ವರಿಷ್ಠರು ಸೂಚಿಸಿದರೆ ಬಿಎಸ್‌ವೈ ಜತೆ ಮಾತುಕತೆಗೆ ಸಿದ್ಧ: ಜೋಶಿ
ಧಾರವಾಡ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ನಿರ್ಧಾರ ರಾಷ್ಟ್ರೀಯ ನಾಯಕರ ಮೇಲಿದೆ. ರಾಷ್ಟ್ರೀಯ ನಾಯಕರು ಈ ಕುರಿತು ಸೂಚಿಸಿದರೆ ನಾನು ಮತ್ತು ಸದಾನಂದಗೌಡರು ಬಿಎಸ್‌ವೈ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಕಲಘಟಗಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಪಕ್ಷದ ಒಡಕಿನಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮತಗಳು ಒಡೆದು ಹೋದವು. ಪರಿಣಾಮ ಬಿಜೆಪಿ ಕಡಿಮೆ ಕ್ಷೇತ್ರಗಳಲ್ಲಿ ಗೆಲವು ಸಾಧಿಸಿತು. ಒಡೆದು ಹೋದ ಮತಗಳನ್ನು ಕೂಡಿಸಿದರೆ ಬಿಜೆಪಿಯ ಮತಗಳೆ ಹೆಚ್ಚು. ಹೀಗಾಗಿ ಬಿಜೆಪಿ ಸೋತಿಲ್ಲ, ಕಾಂಗ್ರೆಸ್ ಗೆದ್ದಿಲ್ಲ. ಎಲ್ಲ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಮತದಾರರೂ ಒಂದೇ ತೆರನಾದ ಸ್ಪಷ್ಟತೆ ನೀಡುವುದಿಲ್ಲ. ಅಂಥ ಕಲ್ಪನೆಯೂ ಯಾವ ರಾಜಕೀಯ ಪಕ್ಷಕ್ಕೆ ಇರಬಾರದು. ಬಿಜೆಪಿಯನ್ನು ಪರಾಭವಗೊಳಿಸಿದೆವು ಎಂದು ಕಾಂಗ್ರೆಸ್ ಬೀಗುತ್ತಿದೆ. ಆದರೆ, ಕಾಲಚಕ್ರ ತಿರುಗುತ್ತಿರುತ್ತದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕಿಳಿದಿದೆ ಎಂದು ಪಕ್ಷದ ಕಾರ್ಯಕರ್ತರು ಆತಂಕ ಪಡಬೇಕಿಲ್ಲ. ಪಕ್ಷದಲ್ಲಿನ ಕೆಲ ಗೊಂದಲಗಳಿಂದ ಈ ರೀತಿಯ ಜನಾದೇಶ ದೊರೆತಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಣ್ಣಿಗೇರಿ ಹಾಗೂ ಅಳ್ನಾವರ ಪಟ್ಟಣಗಳನ್ನು ತಾಲೂಕುಗಳನ್ನಾಗಿ ಘೋಷಣೆಗೊಳಿಸಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ತಾಲೂಕುಗಳನ್ನು ತೆಗೆದು ಹಾಕುವ ಪ್ರಯತ್ನ ನಡೆಸಿದೆ. ಅಲ್ಲದೇ, ಕರ್ನಾಟಕ ವಿವಿ ಸಿಂಡಿಕೇಟ್ ಸದಸ್ಯರುಗಳನ್ನು ವಜಾಗೊಳಿಸುತ್ತಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಸರ್ಕಾರ ನೇಮಕಗೊಳಿಸಿದ ಸಿಂಡಿಕೇಟ್ ಸದಸ್ಯರನ್ನೇ ಮುಂದುವರಿಸಿತ್ತು ಎಂದರು.
ಉತ್ತಾರಾಖಂಡದ ಅನಾಹುತವನ್ನು ರಾಜಕೀರಣಗೊಳಿಸಲು ಇಷ್ಟಪಡುವುದಿಲ್ಲ. ಅನಾಹುತಕ್ಕೆ ಒಳಗಾದ ಜನತೆಗೆ ಸೂಕ್ತ ಪರಿಹಾರ ನೀಡಬೇಕು. ಅಲ್ಲದೇ, ಆ ಸ್ಥಳಕ್ಕೆ ಅಲ್ಲಿನ ಸರ್ಕಾರ ಮತ್ತು ಕೇಂದ್ರ ಸರ್ಕಾರ ಶಾಶ್ವತ ಪರಿಹಾರ ಒದಗಿಸಿ ಜನರು ನೆಮ್ಮದಿ ಬದುಕಿಗೆ ಅನುವು ಮಾಡಿಕೊಡಬೇಕೆಂದರು.