ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಿಮ್ಮ ಸಂಖ್ಯೆ ಕಡಿಮೆಯಾದ್ರೆ ನೀವೇ ಓದಿಕೊಳ್ಳಿ!

Mainashree
Updated On : 22 Jun 2013, 11:26 am

ಕ.ಪ್ರ. ವಾರ್ತೆ  ಬೆಂಗಳೂರು  ಜೂ.22
ನಮ್ಮಿಂದ ಶಿಕ್ಷಣ ನೀಡಲು ಸಾಧ್ಯವಿಲ್ಲ, ನೀವೇ ಓದಿಕೊಳ್ಳಿ!
ಇಂತಹ ಅರ್ಥ ಬರುವ ಸುತ್ತೋಲೆಯನ್ನು ಸ್ವತಃ ಸರ್ಕಾರವೇ ಹೊರಡಿಸಿದೆ. ರಾಜ್ಯದ 359 ಸರ್ಕಾರಿ ಪದವಿ ಕಾಲೇಜಿನಲ್ಲಿ ಯಾವುದೇ ಭಾಷೆಗೆ 5ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಲ್ಲಿ ಸ್ವಯಂ ಅಧ್ಯಯನ ಮಾಡಿಕೊಳ್ಳಬೇಕು. ಇನ್ನು ಐಚ್ಛಿಕ ವಿಷಯಗಳಿಗೆ 15 ವಿದ್ಯಾರ್ಥಿಗಳು ದಾಖಲಾಗದಿದ್ದಲ್ಲಿ ಅಂತಹವರನ್ನು ಹತ್ತಿರದ ಸರ್ಕಾರಿ ಕಾಲೇಜಿಗೆ ವರ್ಗಾಯಿಸಬೇಕು ಎಂದು ಸರ್ಕಾರ ಹೇಳಿದೆ.
ಶಾಲೆ ಬದಲು, ಪದವಿ ಕಾಲೇಜು ಗುರಿ: ಇದಲ್ಲದೇ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮಗಿಷ್ಟವಾದ ಐಚ್ಛಿಕ ವಿಷಯಗಳನ್ನು ಓದಲು ಸಾಧ್ಯವಿಲ್ಲ, 15ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ವಿಷಯವನ್ನು ಆಯ್ದುಕೊಂಡು ಓದಬೇಕು.
ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಳಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತೇವೆ ಎಂದು ಹಿಂದಿನ ಬಿಜೆಪಿ ಸರ್ಕಾರ ಹೇಳಿದ್ದಾಗ ಸದನದ ಒಳಗೆ ಹಾಗೂ ಹೊರಗೆ ಗದ್ದಲವೆಬ್ಬಿಸಿದ್ದ ಪಕ್ಷ ಅಧಿಕಾರಕ್ಕೆ ಬಂದಾಗ ಮತ್ತದೆ ಕಾರ್ಯಕ್ಕೆ ಮುಂದಾಗಿದೆ. ಆದರೆ ಪ್ರಾಥಮಿಕ ಶಾಲೆಯ ಬದಲು, ಪದವಿ ಕಾಲೇಜುಗಳನ್ನು ಗುರಿಯಾಗಿಸಿಕೊಂಡಿದೆಯಷ್ಟೆ.
ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಸುಮಾರು 359 ಪದವಿ ಕಾಲೇಜುಗಳನ್ನು ನಡೆಸುತ್ತಿದೆ. ಯಾವುದೆ ತಾಲೂಕಿನಲ್ಲೂ ಎರಡಕ್ಕಿಂತ ಹೆಚ್ಚಿನ ಸಂಖ್ಯೆಯ ಸರ್ಕಾರಿ ಪದವಿ ಕಾಲೇಜುಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕಡಿಮೆಯಾದಲ್ಲಿ ಶಿಕ್ಷಣ ನೀಡುವುದಿಲ್ಲ ಎಂದ ಕೈತೊಳೆದುಕೊಳ್ಳುವ ಸರ್ಕಾರದ ಕ್ರಮಕ್ಕೆ ಶಿಕ್ಷಣ ವಲಯದಿಂದ ವ್ಯಾಪಕ ಟೀಕೆಗಳು ಬಂದಿವೆ.
ಮೊದಲನೆಯದಾಗಿ ಸಾರ್ಕರಿ ಕಾಲೇಜುಗಳಿಗೆ ಪ್ರವೇಶ ಪಡೆಯುವವರ ಸಂಖ್ಯೆ ಕಡಿಮೆಯಿರುತ್ತದೆ. ವಿದ್ಯಾರ್ಥಿಗಳನ್ನು ಕಾಲೇಜಿನತ್ತ ಆಕರ್ಷಿಸುವ ಬದಲು ಬಡಿದೋಡಿಸುವ ಕಾರ್ಯ ಮಾಡಿದರೆ ಸರ್ಕಾರಿ ಕಾಲೇಜುಗಳನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ. ಮತ್ತೊಂದು ವಿಚಿತ್ರವೆಂದರೆ ಈ ಸುತ್ತೋಲೆಯನ್ನು ಮೀರಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದರೆ ಅದಕ್ಕೆ ಪ್ರಾಂಶುಪಾಲರೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ಇಲಾಖೆ ನೀಡಿದೆ.

ಪ್ರವೇಶ ಮಾಡಿಕೊಂಡಲ್ಲಿ ನೀವೇ ಹೊಣೆಗಾರರು!
ಸರ್ಕಾರಿ ಕಾಲೇಜಿನಲ್ಲಿ ಐಚ್ಛಿಕ ವಿಷಯಕ್ಕೆ 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದಲ್ಲಿ ಮುಂದಿನ ಎಲ್ಲ ಪರಿಣಾಮಗಳಿಗೆ ಪ್ರಾಂಶುಪಾಲರೇ ನೇರ ಹೊಣೆಗಾರರಾಗಿರಬೇಕಾಗುತ್ತದೆ ಎಂದು ಸರ್ಕಾರವು ರಾಜ್ಯದ 359 ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರಿಗೆ ಎಚ್ಚರಿಸಿದೆ. ಇದರರ್ಥ ಮೊದಲನೇಯ ವಿದ್ಯಾರ್ಥಿಗೆ ಯಾವುದೇ ಪ್ರಾಂಶುಪಾಲರು ಪ್ರವೇಶ ನೀಡುವ ಮುಂಚೆ ಇನ್ನು 14 ವಿದ್ಯಾರ್ಥಿಗಳನ್ನು ತಯಾರಿ ಮಾಡಿಕೊಂಡಿರಬೇಕು ಅಥವಾ ಮೊದಲನೇಯ ವಿದ್ಯಾರ್ಥಿಯೇ ಉಳಿದ 14 ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಬೇಕು. ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ಯಾವ ಸಿಬ್ಬಂದಿ ಇಂತಹ ಹೊಣೆಯನ್ನು ಹೊರಲು ತಯಾರಿರುತ್ತಾರೆ?

ಇಲಾಖೆಯ ನೆಪವೇನು?
ರಾಜ್ಯದಲ್ಲಿ 359 ಸರ್ಕಾರಿ ಕಾಲೇಜುಗಳಿವೆ. ಉಪನ್ಯಾಸಕರ ಕೊರತೆಯ ಕಾರಣದಿಂದ 10,500 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರ್ಕಾರ ಆದೇಶಿಸಿದೆ. ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿದರೆ ಸರ್ಕಾರದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ ಎನ್ನುವುದು ಕಾಲೇಜು ಶಿಕ್ಷಣ ಇಲಾಖೆಯ ಲೆಕ್ಕಾಚಾರ. ಆದರೆ ಕಳೆದ ವರ್ಷದ 30 ಕೋಟಿ ಸಂಬಳವನ್ನೇ ನೀಡಲು ಇಲಾಖೆ ವಿಫಲವಾಗಿತ್ತು. ಹೆಚ್ಚಿನ ಆರ್ಥಿಕ ಹೊರೆ ತಪ್ಪಿಸಿಕೊಳ್ಳಲು ಇಲಾಖೆ ಈ ಪ್ರಯೋಗಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಹೀಗೂ ಮಾಡಬಹುದಲ್ಲವೆ?

