ಗ್ಯಾಂಗ್ರೇಪ್ ನಾಲ್ವರು ವಶಕ್ಕೆ
ವೈದ್ಯ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆಟೋ ಚಾಲಕರನ್ನು...
ಉಡುಪಿ: ವೈದ್ಯ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ನಾಲ್ವರು ಆಟೋ ಚಾಲಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈಗಾಗಲೇ 30ರಿಂದ 40 ಜನರನ್ನು ವಿಚಾರಣೆಗೊಳಪಡಿಸಲಾಗಿದೆ. ನಿರ್ದಿಷ್ಟವಾಗಿ ಈ ನಾಲ್ವರು ಆಟೋ ಚಾಲಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವರೇ ಪ್ರಮುಖ ಅತ್ಯಾಚಾರಿಗಳಾಗಿದ್ದು ಬಂಧನದ ಪ್ರಕ್ರಿಯೆಗೊಳಿಪಡಿಸುವುದು ಬಾಕಿ ಇದೆ. ತನಿಖೆಗೆ ರಚಿಸಿರುವ 8 ತಂಡಗಳ ಪೈಕಿ 3 ತಂಡಗಳು ಮಣಿಪಾಲ ಹಾಗೂ ಸುತ್ತಲಿನ 10 ಸಾವಿರಕ್ಕೂ ಅಧಿಕ ಆಟೋಗಳನ್ನು ಪರಿಶೀಲನೆ ನಡೆಸಿ, ಚಾಲಕರನ್ನು ವಿಚಾರಣೆಗೊಳಪಡಿಸಿವೆ ಎಂದು ಎಸ್ಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.
ಗೃಹ ಸಚಿವ ಜಾರ್ಜ್ ಭೇಟಿ: ಅತ್ಯಾಚಾರಕ್ಕೊಳಗಾದ ವೈದ್ಯ ವಿದ್ಯಾರ್ಥಿನಿಯನ್ನು ಗೃಹ ಸಚಿವ ಕೆ.ಜೆ. ಜಾರ್ಜ್ ಮತ್ತು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಭಾನುವಾರ ಕೆಎಂಸಿ ಆಸ್ಪತ್ರೆಯಲ್ಲಿ ಭೇಟಿಯಾಗಿ, ಆಕೆಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿಮ್ಮೊಂದಿಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಯುವತಿಯ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ ಎಂದು ಯುವತಿಯ ತಾಯಿಗೆ ಭರವಸೆ ನೀಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳು ಎಲ್ಲ ರೀತಿಯಿಂದಲೂ ಒತ್ತಡ ಮುಕ್ತವಾಗಿವೆ. ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ರೀತಿಯ ಕಾರ್ಯಾಚರಣೆಗಳನ್ನು ನಡೆಸುವುದಕ್ಕೆ ಪೊಲೀಸ್ ಠಾಣೆಗಳು ಸ್ವತಂತ್ರವಾಗಿವೆ ಎಂದರು. ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಉಡುಪಿ ಹಾಗೂ ಮಂಗಳೂರಿನಲ್ಲಿ ಪ್ರತಿಭಟನೆ ಮುಂದುವರಿದಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಲಾಗುತ್ತಿದೆ.