ತಗ್ಗಿದ ಮಳೆ: ಕಪಿಲಾ ತೀರದಲ್ಲಿ ಮುಂದುವರಿದ ಭೀತಿ
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವರುಣ ಆರ್ಭಟ ತಗ್ಗಿದ್ದು ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಕಬಿನಿ ಜಲಾಶಯದಿಂದ 35 ಸಾವಿರ ಕ್ಯುಸೆಕ್ ನೀರು ಬಿಟ್ಟಿದ್ದರಿಂದ ತೀರ ಪ್ರದೇಶದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಕೊಡಗಿನಲ್ಲಿ ಶುಕ್ರವಾರ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ, ಕೆಆರ್ಎಸ್ ಒಳ ಹರಿವಿನ ಪ್ರಮಾಣ 21 ಸಾವಿರ ಕ್ಯುಸೆಕ್ ಗಡಿ ದಾಟಿದೆ. ಹಾರಂಗಿ ಜಲಾಶಯದ ಒಳ ಹರಿವಿನ ಪ್ರಮಾಣ 9 ಸಾವಿರ ಕ್ಯುಸೆಕ್ ಗಡಿ ದಾಟಿದೆ. ಹಾರಂಗಿ ಜಲಾಶಯ ಭರ್ತಿಯಾಗಲು 7 ಅಡಿ ಮಾತ್ರ ಬಾಕಿ ಇದೆ. ಕಬಿನಿ ಜಲಾಶಯದಿಂದ 35 ಸಾವಿರ ಕ್ಯುಸೆಕ್ ನೀರು ಬಿಟ್ಟ ಪರಿಣಾಮ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು ತೀರ ಪ್ರದೇಶದ ನೂರಾರು ಎಕರೆ ಜಲಾವೃತವಾಗಿದೆ. ಸುತ್ತೂರು, ಬಿಳುಗಲಿ, ಜೀಮಾರಳ್ಳಿ, ತಾಯೂರು ಇನ್ನು ಮುಂತಾದ ಗ್ರಾಮಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಗಳೂರು, ಉಡುಪಿ, ಕೊಡಗು ಹಾಸನ ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದ್ದು ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಹೇಮಾವತಿ ಒಳ ಹರಿವು ಕುಗ್ಗಿದೆ. ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಸಾಧಾರಣ ಮಳೆಯಾಗಿದೆ.