ಉಪಗ್ರಹ ಅಥವಾ ಅಂತರ್ಜಾಲದ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ರಾಜ್ಯದ ಕೆಲ ವಿಶ್ವ ವಿದ್ಯಾಲಯಗಳಲ್ಲಿ ಜಾರಿಯಲ್ಲಿದೆ. ಉಪನ್ಯಾಸಕರ ಕೊರತೆ ನೀಗಿಸಲು ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ತಂತ್ರಜ್ಞಾನದ ನೆರವು ತೆಗೆದುಕೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣವನ್ನೇ ನೀಡದಿರುವುದಕ್ಕಿಂತ ಇಂತಹ ಪ್ರಯತ್ನ ಅಲ್ಪಮಟ್ಟಿಗೆ ಸಹಾಯವಾಗಬಹುದು.
ಸುತ್ತೋಲೆಯಲ್ಲಿ ಏನಿದೆ?
'ಬಿ.ಎ, ಬಿಎಸ್‌ಸಿ, ಬಿಬಿಎಂ ಹಾಗೂ ಬಿಸಿಎ ಕೋರ್ಸ್‌ಗಳ ಐಚ್ಛಿಕ ವಿಷಯಗಳಿಗೆ ಕನಿಷ್ಠ 15 ವಿದ್ಯಾರ್ಥಿಗಳು ಪ್ರವೇಶ ಪಡೆದಿರಬೇಕು. ಪಡೆಯದಿದ್ದಲ್ಲಿ 15ಕ್ಕಿಂತ ಹೆಚ್ಚು ಪ್ರವೇಶ ಪಡೆದ ಐಚ್ಛಿಕ ವಿಷಯಕ್ಕೆ ವರ್ಗಾಯಿಸಬೇಕು. ಇಲ್ಲವಾದಲ್ಲಿ ಕಡ್ಡಾಯವಾಗಿ 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಾರದು. ನೀಡಿದರೂ ಪಕ್ಕದ ಸರ್ಕಾರಿ ಕಾಲೇಜಿಗೆ ವರ್ಗಾಯಿಸಬೇಕು. ಅದೇ ರೀತಿ ಭಾಷೆಗಳಿಗೆ 5ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಆಯ್ಕೆಮಾಡಿಕೊಂಡಲ್ಲಿ ಅಂತಹ ವಿದ್ಯಾರ್ಥಿಗಳು ಸ್ವಯಂ ಅಧ್ಯಯನ ಮಾಡಬೇಕು. ಈ ವಿಷಯಉಲ್ಲಂಘಿಸಿದರೆ ಪ್ರಾಂಶುಪಾಲರೇ ನೇರ ಹೊಣೆ.' ಈ ಸುತ್ತೋಲೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಒಂದೆಡೆ ಪ್ರವೇಶವನ್ನೇ ನೀಡಬೇಡಿ ಎನ್ನುತ್ತಾರೆ. ಮತ್ತೊಂದೆಡೆ ಬೇರೆ ಕಾಲೇಜಿಗೆ ವರ್ಗಾಯಿಸಿ ಎಂದು ಹೇಳುತ್ತಾರೆ. ಇದಲ್ಲದೆ 15 ವಿದ್ಯಾರ್ಥಿಗಳಿರುವ ಐಚ್ಛಿಕ ವಿಷಯಗಳಿಗೆವರ್ಗಾಯಿಸಿ ಎಂದು ಕಾಲೇಜು ಶಿಕ್ಷಣ ಇಲಾಖೆ ಆದೇಶಿಸುತ್ತದೆ. ಇಂತಹ ಗೊಂದಲಗಳನ್ನು ಪ್ರಾಂಶುಪಾರೆದುರುಇರಿಸಿದರೆ ಪ್ರವೇಶವನ್ನೆ ನೀಡದೆ ಸುಮ್ಮನಾಗುತ್ತಾರೆ.

ಅರ್ಥಿಕ ಮಾನದಂಡ ಬೇಡ
ಶಿಕ್ಷಣಕ್ಕಾಗಿ ಒಬ್ಬ ವಿದ್ಯಾರ್ಥಿ ಬಂದರೂ ಅವಕಾಶ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ. ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿ ಸರ್ಕಾರ ಹೊರಡಿಸುವ ಆದೇಶಗಳು ಶೈಕ್ಷಣಿಕ ಮಾನದಂಡ ಹೊಂದಿರಬೇಕು, ಆರ್ಥಿಕ ಮಾನದಂಡದಿಂದ ಶಿಕ್ಷಣವನ್ನು ಅಳೆಯಲು ಸಾಧ್ಯವಿಲ್ಲ. ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ವಿಧಾನಸೌಧದಲ್ಲಿ ಕುಳಿತು ಆದೇಶ ನೀಡಿದರೆ ಗ್ರಾಮೀಣ ವಿದ್ಯಾರ್ಥಿಗಳ ಕನಸು ನುಚ್ಚು ನೂರಾಗುತ್ತದೆ.
- ಡಾ.ಎಂ.ಎಸ್.ತಿಮ್ಮಪ್ಪ,  ವಿಶ್ರಾಂತ ಕುಲಪತಿ

ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement