ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

Mainashree
Updated On : 21 Jun 2013, 10:21 am

ಕ.ಪ್ರ. ವಾರ್ತೆ  ಮಣಿಪಾಲ  ಜೂ.21
ಮಂಡ್ಯ ಜಿಲ್ಲೆಯ ಯುವತಿಯೊಬ್ಬಳ ಮೇಲೆ ದೈಹಿಕ ಶಿಕ್ಷಕ ಅತ್ಯಚಾರ ನಡೆಸಿದ ಪ್ರಕರಣ ಬಯಲಾದ ಬೆನ್ನಲ್ಲೇ, ಸುಮಾರು 50 ದೇಶದವರು ವಿದ್ಯಾಭ್ಯಾಸಕ್ಕೆಂದು ಆಗಮಿಸುವ ಶೈಕ್ಷಣಿಕ ನಗರ ಮಣಿಪಾಲದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.
ಮಣಿಪಾಲ ವಿವಿಯ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದ ಕೇರಳದ ವಿದ್ಯಾರ್ಥಿನಿ(22) ಮೇಲೆ ಆಟೋ ಚಾಲಕ ಹಾಗೂ ಆತನ ಇಬ್ಬರು ಸ್ನೇಹಿತರು ಅತ್ಯಾಚಾರವೆಸಗಿದ್ದಾರೆ. ಯುವತಿ ತೀವ್ರ ಮಾನಸಿಕ ಮತ್ತು ದೈಹಿಕ ಅಘಾತಕ್ಕೊಳಗಾಗಿದ್ದು, ಕಸ್ತೂರ್ಬಾ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈಕೆ ಕಾಲೇಜ್ ಗ್ರಂಥಾಲಯದಲ್ಲಿ ಎಂದಿನಂತೆ ಓದು ಮುಗಿಸಿ ಗುರುವಾರ ರಾತ್ರಿ 11.30ಕ್ಕೆ ವಿವಿಯ ಹಿಂಬದಿಯಲ್ಲಿರುವ ಮಾಂಡೋವಿ ಪ್ಲಾಜಾ ಎಂಬ ವಸತಿಗೃಹಕ್ಕೆ ನಡೆದುಕೊಂಡು ಹೋಗುತ್ತಿದ್ದಳು. ಆಗ ಆಟೋದಲ್ಲಿ ಬಂದ ಮೂವರು ಆಕೆಯನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಸುಮಾರು 12 ಗಂಟೆ ಹೊತ್ತಿಗೆ ಅದೇ ರಸ್ತೆಗೇ ಆಕೆಯನ್ನು ತಂದು ಬಿಟ್ಟು ಹೋಗಿದ್ದಾರೆ. ಅಲ್ಲಿಂದ ಆಕೆ ವಸತಿಗೃಹಕ್ಕೆ ಹೋಗಿ ಅಲ್ಲಿನ ರಾತ್ರಿ ಕಾವಲುಗಾರನಿಗೆ ವಿಷಯ ತಿಳಿಸಿದ್ದಾಳೆ. ನಂತರ ಆಕೆಯನ್ನು ಸ್ಥಳೀಯ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅತ್ಯಾಚಾರದ ವೇಳೆ ಆಕೆ ಪ್ರತಿಭಟಿಸಿದ್ದರಿಂದ ಆಕೆಯ ಕಾಲಿನ ಮೂಳೆ ಮುರಿದಿದ್ದು, ಶುಕ್ರವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಆಕೆಗೆ ನೀಡಲಾಗಿದ್ದ ಅರವಳಿಕೆ ಪ್ರಭಾವದಿಂದ ತಕ್ಷಣಕ್ಕೆ ಪೊಲೀಸರಿಗೆ ಆಕೆಯಿಂದ ಹೆಚ್ಚಿನ ವಿವರಗಳನ್ನು ಪಡೆಯಲು ಸಾಧ್ಯವಾಗಿಲ್ಲ.
ಬೆಳಕಿಗೆ ಬಂದ ಮೊದಲ ಪ್ರಕರಣ: ಮಣಿಪಾಲ ವಿವಿಯ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ವದ 50 ದೇಶಗಳ 8000ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ ಅರ್ಧದಷ್ಟು ವಿದ್ಯಾರ್ಥಿನಿಯರು. ಇಲ್ಲಿ ಇಂಥ ಸಾಮೂಹಿಕ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದದ್ದು ಇದೇ ಮೊದಲು.
ಉಡುಪಿ ಎಸ್ಪಿ ಡಾ. ಬೋರಲಿಂಗಯ್ಯ ಖುದ್ದು ಮುತುವರ್ಜಿಯಿಂದ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಪಶ್ಚಿಮವಲಯದ ಪ್ರಭಾರ ಪೊಲೀಸ್ ಮಹಾ ನಿರೀಕ್ಷಕ ಅಭಿಷೇಕ್ ಗೋಯಲ್ ಮಣಿಪಾಲಕ್ಕೆ ಆಗಮಿಸಿದ್ದಾರೆ. ಉಡುಪಿಯ ಡಿವೈಎಸ್ಪಿ ಡಾ. ಮಾನೆ, ಕುಂದಾಪುರ ಡಿವೈಎಸ್ಪಿ ಯಶೋದಾ ಒಂಟಗೋಡಿ ತನಿಖೆಗೆ ಸಹಕರಿಸುತ್ತಿದ್ದಾರೆ.
ಉಪಯುಕ್ತ ಮಾಹಿತಿ ಲಭ್ಯ: ವಿವಿಯಿಂದ ಕೇವಲ 500 ಮೀ. ದೂರದಲ್ಲಿ ವಿದ್ಯಾರ್ಥಿನಿ ವಾಸಿಸುವ ವಸತಿಗೃಹವಿದ್ದು, ಆ ರಸ್ತೆಯಲ್ಲಿ ಬೀದಿ ದೀಪಗಳಿವೆ. ಅನತಿ ದೂರದಲ್ಲಿ ಮಣಿಪಾಲ ವಿವಿಯ ಕುಲಪತಿ ಬಂಗ್ಲೆ ಇದೆ, ಕೇವಲ 1 ಕಿ.ಮೀ. ದೂರದಲ್ಲಿ ಡಿಸಿ ಕಚೇರಿ ಇದೆ. ಈ ರಸ್ತೆಯ ಅಕ್ಕಪಕ್ಕದಲ್ಲಿ ತಡ ರಾತ್ರಿಯವರೆಗೂ ಸಾಕಷ್ಟು ಮಂದಿ ಓಡಾಡುತ್ತಾರೆ. ಆಕೆ ವಾಸಿಸುವ ರಸ್ತೆಗಳಲ್ಲಿ ಹತ್ತಾರು ಬಹುಮಹಡಿ ವಸತಿ ಗೃಹಗಳಿವೆ. ಮಣಿಪಾಲದ 3 ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳಿವೆ. ಇವೆಲ್ಲದರ ನಡುವೆ ಯುವತಿಯೊಬ್ಬಳ ಅಪಹರಣ ನಡೆದಿದೆ ಎನ್ನುವುದೇ ಅತ್ಯಂತ ಅಚ್ಚರಿಗೆ ಕಾರಣವಾಗಿದೆ.
ನಗರದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳಲ್ಲಿ ಮಧ್ಯರಾತ್ರಿ ಸಂಚರಿಸಿರುವ ಆಟೋಗಳ ಜಾಡು ಹಿಡಿದು ಕಾರ್ಯಾಚರಣೆಗೆ ಇಳಿದಿರುವ ಪೊಲೀಸರಿಗೆ ಒಂದಷ್ಟು ಉಪಯುಕ್ತ ಮಾಹಿತಿಗಳು ಲಭ್ಯವಾಗಿವೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವ ನಿರೀಕ್ಷೆ ಇದೆ ಎಂದು ಎಸ್ಪಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement