ಕೇದಾರ ಮಂದಿರದ 18 ಟ್ರಸ್ಟಿಗಳು ನಾಪತ್ತೆ
ದಾವಣಗೆರೆ: ಕೇದಾರನಾಥ ಮಂದಿರ ಟ್ರಸ್ಟ್ನ 18 ಮಂದಿ ಟ್ರಸ್ಟಿಗಳು ಜಲಪ್ರಳಯದ ವೇಳೆ ನಾಪತ್ತೆಯಾಗಿದ್ದು, ಸದ್ಯಕ್ಕೆ ಯಾರ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ ಎಂಬ ಅಂಶವನ್ನು ಅಲ್ಲಿನ ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ. ಜಲಪ್ರಳಯದ ದಿನದಂದು ದೇವಸ್ಥಾನದ ಆವರಣದಲ್ಲಿ, ಕೇದಾರನಾಥದ ಮಂದಿರದ ಮುಂಭಾಗದಲ್ಲಿ ಇದ್ದಂತಹ ಸುಮಾರು 18 ಮಂದಿ ಟ್ರಸ್ಟಿಗಳೂ ಜಲಸಮಾಧಿಯಾಗಿದ್ದಾರೋ ಅಥವಾ ಜೀವಂತವಾಗಿದ್ದಾರೋ ಎಂಬುದಂತೂ ಸ್ಪಷ್ಟವಾಗಿಲ್ಲ. ಯಾರೊಬ್ಬರ ಬಗ್ಗೆ ಮಾಹಿತಿ ಈವರೆಗೂ ಲಭ್ಯವಾಗಿಲ್ಲ ಎನ್ನಲಾಗಿದೆ. ಟ್ರಸ್ಟಿಗಳು ಕಣ್ಮರೆಯಾದರೆ ನಿತ್ಯ ಕೇದಾರ ಬಾಬಾನ ಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನ ನೆರವೇರಿಸುತ್ತಿದ್ದ ಅರ್ಚಕರ ಪೈಕಿ ಯಾರೊಬ್ಬರಿಗೂ ಜಲಪ್ರಳಯದಿಂದ ಯಾವುದೇ ಅನಾಹುತವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಲ್ಲದೇ, ಮಂದಿರದಲ್ಲಿ ಪೂಜೆ ನೆರವೇರಿಸುತ್ತಿದ್ದವರೂ ಕೂಡ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಟ್ರಸ್ಟಿಗಳ ಬಗ್ಗೆ ಮಾತ್ರ ಮಾಹಿತಿ ಇಲ್ಲ ಎಂಬುದಾಗಿ ಗೊತ್ತಾಗಿದೆ.