ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಮೆರಿಕ ವೈದ್ಯಗ್ರಂಥಕ್ಕೆ ಕನ್ನಡ ಚಿತ್ರ

ಅಮೆರಿಕದ ವಿವಿಯೊಂದು ಪ್ರಕಟಿಸಿರುವ ಬೃಹತ್ ವೈದ್ಯಕೀಯ ಗ್ರಂಥವೊಂದಕ್ಕೆ ನಾಡಿನ ಹಿರಿಯ ಚಿತ್ರಕಲಾವಿದ ಪಿ.ಎನ್. ಆಚಾರ್ಯ ನಾಯಿ, ಬೆಕ್ಕುಗಳ ದೇಹ ರಚನಾ...

Parashurama
Updated On : 4 Mar 2013, 1:18 am

ಕನ್ನಡಪ್ರಭ ವಾರ್ತೆ ಮಣಿಪಾಲ ಮಾ.3
ಅಮೆರಿಕದ ವಿವಿಯೊಂದು ಪ್ರಕಟಿಸಿರುವ ಬೃಹತ್ ವೈದ್ಯಕೀಯ ಗ್ರಂಥವೊಂದಕ್ಕೆ ನಾಡಿನ ಹಿರಿಯ ಚಿತ್ರಕಲಾವಿದ ಪಿ.ಎನ್. ಆಚಾರ್ಯ  ನಾಯಿ, ಬೆಕ್ಕುಗಳ ದೇಹ ರಚನಾ ಶಾಸ್ತ್ರಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ರಚಿಸಿ ಕೊಟ್ಟಿದ್ದಾರೆ. ಆ ಮೂಲಕ ಕನ್ನಡದ ಕಲಾವಿದರೊಬ್ಬರು ಈ ಗೌರವಕ್ಕೆ ಪಾತ್ರವಾಗಿದ್ದಾರೆ.
ಅಮೆರಿಕದ ಗುಫ್ಟ್ ವಿವಿ ಹೊರ ತಂದಿರುವ 'ಕ್ಲಿನಿಕಲಿ ಓರಿಯೆಂಟೆಡ್ ಅನಾಟಮಿ ಆಫ್ ಡಾಗ್ ಆ್ಯಂಡ್ ಕ್ಯಾಟ್‌' ಎಂಬ ಪಶುವೈದ್ಯಕೀಯ ಲೋಕದ ಈ ಬೃಹತ್ ಆಕರ ಗ್ರಂಥವನ್ನು ಮೂಲತಃ ಭಾರತೀಯ ತಜ್ಞ ವೈದ್ಯ ಡಾ. ಎಂ.ಎಸ್.ಎ. ಕುಮಾರ್ ಬರೆದಿದ್ದಾರೆ. ಸ್ವತಃ ಅವರೇ ಈ ಗ್ರಂಥದಲ್ಲಿ ಹೇಳಿರುವಂತೆ ಪ್ರಥಮ ಬಾರಿಗೆ ಭಾರತೀಯ ಚಿತ್ರ ಕಲಾವಿದರೊಬ್ಬರಿಗೆ ಈ ರೀತಿ ವೈದ್ಯಕೀಯ ದೇಹರಚನಾ ಶಾಸ್ತ್ರೀಯ ಚಿತ್ರ ರಚನೆಯ ಅವಕಾಶ ಮತ್ತು ಗೌರವ ಸಿಕ್ಕಿದೆ.
2,342 ಚಿತ್ರ ರಚನೆ: ಭಾರೀ ಗಾತ್ರದ ಈ ಗ್ರಂಥದಲ್ಲಿ ಒಟ್ಟು 1,614 ಪುಟಗಳಿದ್ದು ಇವುಗಳಲ್ಲಿ ಪಿ.ಎನ್. ಆಚಾರ್ಯರು 2,342 ಚಿತ್ರಗಳನ್ನು ಬರೆದಿದ್ದಾರೆ. ನಾಯಿ ಮತ್ತು ಬೆಕ್ಕುಗಳ ದೇಹ ಮತ್ತು ದೇಹದೊಳಗಿನ ಅಂಗಾಂಗಗಳನ್ನು ಅತ್ಯಂತ ನಿಖರವಾಗಿ, ಪ್ರಮಾಣಬದ್ಧವಾಗಿ ಬರೆದಿದ್ದಾರೆ. ಕೆಲವು ಚಿತ್ರಗಳು ರೇಖಾ ಚಿತ್ರಗಳಾಗಿದ್ದರೆ, ಬಹುತೇಕ ಚಿತ್ರಗಳು ಬಣ್ಣದಿಂದ ರಚಿಸಿದ ಸೂಕ್ಷ್ಮ ಚಿತ್ರಗಳಾಗಿವೆ.
ಮೊದಲು ತಮಾಷೆ ಮಾಡುತ್ತಿದ್ದಾರೆಂದುಕೊಂಡೆ: ಲೇಖಕ ಕುಮಾರ್ ಅವರು ದೆಹಲಿಗೆ ಬಂದಿದ್ದಾಗ, ಅವರ ಈ ಗ್ರಂಥಕ್ಕೆ ಆಚಾರ್ಯರಿಂದ ಚಿತ್ರಗಳನ್ನು ಬರೆಸುವಂತೆ ಯಾರೋ ಶಿಫಾರಸು ಮಾಡಿದರಂತೆ. ಈ ಹಿನ್ನೆಲೆಯಲ್ಲಿ ಕುಮಾರ್ ಆಚಾರ್ಯರನ್ನು ಪತ್ರದ ಮೂಲಕ ಸಂಪರ್ಕಿಸಿದರು. ಆದರೆ ಅಮೆರಿಕದ ಈ ಪ್ರತಿಷ್ಠಿತ ವಿವಿಯಿಂದ ಪತ್ರ ಬಂದಾಗ ಆರಂಭದಲ್ಲಿ ಯಾರೋ ತಮಗೆ ತಮಾಷೆ ಮಾಡುತ್ತಿದ್ದಾರೆ ಎಂದೇ ಆಚಾರ್ಯರು ಭಾವಿಸಿ ಸ್ವಲ್ಪ ನಿರ್ಲಕ್ಷಿಸಿದರಂತೆ. ಆದರೆ ಮತ್ತೆ ಪತ್ರಗಳು ಬಂದಾಗ ಆಸಕ್ತಿ ವಹಿಸಿದ ಆಚಾರ್ಯರಿಗೆ ಚಿತ್ರಗಳನ್ನು ಬರೆಯಲು ಖುದ್ದು ಅಮೆರಿಕಕ್ಕೆ ಬರುವಂತೆ ಕುಮಾರ್ ಹೇಳಿದರು. ಈ ಷರತ್ತಿಗೆ ಆಚಾರ್ಯರು ಒಪ್ಪದಿದ್ದಾಗ, ಕೊನೆಗೆ ಮಣಿಪಾಲದಲ್ಲಿದ್ದುಕೊಂಡೇ ಚಿತ್ರಗಳನ್ನು ಬರೆದುಕೊಡುವುದಕ್ಕೆ ಸಮ್ಮತಿ ಸೂಚಿಸಿದರು.
ಕುಮಾರ್ ಇಮೇಲ್ ಮೂಲಕ ವಿವರಗಳನ್ನು, ಛಾಯಾಚಿತ್ರಗಳನ್ನು ಕಳುಹಿಸುತ್ತಿದ್ದರು. ಅದರ ಆಧಾರದ ಮೇಲೆ ಈ ಚಿತ್ರಗಳನ್ನು ಬರೆಯಬೇಕಾಗಿತ್ತು.   ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ವರ್ಣಚಿತ್ರಗಳನ್ನು ಎಷ್ಟು ಚೆನ್ನಾಗಿ ಅವರು ಬರೆದಿದ್ದಾರೆ ಎಂದರೆ ಬೇರೆ ವಿವಿಗಳಿಂದ ಇಂಥದ್ದೇ 2 ಬೃಹತ್ ಗ್ರಂಥಗಳಿಗೆ ಚಿತ್ರಗಳನ್ನು ಬರೆಯುವುದಕ್ಕೆ ಆಚಾರ್ಯರಿಗೆ ಆಹ್ವಾನ ಬಂದಿದೆ.
ಆಚಾರ್ಯರು ಈಗ ನಿವೃತ್ತಿ: ಚಿತ್ರಕಲಾ ಅಕಾಡೆಮಿಯ ಸದಸ್ಯರೂ ಆಗಿದ್ದ ಆಚಾರ್ಯರು, ಪುರಾಣ ಕತೆಗಳ ಪಾತ್ರಗಳ ಚಿತ್ರ ರಚನೆ, ಜಲವರ್ಣ ಚಿತ್ರ ರಚನೆಯಲ್ಲಿ ನಾಡಿನಲ್ಲಿಯೇ ಪ್ರಸಿದ್ಧರಾಗಿರುವವರು. ವೈದ್ಯಕೀಯ ಚಿತ್ರ (ಮೆಡಿಕಲ್ ಆರ್ಟ್) ರಚನೆಯಲ್ಲಿ ಅಧ್ಯಯನ ಮಾಡಿ, ಪರಿಣತರಾಗಿರುವ ಆಚಾರ್ಯರು ಮಣಿಪಾಲ ವಿವಿಯ ವೈದ್ಯಕೀಯ ಚಿತ್ರಕಲಾವಿದರಾಗಿ ದುಡಿದು ಇದೀಗ ನಿವೃತ್ತರಾಗಿದ್ದಾರೆ.
-ಸುಭಾಶ್ಚಂದ್ರ ಎಸ್. ವಾಗ್ಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments