ಇಂದು ಮಣಿಪಾಲಕ್ಕೆ ಗೃಹ ಸಚಿವ ಜಾರ್ಜ್
ಬೆಂಗಳೂರು: ಉಡುಪಿ ಜಿಲ್ಲೆ ಮಣಿಪಾಲದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಕ್ಷಣವೇ ಮಣಿಪಾಲಕ್ಕೆ ತೆರಳಿ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಇದೊಂದು ಆಘಾತಕಾರಿ ವಿಚಾರ. ಅತ್ಯಾಚಾರವೆಸಗಿದವರ ಮೇಲೆ ಕ್ರಮ ಕೈಗೊಳ್ಳುವುದರ ಜತೆಗೆ ಅತ್ಯಾಚಾರಕ್ಕೊಳಗಾದ ಯುವತಿಗೆ ಸಾಂತ್ವನ ಹೇಳಿ ಆಕೆಯನ್ನು ಸಂತೈಸುವುದು ಕೂಡ ಸರ್ಕಾರದ ಜವಾಬ್ದಾರಿ. ಆದ್ದರಿಂದ ಕೂಡಲೇ ಮಣಿಪಾಲಕ್ಕೆ ತೆರಳಿ ಯುವತಿಗೆ ಸಾಂತ್ವನ ಹೇಳಿ ಎಂದು ಅವರು ಗೃಹ ಸಚಿವರಿಗೆ ಸೂಚಿಸಿದ್ದಾರೆ. ಇದರ ಜತೆಗೆ ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರ ಮೇಲೆ ಅತ್ಯಾಚಾರದಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕು. ಕಾಲೇಜು ವಿದ್ಯಾರ್ಥಿನಿಯರಿಗೆ ಹೆಚ್ಚಿನ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದೂ ಸಲಹೆ ಮಾಡಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು, ಪೂರ್ವಯೋಜಿತ ಕಾರ್ಯಕ್ರಮಗಳಿರುವುದರಿಂದ ತಕ್ಷಣವೇ ಉಡುಪಿಗೆ ತೆರಳಲು ಸಾಧ್ಯವಾಗಿಲ್ಲ. ಭಾನುವಾರವೇ ಅಲ್ಲಿಗೆ ತೆರಳಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.