ಕನ್ನಡ ಮೊದಲ ರಾಷ್ಟ್ರಕವಿ ಮನೆ ಪಾಳು ಬಿದ್ದ ಸ್ಮಾರಕ!
ಮಂಜೇಶ್ವರ(ಕೇರಳ): ಮಲೆಯಾಳಿ ರಾಷ್ಟ್ರಕವಿ ವೆಲತ್ತೋಳ್ಗೆ ಜಗತ್ ಪ್ರಸಿದ್ಧ ಸ್ಮಾರಕ, ಅದೇ ಕೇರಳದಲ್ಲಿದ್ದ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ಮನೆ ಪಾಳು ಬಿದ್ದ ಸ್ಮಾರಕ!
ಮೊದಲ ಕನ್ನಡ ರಾಷ್ಟ್ರಕವಿ ಮನ್ನಣೆ ಪಡೆದ ಮಂಜೇಶ್ವರ ಗೋವಿಂದ ಪೈ ಮನೆ ಎಲ್ಲೆಡೆ ಸೋರುತ್ತಿದೆ. ಗೋಡೆ ತುಂಬಾ ನೀರಿನ ಧಾರೆ. ಇದು ಕನ್ನಡಿಗರ ಕಣ್ಣೀರ ಧಾರೆಯ ಪ್ರತಿ ಬಿಂಬದಂತೆ ಕಾಣುತ್ತಿದೆ. ಒಳಗೆ 5 ಸಾವಿರ ಅಪರೂಪದ ಗ್ರಂಥಗಳಿವೆ. ಇಲ್ಲಿ ಕಾವಲುಗಾರ ಕೂಡಾ ಇಲ್ಲ. ಕಂಪೌಂಡ್ ಗೇಟ್ ಸಹಿತ ಅಲ್ಲಲ್ಲಿ ಕುಸಿದಿದೆ. ಹೀಗಾಗಿ ಇಲ್ಲಿ ಅನೈತಿಕ ಚಟುವಟಿಕೆಗಳೂ ನಡೆಯುತ್ತವೆ!
ಅದ್ಭುತ ಬಹುಭಾಷಾ ತಜ್ಞ, ಸಂಶೋಧಕ ನಡೆದಾಡಿದ್ದ ಮನೆ ಪರಿಸದರಲ್ಲಿ ಅಶ್ಲೀಲ ಚಟುವಟಿಕೆ ನಡೆಯುತ್ತಿರುವುದನ್ನು ಅಲ್ಲಿನ ಲೋಕಸಭೆ ಸದಸ್ಯ ಕರುಣಾಕರನ್ ವಿಷಾದದಿಂದ ಒಪ್ಪಿಕೊಳ್ಳುತ್ತಾರೆ. ಇಲ್ಲಿನ ಪಾವಿತ್ರ್ಯ ಉಳಿಸಲು ಕಾವಲುಗಾರರನ್ನು ನೇಮಿಸಬೇಕು. ಕಂಪೌಂಡ್ ದುರಸ್ತಿ ಮಾಡಬೇಕು ಎನ್ನುತ್ತಾರೆ ಸಂಸದ ಕರುಣಾಕರನ್.
ನಮ್ಮ ಸರ್ಕಾರಕ್ಕೆ ಗೊತ್ತಿಲ್ಲವೇ ಇದು?: ಪೈ ವಾರಸುದಾರರು, ಈ ಮನೆಯನ್ನು ಕೇರಳ ಸರ್ಕಾರಕ್ಕೆ ದಾನ ರೂಪದಲ್ಲಿ ನೀಡಿದ್ದರು. ಆದರೆ, ಕೇರಳ ಸರ್ಕಾರ ಅಲ್ಲಿ ಭೂಮಾಪನ ಇಲಾಖೆ ಕಚೇರಿ ತೆರೆದಿತ್ತು. ಇದನ್ನು ನೋಡಿ ಕ್ರುದ್ಧರಾದ ಜಾನಪದ ಸಂಶೋಧಕ ಡಿ.ಕೆ. ಚೌಟ ಅವರು ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಂದು ವೇಳೆ ಮಲೆಯಾಳ ರಾಷ್ಟ್ರಕವಿ ಮನೆಯನ್ನು ಇದೇ ರೀತಿ ಬಳಸಿಕೊಂಡಿದ್ದರೆ ಏನಾಗುತ್ತಿತ್ತು ಎಂದು ಸವಾಲು ಹಾಕಿದ್ದರು. ಕಚೇರಿ ಏನೋ ಖಾಲಿ ಮಾಡಿದರು. ಆದರೆ, ಮನೆ ಈಗ ಪಾಳು ಬಿದ್ದಿದೆ. ಕನ್ನಡಿಗರ ಪುಣ್ಯಕ್ಷೇತ್ರವಾಗಬೇಕಿದ್ದ ರಾಷ್ಟ್ರಕವಿ ಮನೆ ಹಾಳು ಸುರಿಯುತ್ತಿದೆ. ಕೇರಳ ಸರ್ಕಾರಕ್ಕೆ ಮನಸ್ಸಿಲ್ಲ, ಕರ್ನಾಟಕ ಸರ್ಕಾರಕ್ಕೆ ಗೊತ್ತಿಲ್ಲ ಎಂಬ ಪರಿಸ್ಥಿತಿ.
ಹೊಸ ಸಮಿತಿ: ಹಿಂದೊಮ್ಮೆ ಕೇರಳ ಸರ್ಕಾರ ರಚಿಸಿದ ಗೋವಿಂದ ಪೈ ಸ್ಮಾರಕ ಸಮಿತಿಯಲ್ಲಿ ಶಿವರಾಮ ಕಾರಂತರು, ಇದಿನಬ್ಬ ಸದಸ್ಯರು. ಸದ್ಯಕ್ಕೆ ಇದೇ ಸಮಿತಿ ಚಾಲ್ತಿಯಲ್ಲಿದೆ! ಇದೀಗ ಹೊಸ ಸ್ಮಾರಕ ಉಸ್ತುವಾರಿ ಸಮಿತಿ ರಚಿಸಿದ್ದು ಜಿಲ್ಲಾಡಳಿತ ಇನ್ನೂ ಘೋಷಿಸಿಲ್ಲ. 'ಕನ್ನಡಪ್ರಭ'ಕ್ಕೆ ದೊರೆತ ಮಾಹಿತಿಯಂತೆ ಸಮಿತಿಯಲ್ಲಿ 26 ಮಂದಿ ಇದ್ದು, ಸಮಿತಿಯಲ್ಲಿರುವ ರಮಾನಂದ ಬನಾರಿ ಮತ್ತು ಗಣಪತಿ ಭಟ್ ಇಬ್ಬರಿಗೆ ಮಾತ್ರ ಗೋವಿಂದ ಪೈಗಳ ಬಗ್ಗೆ ಅರಿವಿದೆ. ಸಮಿತಿಯಲ್ಲಿ 20 ಮಂದಿ ಮಲೆಯಾಳಿಗಳು, 24 ಮಂದಿಗೆ ರಾಷ್ಟ್ರಕವಿ ಗೋವಿಂದ ಪೈ ಎಂದರೆ ಗೊತ್ತಿಲ್ಲ, ಅವರ ಸಾಹಿತ್ಯ ಓದಿಲ್ಲ!
