ನೌಕರರೆಲ್ಲ ವಿಧಾನಸೌಧಕ್ಕೆ ವರ್ಗ
ಕ.ಪ್ರ.ವಾರ್ತೆ , ಬೆಂಗಳೂರು , ಜೂ.26-
ವಿಧಾನಸೌಧ ತುಂಬಿ ತುಳುಕುತ್ತಿದೆ. ಮುಖ್ಯಮಂತ್ರಿ, ಮಂತ್ರಿಗಳು ಇರಲಿ ಅಥವಾ ಇಲ್ಲದಿರಲಿ ಜನಜಂಗುಳಿಗೆ ಮಾತ್ರ ಬರವಿಲ್ಲ. ಏಕೆಂದರೆ ಇದು ವರ್ಗಾವಣೆ ಎಂಬ ಸುಗ್ಗಿಯ ಕಾಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಮಾನ್ಯ ವರ್ಗಾವಣೆ ಸೇರಿದಂತೆ ಎಲ್ಲ ರೀತಿಯ ವರ್ಗಾವಣೆಯನ್ನೂ ಜೂನ್ 30ರೊಳಗೆ ಮುಗಿಸುವಂತೆ ಮಾರ್ಗಸೂಚಿ ಹೊರಡಿಸಿದೆ. ಇದರ ಪರಿಣಾಮವೇ ವಿಧಾನಸೌಧದಲ್ಲಿ ನೌಕರರು ಜೇನು ನೊಣಗಳಂತೆ ಮುತ್ತಿಕೊಂಡಿದ್ದಾರೆ.
ಸರ್ಕಾರಿ ನೌಕರರು ತಮಗೆ ಅಗತ್ಯವಾದ ಸ್ಥಳಕ್ಕೇ ವರ್ಗಾವಣೆ ಆಗಬೇಕು ಎಂಬ ಉದ್ದೇಶದಿಂದ ಸಚಿವರ ಕೊಠಡಿಗಳಿಗೆ ಎಡತಾಕುತ್ತಿದ್ದಾರೆ.
ಪ್ರತಿದಿನ ಸಚಿವರನ್ನು ಭೇಟಿ ಮಾಡುವವರಲ್ಲಿ ಶೇ.90ರಷ್ಟು ಜನರು ವರ್ಗಾವಣೆ ಬಯಸಿದವರೇ ಆಗಿರುತ್ತಾರೆ. ವರ್ಗಾವಣೆ ಬಯಸಿದವರಷ್ಟೇ ಅಲ್ಲ, ಅವರಿಗೆ ಶಿಫಾರಸು ಮಾಡುವವರ ಸಂಖ್ಯೆಯೂ ಅಧಿಕವಾಗಿಯೇ ಇದೆ.
ವರ್ಗಾವಣೆಯ ಸುಗ್ಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸೇರಿದಂತೆ ಸರ್ಕಾರಿ ನೌಕರರು ವಿಧಾನಸೌಧಕ್ಕೆ ಲಗ್ಗೆ ಇಟ್ಟಿದ್ದಾರೆ. ತಮ್ಮ ವರ್ಗಾವಣೆ ಸ್ಥಾನ ತಮ್ಮಿಷ್ಟದಂತೆ ಆಗಲು ಪ್ರಯತ್ನಪಡುತ್ತಿದ್ದಾರೆ. ಅದಕ್ಕೇ ವಿಧಾನಸೌಧದಲ್ಲಿ ಮಿಂಚಿನ ಸಂಚಾರವಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಗಾವಣೆ ವಿಷಯದಲ್ಲಿ ತಮ್ಮ ಸಂಪುಟದ ಸಚಿವರಿಗೆ ಈಗಾಗಲೇ ಪಾಠ ಮಾಡಿದ್ದಾರೆ. ವರ್ಗಾವಣೆಗೆ ಹಣ ಪಡೆಯಬೇಡಿ, ಆಗ ಅಧಿಕಾರಿಗಳು ನಿಮ್ಮ ಮಾತು ಕೇಳುವುದಿಲ್ಲ ಎಂದು ತಾಕೀತು ಮಾಡಿದ್ದಾರೆ. ಹಣ ಬೇಡ ಬಿಡಿ, ಆದರೆ ಶಿಫಾರಸು.
ಕಾಂಗ್ರೆಸ್ನಲ್ಲಿ ಬಹುತೇಕ ಎಲ್ಲರೂ ನಾಯಕರೇ, ಮುಖಂಡರೇ. ಯಾರ ಮಾತನ್ನು ತೆಗೆದುಹಾಕುವುದು, ಯಾರದ್ದನ್ನು ಬಿಡುವುದು. ಇಂತಹ ಗೊಂದಲದಲ್ಲಿ ಸಚಿವರಿದ್ದು, ವರ್ಗಾವಣೆಯ ಪಟ್ಟಿ ತಯಾರಿಸುವಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ.
ವಿಧಾನಸೌಧದ ಕಚೇರಿಯಲ್ಲಿರುವ ಸಚಿವರಿಗೇ ಅಧಿಕ ಒತ್ತಡ. ಅದಕ್ಕೇ ಸಾಕಷ್ಟು ಸಚಿವರು ಇತ್ತ ಸುಳಿಯುತ್ತಲೇ ಇಲ್ಲ. ಆದರೆ ಅವರ ಆಪ್ತ ಕಾರ್ಯದರ್ಶಿಗಳು ಮಾತ್ರ ಅತಿ ಹೆಚ್ಚು ಕಾರ್ಯನಿರತ ವ್ಯಕ್ತಿಗಳಾಗಿದ್ದಾರೆ. ಕಡತ ಹಿಡಿದುಬರುವ ನೂರಾರು ಜನರು ಆಪ್ತ ಕಾರ್ಯದರ್ಶಿಯವರನ್ನು ಭೇಟಿ ಮಾಡುತ್ತಿದ್ದಾರೆ. ಸಚಿವರಿಗಿಂತ ಇವರಿಗೇ ಈಗ ಭಾರೀ ಬೇಡಿಕೆ. ಏಕೆಂದರೆ ಒಳ- ಹೊರಗಿನ ಎಲ್ಲ ಮಾಹಿತಿಗಳು ಆಪ್ತ ಕಾರ್ಯದರ್ಶಿ ಅವರಿಗೆ ಕರಗತ. ಹೀಗಾಗಿ, ಅವರು ವರ್ಗಾವಣೆ ಪಟ್ಟಿ ಅಂತಿಮಗೊಳಿಸುವಲ್ಲಿ ನಿರತರಾಗಿದ್ದಾರೆ. ಇದಾದ ನಂತರ ಸಚಿವರ ಅಂಕಿತ ಬೀಳಬೇಕಾಗುತ್ತದೆ.
ವರ್ಗಾವಣೆ ಆಗುವುದಿಲ್ಲವೇ?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಾಗಿ ಸೂಚಿಸಿರುವ ಪ್ರಕಾರ ಜೂನ್ 30ರ ನಂತರ ಯಾವುದೇ ರೀತಿಯಲ್ಲಿ ವರ್ಗಾವಣೆ ಆಗಬಾರದು. ಆದರೆ ಈ ಗಡುವು ಯಾವುದೇ ಕಾರಣಕ್ಕೂ ವಿಸ್ತರಣೆ ಆಗದಿರದು ಎಂಬುದು ಅನುಭವಸ್ಥರ ಮಾತು.
ಇಂತಹ ಗಡುವುಗಳನ್ನು ಸಾಕಷ್ಟು ಮುಖ್ಯಮಂತ್ರಿಗಳು ನೀಡಿದ್ದಾರೆ. ಆದರೆ ಅದು ಎಂದೂ ಪಾಲನೆಯಾಗಿಲ್ಲ. ಮುಖ್ಯಮಂತ್ರಿಯಾದವರೇ ಅದನ್ನು ಮುರಿದಿದ್ದಾರೆ. ಸಚಿವರ ಒತ್ತಡಗಳು ಗಡುವಾದ ಮೇಲೆ ಬರುತ್ತದೆ. ಇದನ್ನು ಪಾಲಿಸಲೇ ಬೇಕಾಗುತ್ತದೆ. ಇಲ್ಲದಿದ್ದರೆ ಆಂತರಿಕ ವೈಮನಸ್ಯ ಸೃಷ್ಟಿಯಾಗುತ್ತದೆ. ಕೆಲವು ಬಾರಿ ಜೂನ್ 30ರ ನಂತರವೂ ಹಿಂದಿನ ದಿನಾಂಕ ನಮೂದಿಸಿ ಆದೇಶ ಹೊರಬಿದ್ದ ನಿದರ್ಶನಗಳಿವೆ. ಅದೂ ಈ ಬಾರಿಯೂ ಮುಂದುವರಿಯುತ್ತದೆ.
ಹೀಗಾಗಿ, ಜೂನ್ 30ಕ್ಕೇ ವರ್ಗಾವಣೆ ಪ್ರಕ್ರಿಯೆ ಮುಗಿಯುವುದಿಲ್ಲ. ಗಡುವು ಜುಲೈ 30ರವರೆಗೆ ವಿಸ್ತರಣೆಯಾಗುವ ಸಂಭವವಿದೆ.
- ಕೆರೆ ಮಂಜುನಾಥ್