸ್ಥಳೀಯ ಪ್ರವಾಸೋದ್ಯಮ ಇಲಾಖೆ ಕಾದು ಕುಳಿತಿದೆ. ಕಿಗಾಲಿಯಿಂದ ಸುಮಾರು 100 ಕಿ.ಮಿ. ದೂರದಲ್ಲಿರುವ ಮುಸಾಂಜೆ ಎಂಬ ಊರಿನಲ್ಲಿ ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿ, ಗೊರಿಲ್ಲಾ ಬಗ್ಗೆ ಜಾಗೃತಿ ಸಮಾವೇಶ ನಡೆಯಲಿವೆ. ‘Celebrating Nature, Empowering Communities’ ಎಂಬುದು ಈ ವರ್ಷದ ಗೊರಿಲ್ಲಾ ನಾಮಕರಣ ಕಾರ್ಯಕ್ರಮದ ಧ್ಯೇಯ ವಾಕ್ಯ.
ಉಗಾಂಡ, ಕಾಂಗೋ ಗಣರಾಜ್ಯ ಹಾಗೂ ರವಾಂಡದ ಮೂರು ದೇಶಗಳು ಸೇರುವ ವಿರುಂಗಾ ಪರ್ವತ ಶ್ರೇಣಿಯ ತಪ್ಪಲಿಲ ಕಾಡುಗಳಲ್ಲಿ ಕಂಡು ಬರುವ  ಗೊರಿಲ್ಲಾಗಳಿಗೆ ರಾಜ ಮರ್ಯಾದೆ. ಕಿಗಾಲಿಯ ಜನದಟ್ಟಣೆ ಪ್ರದೇಶಗಳಲ್ಲಿ ಎಲ್ಲೆಡೆ ಗೊರಿಲ್ಲಾಗಳ ಚಿತ್ರ, ಕಟೌಟ್ ,  ಭಿತ್ತಿ ಚಿತ್ರಗಳೇ ರಾರಾಜಿಸುತ್ತವೆ. ಸ್ಥಳೀಯ ಪತ್ರಿಕೆ, ಟಿವಿ ಚಾನೆಲ್‌ಗಳಲ್ಲಿ ಗೊರಿಲ್ಲಾಗಳದ್ದೇ ಸುದ್ದಿ.
'ಒಂದೆಡೆ ಪ್ರಾಕೃತಿಕ ಸಂಪತ್ತಿನ ರಕ್ಷಣೆಯ ಮಹತ್ವ, ಅಳಿವಿನ ಅಂಚಿನಲ್ಲಿರುವ ಗೊರಿಲ್ಲಾ ಸಂತತಿಯನ್ನು ಉಳಿಸಿಕೊಳ್ಳುವ ಸಂಕಲ್ಪ, ಪ್ರವಾಸೋದ್ಯಮ ಉತ್ತೇಜನ ಹಾಗೂ ಆ ಮೂಲಕ ಅಂತಾರಾಷ್ಟ್ರೀಯ ಸ್ಥರದಲ್ಲಿ ರವಾಂಡ ದೇಶವನ್ನು ಷೋಕೇಸ್ ಮಾಡುವುದು ಈ ನಾಮಕರಣದ ಪ್ರಮುಖ ಉದ್ದೇಶ' ಎಂಬುದು ಭಾರತೀಯ ನಿಯೋಗದ ಮುಖ್ಯಸ್ಥ ಮತ್ತು ಕರ್ನಾಟಕದಲ್ಲಿ ರವಾಂಡಾ ಗೌರವ ಪ್ರತಿನಿಧಿಯಾಗಿರುವ ಮೋಹನ್ ಸುರೇಶ್ ಅಭಿಮತ.
ಗೊರಿಲ್ಲಾಗಳನ್ನು ರಾಷ್ಟ್ರೀಯ ಪ್ರಾಣಿಯಾಗಿ ಮಾನ್ಯತೆ ಮಾಡಿ, ನಾಮಕರಣದಂಥ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವ ಹಿಂದೆ ಪರಿಸರ ರಕ್ಷಣೆಯ ಜತೆ ವ್ಯಾಪಾರಿ ಉದ್ದೇಶವೂ ಅಡಗಿದೆ. ಗೊರಿಲ್ಲಾಗಳು ರವಾಂಡಾದ ಆರ್ಥಿಕ ಪ್ರಗತಿಗೆ ಗಣನೀಯ ಪ್ರಮಾಣದಲ್ಲಿ ತಮ್ಮ ಕೊಡುಗೆ ನೀಡುತ್ತಿವೆ. ಗೊರಿಲ್ಲಾಗಳನ್ನು ನೋಡಲೆಂದೇ ಬೃಹತ್ ಪ್ರಮಾಣದಲ್ಲಿ  ವಿದೇಶಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ನಾಮಕರಣ ಸಮಾರಂಭದ ನಂತರ ಕಳೆದ ಐದು ವರ್ಷಗಳಲ್ಲಿ ಈ ಪ್ರಮಾಣ ಜಾಸ್ತಿಯಾಗಿದೆ.
ಕಳೆದ ವರ್ಷ ಪ್ರವಾಸೋದ್ಯಮದಿಂದ ರವಾಂಡಾ ಸರ್ಕಾರ 25 (150 ಕೋಟಿ)ದಶಲಕ್ಷ ಡಾಲರ್ ಗಳಿಸಿದ್ದರೆ, ಗೊರಿಲ್ಲಾ ಒಂದರಿಂದಲೇ ಸುಮಾರು 53 ದಶಲಕ್ಷ ಡಾಲರ್  ( 317 ಕೋಟಿ) ಹಣ ಹರಿದು ಬಂದಿದೆ. ಈ ವರ್ಷ ನೂರು ದಶಲಕ್ಷ ಡಾಲರ್ (599 ಕೋಟಿ) ದಾಟುವ ನಿರೀಕ್ಷೆಯಿದೆ. ಗೊರಿಲ್ಲಾದ ಮೂಲಕ ರವಾಂಡ ತನ್ನ ಅಸ್ತಿತ್ವವನ್ನು ಕಾಣುವ ಮಹತ್ವಾಕಾಂಕ್ಷೆ ಹೊಂದಿರುವುದು ಗಮನಾರ್ಹ.
ಗೊರಿಲ್ಲಾ ಪ್ರವಾಸೋದ್ಯಮದಿಂದಾಗಿ ರವಾಂಡಾದ ಮುಸಂಜೆ ಪ್ರಾಂತ ಸಾಕಷ್ಟು ಅಭಿವೃದ್ಧಿಯಾಗಿದೆ. ಬಡತನ ನಿರ್ಮೂಲನೆ, ಶಿಕ್ಷಣ ಸುಧಾರಣೆಗೂ ಗೊರಿಲ್ಲಾಗಳು ಕಾರಣವಾಗಿದೆ. 'ಗೊರಿಲ್ಲಾಗಳಿಂದಾಗಿ ನಮ್ಮ ಮಕ್ಕಳು ಶಾಲೆ ಕಾಣುವಂತಾಗಿದೆ. ನಾವು ಮನೆ ಕಟ್ಟಿಕೊಂಡಿದ್ದೇವೆ' ಎಂಬ ಸ್ಥಳೀಯ ಜನರ ಮಾತುಗಳು ಘೋಷ ವಾಕ್ಯಗಳಾಗಿ ನಾಮಕರಣ ಜರಗುವ ಸ್ಥಳದಲ್ಲಿ ಗಮನ ಸೆಳೆಯುತ್ತವೆ. ರವಾಂಡಾದಲ್ಲಿ ಈಗ ಇಪ್ಪತ್ತಮೂರು ಗೊರಿಲ್ಲಾ ಕುಟುಂಬಗಳಿದ್ದು, ಆ ಕುಟುಂಬಗಳ ಸದಸ್ಯರೆಲ್ಲರನ್ನೂ ಲೆಕ್ಕ ಹಾಕಿದರೆ 612 ಆಗುತ್ತದೆ. ಈ 'ಆದಿ ಮಾನವ'ನೇ ಒಂದು ದೇಶದ ಪ್ರಗತಿಗೆ ಹೊಸ ಭಾಷ್ಯ ಬರೆಯುತ್ತಿರುವುದು ವಿಚಿತ್ರವಾದರೂ ಸತ್ಯ.
ಹತ್ತೊಂಬತ್ತು ವರ್ಷಗಳ ಹಿಂದೆ, ಸುಮಾರು ಹತ್ತು ಲಕ್ಷ ನರಮೇಧಕ್ಕೆ ಸಾಕ್ಷಿಯಾಗಿ ಶಾಪಗ್ರಸ್ತವಾಗಿದ್ದ ರವಾಂಡಾ ಎಂಬ ದೇಶ ತಲೆಯೆತ್ತಿ ನಿಲ್ಲಲು ಹವಣಿಸುತ್ತಿದೆ. ಗೊರಿಲ್ಲಾಗಳು ನೆಪ ಮಾತ್ರ! ಅಂದ ಹಾಗೆ ಶನಿವಾರದ ನಾಮಕರಣದ ವಿವರಗಳನ್ನು ನಿಮಗೆ ಕೊಡಲೆಂದು ಈಗ ಮುಸಂಜೆ ಎಂಬ  ಊರಿಗೆ ಹೋಗುತ್ತಿದ್ದೇನೆ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement