ಡೆಂಘೀಗೆ ಇಬ್ಬರು ಮಕ್ಕಳು ಬಲಿ
ಹನೂರು/ರೋಣ: ಡೆಂಘೀ ಜ್ವರಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಬೆಳೆಯುತ್ತಲೇ ಇದ್ದು ತೀವ್ರ ಜ್ವರದಿಂದ ಬಳಲಿ ಮತ್ತಿಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಹನೂರು ಸಮೀಪದ ಕುರಟ್ಟಿ ಹೊಸೂರು ಗ್ರಾಮದ ಮಧು ಮತ್ತು ಅನಿತಾ ದಂಪತಿ ಪುತ್ರಿ ಒಂದೂವರೆ ವರ್ಷದ ಮಾನಸಳ ಜ್ವರದಿಂದ ಬಳಲಿ ಮೃತಪಟ್ಟಿದ್ದಾಳೆ. ಜ್ವರದ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವಿಫಲವಾಗಿ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ರೋಣ ತಾಲೂಕಿನ ಚಿಕ್ಕಮಣ್ಣೂರ ಗ್ರಾಮದ ಬಾಲಕಿ ವಿದ್ಯಾಶ್ರೀ ಸಂಗಯ್ಯ ಹಿರೇಮಠ (5) ತೀವ್ರ ಜ್ವರದಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾಳೆ.
ಒಂದು ವಾರದ ಹಿಂದೆ ತೀವ್ರ ಜ್ವರದಿಂದ ಗದಗನ ಮಹಾತ್ಮಗಾಂಧಿ ಮಲ್ಟಿ ಸ್ಪೇಷಾಲಿಟಿ ಆ್ಯಂಡ್ ರಿಸರ್ಚ್ ಸೆಂಟರ್ಗೆ ದಾಖಲಿಸಲಾಗಿತ್ತು. ಜ್ವರದ ತೀವ್ರತೆ ಹೆಚ್ಚಾದ್ದರಿಂದ ಗುರುವಾರ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.