ತಮಿಳುನಾಡಿಗೆ ಹರಿದ 2000 ಕ್ಯುಸೆಕ್ ನೀರು
ಮಂಡ್ಯ: ಕೊಡಗಿನಲ್ಲಿ ಮಳೆಯ ಅಬ್ಬರ ಇಳಿಯುತ್ತಿದ್ದಂತೆ ಕೆಆರ್ಎಸ್ ಅಣೆಕಟ್ಟೆಯಲ್ಲಿ ಅಷ್ಟೋ ಇಷ್ಟೋ ಸಂಗ್ರಹವಾಗುತ್ತಿದ್ದ ನೀರನ್ನು ಕೂಡಾ ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಡುವ ಹುನ್ನಾರ ನಡೆಸಿರುವುದು ಬೆಳಕಿಗೆ ಬಂದಿದೆ. ಕೆಆರ್ಎಸ್ ಅಣೆಕಟ್ಟೆಯಲ್ಲಿ ಶನಿವಾರ ಬೆಳಗ್ಗೆ 6 ಗಂಟೆ ವೇಳೆಗೆ ನೀರಿನ ಮಟ್ಟ 78.70 ಅಡಿ ಇತ್ತು. ತಮಿಳುನಾಡಿಗೆ ಶುಕ್ರವಾರ ರಾತ್ರಿಯಿಂದಲೇ 2000ಕ್ಕೂ ಅಧಿಕ ಕ್ಯುಸೆಕ್ ನೀರನ್ನು ನದಿಯ ಮೂಲಕ ಬಿಡಲಾಗುತ್ತಿದೆ. ಈ ಬಗ್ಗೆ ನೀರಾವರಿ ಅಧಿಕಾರಿಗಳು ಯಾವುದೇ ನಿಖರ ಉತ್ತರ ನೀಡಲು ಬಯಸುತ್ತಿಲ್ಲ. ಆದರೆ, ಬೆಳಗ್ಗೆ 6 ಗಂಟೆ ವೇಳೆಗೆ ಗೇಜ್ ಲೆಕ್ಕದಂತೆ ಒಳಹರಿವು 7420 ಕ್ಯುಸೆಕ್, ಹೊರ ಹರಿವು 2064 ಕ್ಯುಸೆಕ್ ಇತ್ತು. ಇದರಿಂದ ತಮಿಳುನಾಡಿಗೆ 2 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರು ಬಿಡುತ್ತಿರುವುದು ಖಚಿತವಾಗಿದೆ. ಆದರೆ, ಶನಿವಾರ ಸಂಜೆ 6 ಗಂಟೆ ವೇಳೆಗೆ ಕೆಆರ್ಎಸ್ ನೀರಿನಮಟ್ಟ 79.15 ಅಡಿ, ಒಳ ಹರಿವು 7046, ಹೊರ ಹರಿವು 1170 ಕ್ಯುಸೆಕ್ ಇತ್ತು.