ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಂಗನವಾಡಿಗಳನ್ನು ದೇವರೇ ಕಾಪಾಡಲಿ...

ಅಂಗನವಾಡಿಗಳಿಗೆ ದೇವರೇ ದಿಕ್ಕು... ಹೌದು, ಮಕ್ಕಳೇ ದೇವರೆಂದು ಭಾವಿಸುವ ರಾಜ್ಯದಲ್ಲಿ ಅಂಗನವಾಡಿ ಕೇಂದ್ರ ನೆಚ್ಚಿಕೊಂಡಿರುವ ಮಕ್ಕಳಿಗೆ ಮಾತ್ರ ಆ ದೇವರೇ ದಿಕ್ಕು...

Parashurama
Updated On : 3 Mar 2013, 1:27 am

ಬೆಂಗಳೂರು: ಅಂಗನವಾಡಿಗಳಿಗೆ ದೇವರೇ ದಿಕ್ಕು...
ಹೌದು, ಮಕ್ಕಳೇ ದೇವರೆಂದು ಭಾವಿಸುವ ರಾಜ್ಯದಲ್ಲಿ ಅಂಗನವಾಡಿ ಕೇಂದ್ರ ನೆಚ್ಚಿಕೊಂಡಿರುವ ಮಕ್ಕಳಿಗೆ ಮಾತ್ರ ಆ ದೇವರೇ ದಿಕ್ಕು.
ಏಕೆಂದರೆ, ರಾಜ್ಯದ ಸಾವಿರಾರು ಅಂಗನವಾಡಿಗಳಿಗೆ ದೇವಸ್ಥಾನಗಳೇ ಆಶ್ರಯತಾಣ. ದೇವಾಲಯಗಳ ಆವರಣದಲ್ಲೇ ಮಕ್ಕಳ ಆರೈಕೆ, ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಕಾರ್ಯ ದಶಕಗಳಿಂದ ನಡೆಯುತ್ತಿದೆ. ಆರು ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರು- ಬಾಣಂತಿಯರ ಆರೈಕೆಯ ಉದ್ದೇಶದಿಂದ ಆರಂಭವಾಗಿರುವ ಅಂಗನವಾಡಿ ಕೇಂದ್ರಗಳು ದಶಕಗಳು ಕಳೆದರೂ ಮೂಲಸೌಕರ್ಯವಿಲ್ಲದೆ ಬಳಲುತ್ತಿವೆ.
ಅಂಗನವಾಡಿ ಕಾರ್ಯಕರ್ತೆಯರ ಕೊರತೆ ಹಾಗೂ ಅವರಿಗೆ ವೇತನ ಕಡಿಮೆ ಇರುವ ಜತೆಗೆ ಕೇಂದ್ರಗಳಿಗೆ ಕಟ್ಟಡಗಳನ್ನೂ ನೀಡುವಂತಹ ಮೂಲ ಕಾರ್ಯ ಸರ್ಕಾರದಿಂದ ಆಗಿಲ್ಲ.
ದೇವಸ್ಥಾನ, ಶಾಲೆಯ ಆವರಣ ಅಥವಾ ಇತರೆ ಯಾವುದೇ ತೆರೆದ ಜಾಗದಲ್ಲಿ ಪುಟ್ಟಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಆರೋಗ್ಯ ನೀಡುವುದು ಸಾಧ್ಯವೇ? ಅವರ ಅನಾರೋಗ್ಯ ಕಡಿಮೆ ಮಾಡುವ ಉದ್ದೇಶ ಹೊಂದಿರುವ ಅಂಗನವಾಡಿ ಕೇಂದ್ರಗಳೇ ಮೂಲಸೌಕರ್ಯವಿಲ್ಲದೆ ರೋಗಗ್ರಸ್ಥವಾಗಿವೆ. ಅಂಗನವಾಡಿ ಕೇಂದ್ರಗಳ ಕಲ್ಪನೆ ಆರಂಭವಾಗಿ 37 ವರ್ಷಗಳಾದರೂ, ಇದೀಗ 64 ಸಾವಿರಕ್ಕೂ ಹೆಚ್ಚು ಕೇಂದ್ರಗಳಿಗೆ ವಿಸ್ತರಣೆಯಾಗಿದ್ದರೂ, 25 ಸಾವಿರಕ್ಕೂ ಅಧಿಕ ಅಂಗನವಾಡಿ ಸಿಬ್ಬಂದಿ ಮೇಲಿನ ನಿರ್ಲಕ್ಷ್ಯವೇ ಸ್ವಂತ ಕಟ್ಟಡಗಳ ನಿರ್ಮಾಣದತ್ತಲೂ ಮುಂದುವರಿದಿದೆ.
1975ರಲ್ಲಿ ಅರಂಭ: ಮಹಾತ್ಮಗಾಂಧಿ ಜನ್ಮದಿನಾಚರಣೆ ಅಂಗವಾಗಿ ರಾಜ್ಯದಲ್ಲಿ 1975ರ ಅ.2ರಂದು ಟಿ. ನರಸೀಪುರದಲ್ಲಿ ಅಂಗನವಾಡಿ ಕೇಂದ್ರ ಆರಂಭವಾಯಿತು.            
ಇಂದು ರಾಜ್ಯದ ಎಲ್ಲ ಭಾಗಗಳಲ್ಲೂ ಅಂಗನವಾಡಿಗಳಿವೆ. ಆದರೆ ಸ್ವಂತ ಕಟ್ಟಡವಿಲ್ಲದೆ, ಆರೋಗ್ಯ ಭಾಗ್ಯ ಸಿಗುವುದಾದರೂ ಹೇಗೆ? ಈ ಪ್ರಶ್ನೆಗೆ
