ತ್ರಿಶಂಕು ಸ್ಥಿತಿಯಲ್ಲಿ ಕೇದಾರನಾಥ ಸಂತ್ರಸ್ತರು
ದಾವಣಗೆರೆ: ಜಲಪ್ರಳಯದಿಂದಾಗಿ ರಸ್ತೆ ಸಂಪರ್ಕ ಇಲ್ಲವಾಗಿದೆ. ನದಿಗಳು ಉಕ್ಕಿ ಹರಿದಿದ್ದರಿಂದ ಬೆಟ್ಟಗುಡ್ಡಗಳಲ್ಲಿ ಅತಂತ್ರರಾಗಿರುವ ಸಹಸ್ರಾರು ಮಂದಿ ಕಳೆದ 5-6 ದಿನಗಳಿಂದ ಅನ್ನಾಹಾರ, ನೀರೂ ಇಲ್ಲದೆ ನಿತ್ರಾಣರಾಗಿದ್ದಾರೆ. ಇವರ ರಕ್ಷಣೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಮುಂದಾಗಬೇಕೆಂದು ಉತ್ತರಾಖಂಡದ ವಿವಿಧೆಡೆ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗರ ಮನವಿ. ರುದ್ರಪ್ರಯಾಗ- ಕೇದಾರನಾಥ ಹೆದ್ದಾರಿ ಸಂಪೂರ್ಣ ನಾಶವಾಗಿದೆ. ಕಳೆದ ಐದಾರು ದಿನಗಳಿಂದಲೂ ಮೈ ಕೊರೆಯುವ ಚಳಿಯಲ್ಲಿ ಮಕ್ಕಳು, ಹಿರಿಯರು, ವಯೋವೃದ್ಧರಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಊಟವಿಲ್ಲದೆ, ಕುಡಿಯುವುದಕ್ಕೆ ನೀರೂ ಸಿಗದೇ ನಿತ್ರಾಣರಾಗಿದ್ದಾರೆ. ವಿವಿಧೆಡೆ ಭಾರತೀಯ ಭೂಸೇನೆ, ವಾಯುಪಡೆ, ನೌಕಾಸೇನೆ ಪರಿಹಾರ ಕಾರ್ಯವನ್ನು ಕೈಗೊಂಡಿದ್ದರೂ ಸಾವಿರಾರು ಮಂದಿಗೆ ಯಾವುದೇ ನೆರವೂ ಸಿಗುತ್ತಿಲ್ಲ. ಅವರಿಗೆ ಸರ್ಕಾರ ನೆರವಿನ ಹಸ್ತ ಚಾಚಲಿ ಎಂಬುದು ಅವರ ಆಗ್ರಹ.
ಸೇನೆಗಳ ಜೊತೆಗೆ ಖಾಸಗಿ ಸಂಸ್ಥೆಗಳು: ಮೂರೂ ಸೇನೆಗಳು ಸಂತ್ರಸ್ಥರ ನೆರವಿಗೆ ಹಗಲಿರುಳು ಶ್ರಮಿಸುತ್ತಿವೆ. ಜೂ.24ರಿಂದ ಮತ್ತೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದ್ದು, ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಸೇನೆಯೊಂದಿಗೆ ಖಾಸಗಿ ವಾಯುಯಾನ ಸಂಸ್ಥೆಗಳು ಶ್ರಮಿಸುತ್ತಿವೆ.
ನೆರವಿಗೆ ಮುಂದಾದ ಕೇದಾರ ಜಗದ್ಗುರು: ದೆಹಲಿಯ ದಾನಾ ಪಾನಿ, ಹರಿದ್ವಾರದ ಗಾಯತ್ರಿ ಸ್ವಯಂ ಸೇವಾ ಸಂಸ್ಥೆ ಹಾಗೂ ಪಂಚ ಪೀಠಗಳಲ್ಲಿ ಒಂದಾಗಿರುವ ಕೇದಾರ ಪೀಠದ ಜಗದ್ಗುರುಗಳಾದ ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ, ಕೇದಾರ ಪೀಠದ ಟ್ರಸ್ಟ್ ಅಧ್ಯಕ್ಷ ಗಣೇಶ ಪೂಜಾರ ಸೇರಿದಂತೆ ನೂರಾರು ಸ್ವಯಂ ಸೇವಕರು ಸಂತ್ರಸ್ತರತ್ತ ನೆರವಿನ ಹಸ್ತ ಚಾಚಿದ್ದಾರೆ.