ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತನಿಖೆಗೆ ಪೂರ್ಣ ಸಹಕರಿಸದ ವೈದ್ಯ ವಿದ್ಯಾರ್ಥಿನಿ

Mainashree
Updated On : 25 Jun 2013, 12:41 pm

ಉಡುಪಿ: ಮಣಿಪಾಲದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ವೈದ್ಯ ವಿದ್ಯಾರ್ಥಿನಿ ಪೊಲೀಸರಿಗೆ ಸರಿಯಾದ ಮಾಹಿತಿ ನೀಡುವುದಕ್ಕೆ ರಾಜಿಯಾಗಿಲ್ಲ. ಹೀಗಾಗಿ ತನಿಖೆಗೆ ಭಾರಿ ಹಿನ್ನಡೆಯಾಗಿದ್ದು, ಘಟನೆ ನಡೆದು 4 ದಿನವಾದರೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ.
ಪೊಲೀಸರು ಮಾನಸಿಕ ವೈದ್ಯರೊಬ್ಬರನ್ನು ಮಧ್ಯವರ್ತಿಯನ್ನಾಗಿ ಬಳಸಿಕೊಂಡಿದ್ದು ಅವರ ಜೊತೆಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ವಿದ್ಯಾರ್ಥಿನಿಯಿಂದ ಘಟನೆ ಮತ್ತು ಆರೋಪಿಗಳ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಅತ್ಯಾಚಾರ ನಡೆದ ಸ್ಥಳವನ್ನು ಗುರುತಿಸಿದ್ದರೂ ವಿದ್ಯಾರ್ಥಿನಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಕಾನೂನು ರೀತಿಯಲ್ಲಿ ಖಚಿತಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಏಕೆಂದರೆ ವಿದ್ಯಾರ್ಥಿನಿ ಒಪ್ಪಿಲ್ಲ. ಅತ್ಯಾಚಾರಕ್ಕೆ ಸಂಬಂಧಪಟ್ಟ ಕಾನೂನು ಪ್ರಕಾರ ಪೊಲೀಸರು ಯುವತಿಯ ಸ್ವಇಚ್ಚೆ ಇಲ್ಲದೆ ಯಾವುದೇ ಮಾಹಿತಿ ಪಡೆದುಕೊಳ್ಳುವಂತಿಲ್ಲ. ಬಲವಂತ ಮಾಡುವಂತಿಲ್ಲ.
ವಿದ್ಯಾರ್ಥಿನಿ ಅನೇಕ ಮಾಹಿತಿಗಳನ್ನು ನೀಡಿದ್ದಾಳಾದರೂ ಅವುಗಳಿಂದ ಪೊಲೀಸರಿಗೆ ಇದುವರೆಗೆ ಲಾಭವೇನೂ ಆಗಿಲ್ಲ. ಘಟನೆಯಲ್ಲಿ ಆಟೋ ರಿಕ್ಷಾವೊಂದು ಮಹತ್ವದ ಪಾತ್ರ ವಹಿಸಿರುವ ಕಾರಣ ಪೊಲೀಸರು ಆಟೋ ರಿಕ್ಷಾಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.

ಸಿಸಿ ಕ್ಯಾಮೆರಾದಲ್ಲಿ ಸಿಕ್ಕ ದಾಖಲೆ: ಈ ಮಧ್ಯೆ ಮಣಿಪಾಲದಲ್ಲಿ ಖಾಸಗಿಯವರು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅತ್ಯಾಚಾರಿಗಳು ವಿದ್ಯಾರ್ಥಿಯನ್ನು ಅಪಹರಿಸಿದ ಆಟೋ ರಿಕ್ಷಾ ದಾಖಲಾಗಿದ್ದು ಸೋಮವಾರ ಪತ್ತೆಯಾಗಿದೆ. ಇದರಿಂದ ಆಟೋ ರಿಕ್ಷಾವನ್ನು ಪತ್ತೆ ಮಾಡುವ ಕೆಲಸಕ್ಕೆ ಸ್ವಲ್ಪ ಪ್ರಯೋಜನವಾಗಿದೆ. ಆರಂಭದಲ್ಲಿ ಪೊಲೀಸರ 8 ತಂಡಗಳನ್ನು ರಚಿಸಲಾಗಿದ್ದು ಇದೀಗ ಇನ್ನಷ್ಟು ತಂಡಗಳನ್ನು ರಚಿಸಲಾಗಿದೆ. 10 ಮಂದಿ ತಾಂತ್ರಿಕ ಪರಿಣಿತರ ತಂಡವೂ ಕೆಲಸ ಮಾಡುತ್ತಿದೆ. ಒಟ್ಟು 200 ಮಂದಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪ್ರಕರಣದ ಬೆನ್ನು ಬಿದ್ದಿದ್ದಾರೆ.
ಭಾನುವಾರ 4 ಮಂದಿ ಆಟೋ ಚಾಲಕರನ್ನು ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು ವಿಚಾರಣೆಯ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. ಸೋಮವಾರ ಮತ್ತೆ 17 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಅಲ್ಲಲ್ಲಿ ಚದುರಿದ ಚಿತ್ರಗಳಂತೆ ಒಂದಷ್ಟು ಮಾಹಿತಿಗಳು ಸಿಕ್ಕಿವೆ. ಆದರೆ, ಅವುಗಳನ್ನು ಒಂದುಗೂಡಿಸಿ ಸರಿಯಾದ ರೂಪ ಕೊಡುವುದಕ್ಕೆ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯಿಂದ ಮಾಹಿತಿಗಳು ಸಿಗುತ್ತಿಲ್ಲ ಎಂದು ಪಶ್ಚಿಮ ವಲಯ ಐಜಿಪಿ  ಪ್ರತಾಪ್ ರೆಡ್ಡಿ, ಉಡುಪಿ ಎಸ್ಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.  

ಆರೋಪಿಗಳ ರೇಖಾಚಿತ್ರ ಬಿಡುಗಡೆ
ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ನೀಡಿರುವ ಮಾಹಿತಿಯಂತೆ ಪೊಲೀಸರು ಮೂವರು ಅತ್ಯಾಚಾರಿಗಳ ರೇಖಾ ಚಿತ್ರ ರಚಿಸಿದ್ದಾರೆ. ಅವುಗಳ ಪೈಕಿ ಒಂದು ರೇಖಾ ಚಿತ್ರವು ಅತ್ಯಾಚಾರಿಗಳಲ್ಲೊಬ್ಬನಿಗೆ ಸಾಮ್ಯತೆ ಇರುವುದನ್ನು ಆಕೆ ಒಪ್ಪಿಕೊಂಡಿದ್ದಾಳೆ. ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿ ಈ ರೇಖಾಚಿತ್ರದ ಆಧಾರದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಅವರು ಸೋಮವಾರ ಈ ರೇಖಾ ಚಿತ್ರವನ್ನು ಸಾರ್ವಜನಿಕರ ಅವಗಾಹನೆಗೆ ಮತ್ತು ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ವಿದ್ಯಾರ್ಥಿನಿಯು ಗುರುತಿಸಿರುವ ರೇಖಾಚಿತ್ರದಲ್ಲಿರುವ ಆರೋಪಿಯು ತನ್ನ ಜೊತೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದು, ಈ ವ್ಯಕ್ತಿಯು ಸಾಧಾರಣ ಎತ್ತರವಿದ್ದು, ಸಪೂರ ದೇಹ, ಕಪ್ಪು ಮೈ ಬಣ್ಣ ಹೊಂದಿದ್ದಾನೆ. ಗುಂಗುರು ತಲೆ ಕೂದಲು, ಫ್ರೆಂಚ್ ಗಡ್ಡ ಹೊಂದಿದ್ದಾನೆ ಎನ್ನಲಾಗಿದೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ಇರುವವರು ಮಣಿಪಾಲ ಠಾಣಾಧಿಕಾರಿ ಸದಾನಂದ ತಿಪ್ಪಣ್ಣನವರ್, ಮೊ. 9480805448 ಅಥವಾ ವಿಶೇಷ ಪೊಲೀಸ್ ಸೆಲ್  9742512100 ಇಲ್ಲಿಗೆ ತಿಳಿಸಬೇಕು ಅಥವಾ spudpzksp.gov.in  ವಿಳಾಸಕ್ಕೆ ಈಮೇಲ್ ಕಳುಹಿಸುವಂತೆ ಕೋರಿದ್ದಾರೆ. ಮಾಹಿತಿದಾರರ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement