ಎಜುಕೇಷನ್ ಫೇರ್ಗೆ ಉತ್ತಮ ಪ್ರತಿಕ್ರಿಯೆ
ಕ.ಪ್ರ. ವಾರ್ತೆ ಮೈಸೂರು ಜೂ.24
ವೃತ್ತಿಪರ ಕೋರ್ಸ್ಗಳ ಪ್ರವೇಶ ಕುರಿತಂತೆ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ನೆರವಾಗಲು 'ಕನ್ನಡಪ್ರಭ' ಮತ್ತು 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಮೈಸೂರಿನಲ್ಲಿ ಏರ್ಪಡಿಸಿದ್ದ ಎಜುಕೇಷನ್ ಫೇರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದ ಸೈಲೆಂಟ್ ಶೋರ್ಸ್ ರೆಸಾರ್ಟ್ನಲ್ಲಿ ಭಾನುವಾರ ಏರ್ಪಡಿಸಿದ್ದ ಎಜುಕೇಷನ್ ಫೇರ್ ಅನ್ನು ನಟಿ ಭಾವನಾ, ಎಐಸಿಟಿಇ ನಿರ್ದೇಶಕ ಡಾ.ಕೆ. ಶ್ರೀಕೃಷ್ಣ ಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಶ್ರೀಕೃಷ್ಣ ಕುಮಾರ್, ರಾಜ್ಯದಲ್ಲಿ ಎಂಜಿನಿಯರಿಂಗ್, ಎಂಬಿಎಗೆ ಸಂಬಂಧಿಸಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿವೆ. ಆದರೆ, ಅವುಗಳು ಎಐಸಿಟಿಇಯಿಂದ ಮಾನ್ಯತೆ ಪಡೆದಿರುವುದಿಲ್ಲ. ಇಂತಹ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಇಂದು ಪರಿತಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಳ್ಳೆಯ ಕಾಲೇಜುಗಳ ಬಗ್ಗೆ ಮಾಹಿತಿ ನೀಡಲು ಕನ್ನಡಪ್ರಭ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಮುಂದಾಗಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ದಿನವಿಡಿ ನಡೆದ ಮೇಳದಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ಎಂಜಿನಿಯರಿಂಗ್, ಎಂಬಿಎ, ಫ್ಯಾಶನ್ ಡಿಸೈನಿಂಗ್, ಬೋಧನೆ, ನರ್ಸಿಂಗ್ ಮುಂತಾದ ವೃತ್ತಿಪರ ಕೋರ್ಸ್ಗೆ ಸಂಬಂಧಿಸಿದ ಅಗತ್ಯ ಮಾಹಿತಿ ಪಡೆದರು. ಈ ಮೇಳದಲ್ಲಿ ರಾಜ್ಯದ 20ಕ್ಕೂ ಅಧಿಕ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಭಾಗವಹಿಸಿ ಭವಿಷ್ಯತ್ತಿನ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಸಲಹೆ, ಮಾರ್ಗದರ್ಶನ ನೀಡಿದವು.
ಹಲವು ಸಂಸ್ಥೆಗಳು ಭಾಗಿ: ಅಲಯನ್ಸ್ ವಿಶ್ವವಿದ್ಯಾಲಯ, ಎಐಎಂಎಸ್, ಕೃಪಾನಿಧಿ ಬ್ಯುಸಿನೆಸ್ ಸ್ಕೂಲ್, ಇಂಪೀರಿಯಲ್ ಕಾಲೇಜ್, ನೋಬೆಲ್ ಸ್ಕೂಲ್ ಆಫ್ ಬ್ಯುಸಿನೆಸ್, ಶಾರದಾ ಸ್ಕೂಲ್ ಆಫ್ ಆರ್ಕಿಟೆಕ್ಟರ್, ಪಿಎನ್ಎಸ್ಐಟಿ, ಎಟಿಎಂಇ, ಮಹಾಜನಸ್ ಫ್ಯೂಚರ್ ಪರ್ಫೆಕ್ಟ್, ವಿಕ್ರಂ ಸ್ಕೂಲ್ ಆಫ್ ನರ್ಸಿಂಗ್, ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಫ್ಯಾಶನ್ ಡಿಸೈನಿಂಗ್ ಇನ್ಸ್ಟಿಟ್ಯೂಟ್ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿದ್ದವು.
ದ್ವಿತೀಯ ಪಿಯುಸಿ ಫಲಿತಾಂಶ ಬಂದಾಗ ನಾನು ಗೊಂದಲದಲ್ಲಿದ್ದೆ. ಯಾವ ಕೋರ್ಸ್ಗೆ ಸೇರಬೇಕು, ಯಾವ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎಂಬುದನ್ನು ನನ್ನನ್ನ ಕಾಡುತ್ತಿತ್ತು. ಆದರೆ, ಈ ಮೇಳದಿಂದ ನನಗೆ ಸ್ಪಷ್ಟ ಮಾಹಿತಿ ಸಿಕ್ಕಿತು ಎಂದು ವಿದ್ಯಾರ್ಥಿನಿ ಅನ್ನಪೂರ್ಣ ಅನಿಸಿಕೆ ಹಂಚಿಕೊಂಡರು.
ಮತ್ತೊಬ್ಬ ವಿದ್ಯಾರ್ಥಿನಿ ಚಂದನ, ಈ ಮೇಳವು ಸಾಕಷ್ಟು ಮಾಹಿತಿ ನೀಡಿತು. ಉತ್ತಮ ಕಾಲೇಜು ಹಾಗೂ ಅವಕಾಶ ಕಲ್ಪಿಸಿಕೊಡುವ ಕೋರ್ಸ್ಗಳ ಬಗ್ಗೆ ನಾನು ಬಹಳಷ್ಟು ತಿಳಿದುಕೊಂಡೆ ಎಂದರು.
ಶಾರದಾ ಸ್ಕೂಲ್ ಆಫ್ ಆರ್ಕಿಟೆಕ್ಟರ್ನ ಶರ್ಮಾ ಮಾತನಾಡಿ, ಮೈಸೂರಿನಲ್ಲಿ ವಿದ್ಯಾರ್ಥಿಗಳಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರ್ಕಿಟೆಕ್ಚರಲ್ ಡಿಸೈನಿಂಗ್ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಹೆಚ್ಚು ಮಂದಿ ಮುಂದೆ ಬಂದಿದ್ದಾರೆ ಎಂದರು.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪಬ್ಲಿಕೇಶನ್ನ ಪ್ರಧಾನ ವ್ಯವಸ್ಥಾಪಕ ವಿನೋದ್ ನಾಯರ್, ಜಾಹೀರಾತು ವಿಭಾಗದ ಎಜಿಎಂ ಗುರುರಾಜ್, 6ರೇವ್ಸ್ ಮುಖ್ಯಸ್ಥ ಯುವರಾಜ್, ಚಿರಾಗ್ ಆಡ್ಸ್ ಸಿಇಒ ವಿವೇಕ ಅತಿಥಿಗಳಾಗಿ ಪಾಲ್ಗೊಂಡಿದ್ದರು.