ಈ ಬಗ್ಗೆ ಡಿ.ಕೆ. ಚೌಟ ಹೀಗೆ ಹೇಳುತ್ತಾರೆ: ಇದರಲ್ಲಿ ಕಾಂಗ್ರೆಸ್, ಮುಸ್ಲಿಂ ಲೀಗ್ ಬಲ ಲೆಕ್ಕಾಚಾರದಲ್ಲಿ ಸದಸ್ಯರನ್ನು ಮಾಡಿದ್ದಾರೆ. ಅವರ ಬಳಿ ಗಿಳಿವಿಂಡು ಬಗ್ಗೆ ಕೇಳಿ, ಅವರಿಗೆ ಗೊತ್ತೆ ಇಲ್ಲ.
ಕೇರಳ ಸರ್ಕಾರ ಕನ್ನಡಿಗರನ್ನು ಗೌರವಿಸುತ್ತಾರೆ ಎಂದಾದರೆ, ಕರ್ನಾಟಕ ಸರ್ಕಾರ ಗಡಿನಾಡ ಕನ್ನಡಿಗರನ್ನು ಮರೆತಿಲ್ಲ ಎಂದಾದರೆ ಎರಡೂ ಸರ್ಕಾರ ಸೇರಿ ರಾಷ್ಟ್ರಕವಿಗಳ ಮನೆ ದುರಸ್ತಿ ಮಾಡಿ, ಚೆನ್ನಾಗಿ ನೋಡಿಕೊಳ್ಳಲಿ.
3 ವರ್ಷದ ಹಿಂದೆ ಇಲ್ಲಿ ಸಭೆ ಮಾಡಿದಾಗ ದುರಸ್ತಿ ಮಾಡಲು ಹಣ ಇಲ್ಲ ಎಂಬ ನೆವ ಬಂತು. ನಾನು 1 ಲಕ್ಷ, ವೀರಪ್ಪ ಮೊಯ್ಲಿ 1 ಲಕ್ಷ ತಕ್ಷಣ ನೀಡಿದೆವು. ಆ ಹಣ ಏನಾಯಿತು ಎಂದು ಗೊತ್ತಿಲ್ಲ.
ದೂರು ಕೊಟ್ಟಾಗ ಕೇರಳ ಸರ್ಕಾರ ಮಳೆ ಬಂದ ಹಾಗೆ ಬರುತ್ತದೆ. ಗಾಳಿ ಬಂದ ಹಾಗೆ ಹೋಗುತ್ತದೆ. ಇಲ್ಲಿ ಇರುವ ಸಮಿತಿ, ಟ್ರಸ್ಟ್ ಪ್ರತಿಷ್ಠಾನಗಳು ಹಲವು, ಏಕೆ ಮಾಡಿದ್ದಾರೆ? ಏನು ಮಾಡಬೇಕು? ಎಂಬುದು ಅದರಲ್ಲಿ ಇದ್ದವರಿಗೇ ಗೊತ್ತಿಲ್ಲ ಎನ್ನುತ್ತಾರೆ ಚೌಟ.
ರಾಷ್ಟ್ರಕವಿಯ ದುಃಸ್ಥಿತಿ, ಗಡಿನಾಡ ಕನ್ನಡಿಗರ ಪರಿಸ್ಥಿತಿ ಒಂದೇ. ತಾಯಿ ಮನೆಯವರು ಕೊಟ್ಟು ಹೋಗಿದ್ದಾರೆ, ಅತ್ತೆ ಮನೆಯವರಿಗೆ ಬೇಡ. ಒಟ್ಟಾರೆ ಈ ಸ್ಮಾರಕ ಅತ್ತೆ ಮನೆಯಲ್ಲಿರುವ ಕನ್ನಡ ಮಗಳಂತೆ ಆಗಿದೆ. ಆದರೆ ಈಗ ಕೇಂದ್ರ, ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಕವಿಯೂ ಆಗಿರುವ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮುಂದಿನ ಮಾರ್ಚ್ ಒಳಗೆ ಎಲ್ಲ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದ್ದಾರೆ. ಎಲ್ಲರೂ ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕಿದೆ.
ಜಿತೇಂದ್ರ ಕುಂದೇಶ್ವರ