ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ. 27
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮರಳಿ ಬಿಜೆಪಿಗೆ ಬರಲು ಸಿದ್ಧವಾಗಿದ್ದಾರೆ. ಆದರೆ, ಬಿಜೆಪಿಗೆ ಸೇರಿದ ಬಳಿಕ ಪಕ್ಷದಲ್ಲಿ ಅವರ ಸ್ಥಾನಮಾನವೇನು ಎಂಬುದು ಮಾತ್ರ ಬಾಕಿ ಇರುವ ಪ್ರಶ್ನೆ.
ಹೀಗಾಗಿ ಬಿಜೆಪಿ ಕೈಗೊಳ್ಳುವ ತೀರ್ಮಾನ ಆಧರಿಸಿ ಬಿಜೆಪಿ ಸೇರುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಬಗ್ಗೆ ಬಿಜೆಪಿಯಲ್ಲಿ ಗಂಭೀರ ಪ್ರಯತ್ನ ಆರಂಭವಾಗಿದ್ದು, ಗುರುವಾರ ಮಾಜಿ ಸಿಎಂ ಸದಾನಂದಗೌಡ ಅವರ ನೇತೃತ್ವದಲ್ಲಿ ಪಕ್ಷದ ಹಲವು ಮುಖಂಡರು ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ ಮತ್ತು ಮುರುಗೇಶ್ ನಿರಾಣಿ ಅವರು ಯಡಿಯೂರಪ್ಪ ಅವರೊಂದಿಗೂ ಈ ಕುರಿತು ಸಮಾಲೋಚನೆ ನಡೆಸಿ ಬಿಜೆಪಿಗೆ ಆಹ್ವಾನಿಸಿದ್ದಾರೆ. ಯಡಿಯೂರಪ್ಪ ಮಾತ್ರ ತಮ್ಮ ನಿರ್ಧಾರವನ್ನು ಕಾಯ್ದಿರಿಸಿದ್ದಾರೆ.
ಬೆಳಗ್ಗಿನಿಂದ ಆಗಿದ್ದೇನು: ಸದಾನಂದಗೌಡ, ಬೋಪಯ್ಯ, ಬೊಮ್ಮಾಯಿ, ಉಮೇಶ್ ಕತ್ತಿ, ಮಧುಸೂಧನ್ ಸೇರಿದಂತೆ ಹಲ ಮುಖಂಡರು ಬೆಳಗ್ಗೆ ಗೌಪ್ಯ ಸಮಾಲೋಚನೆ ನಡೆಸಿದರು. ಸುಮಾರು ಒಂದೂವರೆ ಗಂಟೆ ಕಾಲ ನಡೆದ ಮಾತುಕತೆಯಲ್ಲಿ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಮಾಡಬೇಕಾದ ಪ್ರಯತ್ನಗಳ ಕುರಿತು ಚರ್ಚಿಸಲಾಯಿತು. ಜತೆಗೆ ಪಕ್ಷಕ್ಕೆ ಅವರ ಅನಿವಾರ್ಯತೆಯನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತರುವ ಬಗ್ಗೆ ತೀರ್ಮಾನಿಸಲಾಯಿತು. ಇದಾದ ಬಳಿಕ ಸದಾನಂದಗೌಡ, ಕೆ.ಜಿ. ಬೋಪಯ್ಯ, ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಡಿ.ಎನ್. ಜೀವರಾಜ್ ಅವರು ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.
ಸುಮಾರು 2 ಗಂಟೆ ಕಾಲ ನಡೆದ ಮಾತುಕತೆಯಲ್ಲಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರಲು ಯಾವ ರೀತಿ ಪ್ರಯತ್ನ ನಡೆಸಬೇಕು? ಈ ಕಾರ್ಯಕ್ಕೆ ಯಾರನ್ನು ಮುಂದೆ ಬಿಡಬೇಕು? ಪಕ್ಷದ ರಾಷ್ಟ್ರೀಯ ನಾಯಕರಿಗೆ ಹೇಗೆ ಮನವರಿಕೆ ಮಾಡಿಕೊಡಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು. ಪ್ರಹ್ಲಾದ ಜೋಶಿ ಅವರೂ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಕರೆಸಿಕೊಳ್ಳುವ ಬಗ್ಗೆ ಪೂರಕವಾಗಿ ಸ್ಪಂದಿಸಿ ಜೂ. 29ರಂದು ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಪಕ್ಷದ ರಾಜ್ಯ ಉಸ್ತುವಾರಿ ಥಾವರ್ಚಂದ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಯಡಿಯೂರಪ್ಪ ಭೇಟಿ: ಇದಾದ ಬಳಿಕ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ ಹಾಗೂ ಮುರುಗೇಶ್ ನಿರಾಣಿ ಅವರು ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಬಿಜೆಪಿಗೆ ಮರಳಲು ತಮ್ಮ ಅಭ್ಯಂತರವೇನೂ ಇಲ್ಲ. ಆದರೆ, ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ತಮ್ಮ ಸ್ಥಾನಮಾನವೇನು ಎಂಬುದು ಮೊದಲು ನಿರ್ಧಾರವಾಗಬೇಕು. ಪ್ರತಿಪಕ್ಷ ನಾಯಕ ಸ್ಥಾನ ಇಲ್ಲವೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಒಂದು ಹುದ್ದೆ ಸಿಗಬೇಕು. ಬಿಜೆಪಿಗೆ ಬಂದು ಸುಮ್ಮನೆ ಕುಳಿತುಕೊಳ್ಳಲು ಸಿದ್ಧನಿಲ್ಲ. ಆದ್ದರಿಂದ ಮೊದಲು ಬಿಜೆಪಿ ಈ ಕುರಿತು ನಿರ್ಧಾರ ಕೈಗೊಳ್ಳಲಿ. ನನ್ನ ಅಭಿಪ್ರಾಯವನ್ನು ನಂತರ ತಿಳಿಸುತ್ತೇನೆ. ಅದುವರೆಗೆ ಈ ವಿಚಾರಗಳ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು ಎನ್ನಲಾಗಿದೆ.