ಸರ್ಕಾರದ ಪ್ರಯತ್ನ ಆಮೆಗತಿಯಲ್ಲೇ ಸಾಗಿದೆ. ವರ್ಷವೊಂದಕ್ಕೆ ಕೆಲವೇ ನೂರು ಕಟ್ಟಡಗಳ ನಿರ್ಮಾಣಕ್ಕೆ ಮಾತ್ರ ಮುಂದಾಗುತ್ತಿದೆ. ರಾಜ್ಯದಲ್ಲಿ 3331 ಮಿನಿ ಅಂಗನವಾಡಿ ಕೇಂದ್ರಗಳು ಸೇರಿದಂತೆ ಒಟ್ಟು 64,518 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 37,204 ಅಂಗನವಾಡಿಗಳು ಮಾತ್ರ ಸ್ವಂತ ಕಟ್ಟಡದಲ್ಲಿವೆ. ಉಳಿದ 27 ಸಾವಿರಕ್ಕೂ ಹೆಚ್ಚಿನ ಅಂಗನವಾಡಿಗಳಲ್ಲಿ ಕೆಲವು ನೂರು ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿದ್ದರೆ ಉಳಿದವು ದೇವಸ್ಥಾನ, ಪಂಚಾಯಿತಿ ಕಟ್ಟಡ, ಶಾಲೆಗಳ ಆವರಣವನ್ನೇ ಅವಲಂಬಿಸಿವೆ.
64 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ 27 ಸಾವಿರಕ್ಕೂ ಅಧಿಕ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ ಎಂಬ ಅರಿವಿದ್ದರೂ ಈ ಬಗ್ಗೆ ದಶಕಗಳಿಂದ ಕ್ರಮವೇ ತೆಗೆದುಕೊಂಡಿಲ್ಲ. ಕಳೆದ ಸಾಲಿನಲ್ಲಿ ಅಂತರೆ 2011-12ರಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ 21.10 ಕೋಟಿ ವೆಚ್ಚದಲ್ಲಿ ಕೇವಲ 684 ಹೊಸ ಕಟ್ಟಡಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಪ್ರತಿಯೊಂದು ಅಂಗನವಾಡಿ ಕೇಂದ್ರದ ನಿರ್ಮಾಣಕ್ಕೆ 4.18 ಲಕ್ಷ ನಿಗದಿ ಮಾಡಲಾಗಿದೆ. ಅಂಗನವಾಡಿ ಕೇಂದ್ರಗಳಿಂದ ಕಳೆದ ಸಾಲಿನಲ್ಲಿ ಸೇವೆಗಳನ್ನು ಪಡೆದುಕೊಂಡ ಫಲಾನುಭವಿಗಳ ಸಂಖ್ಯೆ 49.37 ಲಕ್ಷ. ಇಷ್ಟಾದರೂ, ಸಾವಿರಾರು ಅಂಗನವಾಡಿ ಕೇಂದ್ರಗಳು ದೇವಸ್ಥಾನ, ಸಮುದಾಯ ಭವನ ಹಾಗೂ ಇತರೆ ತಾತ್ಕಾಲಿಕ ವ್ಯವಸ್ಥೆಯನ್ನೇ ಅವಲಂಬಿಸಿವೆ.
27 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳು ತಾತ್ಕಾಲಿಕ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ವಂತ ಕಟ್ಟಡವಿದ್ದರೇ ಅಲ್ಲಿನ ಶುಚಿತ್ವ ಹಾಗೂ ಕಾರ್ಯನಿರ್ವಹಣೆ ಬಗ್ಗೆ ಕೈ ತೋರಲಾಗುತ್ತದೆ. ಇನ್ನು ಅಂಗನವಾಡಿ ಕೇಂದ್ರಗಳು ಸ್ವಾಸ್ಥ್ಯವಿಲ್ಲದ ಪರಿಸರದಲ್ಲಿ ಬಾನಡಿ ಕಾರ್ಯನಿರ್ವಹಿಸಿದರೆ ಅದರಿಂದ ಪೌಷ್ಟಿಕ ಆಹಾರ ಅಥವಾ ಆರೋಗ್ಯ ರಕ್ಷಣೆ ಸಾಧ್ಯವೇ? ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿದವರು ಕೇಂದ್ರ ಸರ್ಕಾರದ ಮೇಲೆ ಕೈ ತೋರದೆ, ಸೂರು ಒದಗಿಸುವ ಮೂಲ ಕಾರ್ಯಕ್ಕೆ ಇನ್ನಾದರೂ ಆರಂಭಿಸಬೇಕಿದೆ.

- ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments