ಸೇನಾಪಡೆ ಮೇಲೆ ಉಗ್ರರ ದಾಳಿ
ಸೇನಾ ಪಡೆಯ ಮೇಲೆ ಉಗ್ರರು ನಡೆಸಿದ ಹಠಾತ್ ದಾಳಿಯಿಂದಾಗಿ ಎಂಟು ಯೋಧರು ಹುತಾತ್ಮರಾಗಿದ್ದು, 19 ಮಂದಿ ಗಾಯಗೊಂಡ...
ಶ್ರೀನಗರ: ಸೇನಾ ಪಡೆಯ ಮೇಲೆ ಉಗ್ರರು ನಡೆಸಿದ ಹಠಾತ್ ದಾಳಿಯಿಂದಾಗಿ ಎಂಟು ಯೋಧರು ಹುತಾತ್ಮರಾಗಿದ್ದು, 19 ಮಂದಿ ಗಾಯಗೊಂಡ ಘಟನೆ ಶ್ರೀನಗರದ ಹೊರವಲಯದಲ್ಲಿ ನಡೆದಿದೆ. ಪ್ರಧಾನಿ ಡಾ. ಮನಮೋಹನ್ಸಿಂಗ್ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿಗೆ ಮುನ್ನಾ ದಿನವಾದ ಸೋಮವಾರ ಈ ಕೃತ್ಯ ನಡೆದಿದೆ. ಹೀಗಿದ್ದರೂ ಪ್ರಧಾನಿ ಸಿಂಗ್ ತಮ್ಮ ಭೇಟಿ ರದ್ದು ಮಾಡಿಲ್ಲ.
ನಿರಂತರ ಗುಂಡಿನ ದಾಳಿ: ಹೈದರ್ಪೋರಾ ಬೈಪಾಸ್ ಪ್ರದೇಶದ ಏರ್ಪೋರ್ಟ್-ಲಾಲ್ಚೌಕ್ ರಸ್ತೆಯಲ್ಲಿ ಸೇನಾ ಸಿಬ್ಬಂದಿಯ ತಂಡ ಸಾಗುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಯೋಧರ ಮೇಲೆ ಇಬ್ಬರು ಉಗ್ರರು ನಿರಂತರವಾಗಿ ಗುಂಡಿನ ಸುರಿಮಳೆಗೈದು ಅಲ್ಲಿಂದ ಪರಾರಿಯಾಗಿದ್ದಾರೆ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಸೇನಾಪಡೆ, ಪೊಲೀಸರು, ಸಿಆರ್ಪಿಎಫ್ ಯೋಧರು ತಕ್ಷಣವೇ ಆ ಪ್ರದೇಶವನ್ನು ಸುತ್ತುವರಿದಿದ್ದು ಉಗ್ರರ ಪತ್ತೆಗೆ ಬಲೆ ಬೀಸಿದ್ದಾರೆ. ಅರ್ಧ ಗಂಟೆ ಬಳಿಕ ಹೈದರ್ಪೋರಾದಿಂದ 2 ಕಿ.ಮೀ. ದೂರದ ಬರ್ಜುಲ್ಲಾದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.