ಬೆಳಗ್ಗಿನಿಂದ ಆಗಿದ್ದೇನು?
-ಶಾಸಕರ ಭವನದಲ್ಲಿ ಡಿ.ವಿ. ಸದಾನಂದಗೌಡ ನೇತೃತ್ವದಲ್ಲಿ ಕೆ.ಜಿ. ಬೋಪಯ್ಯ, ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಮತ್ತಿತರರ ಗೌಪ್ಯ ಸಮಾಲೋಚನೆ.
-ಡಿ.ವಿ. ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಜೀವರಾಜ್, ಲಿಂಬಾವಳಿ ಬೋಪಯ್ಯ ಅವರಿಂದ ಪ್ರಹ್ಲಾದ ಜೋಶಿ ಭೇಟಿ.
-ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಅವರಿಂದ ಬಿ.ಎಸ್. ಯಡಿಯೂರಪ್ಪ ಅವರ ಜತೆ ಪ್ರತ್ಯೇಕ ಸಮಾಲೋಚನೆ. ಪಕ್ಷಕ್ಕೆ ಆಹ್ವಾನ.
ಯಡಿಯೂರಪ್ಪ ಬಿಜೆಪಿಗೆ ಏಕೆ ಅನಿವಾರ್ಯ?
ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಕಳೆದುಕೊಂಡ ಮತಗಳು ಮತ್ತೆ ಬರುತ್ತವೆ
ರಾಜ್ಯದಲ್ಲಿ ಪಕ್ಷದ ಸಂಘಟನೆಗೆ ಯಡಿಯೂರಪ್ಪ ಹೆಚ್ಚು ವೇಗ ನೀಡುತ್ತಾರೆ
ಉತ್ತರ ಕರ್ನಾಟಕ, ಮಲೆನಾಡು ಭಾಗದಲ್ಲಿ ಬಿಜೆಪಿಗೆ ಹೆಚ್ಚು ಶಕ್ತಿ ಬರುತ್ತದೆ
ಲಿಂಗಾಯತ ಮತ್ತು ಹಿಂದುಳಿದ ಸಮುದಾಯದವರು ಮತ್ತೆ ಬೆಂಬಲಿಸುತ್ತಾರೆ
ಬಿಎಸ್ವೈ ಸಿಎಂ ಆಗಿದ್ದಾಗ ಆರಂಭಿಸಿದ ಯೋಜನೆಗಳ ಲಾಭ ಪಕ್ಷಕ್ಕೆ ಸಿಗುತ್ತದೆ
ಚುನಾವಣೆ ವೇಳೆ ಮೋದಿ ಜತೆ ಬಿಎಸ್ವೈ ಪ್ರಭಾವವೂ ಲಾಭ ತರುತ್ತದೆ
ಬಸವರಾಜ ಬೊಮ್ಮಾಯಿ ಮತ್ತಿತರರು ಭೇಟಿಯಾಗಿ ಬಿಜೆಪಿಗೆ ಕರೆಸಿಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಹೇಳಿ ಪಕ್ಷಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ನಿಮ್ಮ ಪ್ರಯತ್ನ ಮುಂದುವರಿಸಿ. ಆದರೆ, ನನ್ನ ವಿಚಾರಕ್ಕೆ ಧಕ್ಕೆ ಬರಬಾರದು. ಮೊದಲು ಬಿಜೆಪಿಯಲ್ಲಿ ಈ ಬಗ್ಗೆ ನಿರ್ಧಾರವಾಗಲಿ. ನಂತರ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದು ಹೇಳಿದ್ದೇನೆ. ಕೆಜೆಪಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿಲ್ಲ. ಕೆಜೆಪಿ ಕಟ್ಟುವ ಕೆಲಸ ಮುಂದುವರಿಸುತ್ತೇನೆ.
-ಬಿ.ಎಸ್. ಯಡಿಯೂರಪ್ಪ