ಖಾಕಿ ಕಾವಲಿನಲ್ಲಿ ಚಿಕಿತ್ಸೆ
ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ನಡೆದ ದೆಹಲಿ ಮಾದರಿಯ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ...
ಕನ್ನಡಪ್ರಭ ವಾರ್ತೆ ಬೆಳಗಾವಿ ಮಾ.3
ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ನಡೆದ ದೆಹಲಿ ಮಾದರಿಯ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶನಿವಾರ ತಡ ರಾತ್ರಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ತುರ್ತು ನಿಗಾ ಕೊಠಡಿ ಬಳಿ ಪೊಲೀಸರನ್ನು ಕಾವಲಿಗೆ ನಿಯೋಜಿಸಲಾಗಿದೆ.
ಯುವತಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಶನಿವಾರ ಸಂಜೆಯೇ ಬೆಳಗಾವಿಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಉಸಿರಾಟದ ತೊಂದರೆಯಿಂದ ಹಠಾತ್ ಸ್ಥಗಿತಗೊಳಿಸಿ ಹಾರೂಗೇರಿ ಸ್ಪಂದನಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಪರಿಸ್ಥಿತಿ ಸುಧಾರಿಸಿದ ಬಳಿಕ ತಡರಾತ್ರಿ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿದೆ.
ಜಿಲ್ಲಾಸ್ಪತ್ರೆಯ ತಜ್ಞ ವೈದ್ಯರ ತಂಡ ಯುವತಿಯ ಆರೋಗ್ಯ ತಪಾಸಣೆ ನಡೆಸಿದ್ದು ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಪೊಲೀಸರೇ ವಿದ್ಯಾರ್ಥಿನಿಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ. ಹಾರೂಗೇರಿ ಆಸ್ಪತ್ರೆಯಲ್ಲಿ ಉದರ ಶಸ್ತ್ರಚಿಕಿತ್ಸೆ ಮಾತ್ರ ಮಾಡಲಾಗಿದ್ದು ಉಳಿದಂತೆ ಯಾವುದೇ ಶಸ್ತ್ರಚಿಕಿತ್ಸೆ ನಡೆಸಿಲ್ಲ. ಯುವತಿ ಆರೋಗ್ಯ ಸ್ಥಿರವಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ. ರಾಮಯ್ಯ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ತಲೆಗೆ ಪೆಟ್ಟಾಗಿಲ್ಲ: ವಿದ್ಯಾರ್ಥಿನಿಯ ವೈದ್ಯಕೀಯ ತಪಾಸಣೆಯ ಸಮಗ್ರ ವರದಿಯನ್ನು ಪೊಲೀಸ್ ಠಾಣೆಗೆ ಸಲ್ಲಿಸಲಾಗುತ್ತಿದೆ. ವೈದ್ಯಕೀಯ ಚಿಕಿತ್ಸೆಯ ಪ್ರತಿ ಅಂಶಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ. ನಮ್ಮ ಆಸ್ಪತ್ರೆಯಲ್ಲಿ ಯುವತಿಗೆ ಉದರ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಇನ್ನಾವುದೇ ಶಸ್ತ್ರಚಿಕಿತ್ಸೆ ಮಾಡಿಲ್ಲ. ಆಕೆಯ ತಲೆಗೆ ಪೆಟ್ಟಾಗಿಲ್ಲ ಎಂದು ಹಾರೂಗೇರಿಯ ಸ್ಪಂದನಾ ಆಸ್ಪತ್ರೆಯ ವೈದ್ಯ ಡಾ.ಅಶೋಕ ವೇಲಾಪುರೆ ತಿಳಿಸಿದ್ದಾರೆ.
ಸರ್ಕಾರದಿಂದ ರಕ್ಷಣೆ ಅಸಾಧ್ಯ!: ನನ್ನ ಮಗಳಿಗೆ ಆದಂಥ ಅನ್ಯಾಯ ಯಾವ ಹೆಣ್ಣುಮಕ್ಕಳಿಗೂ ಆಗಬಾರದು. ಗಂಡನನ್ನು ಬಿಟ್ಟು ಏಕೈಕ ಪುತ್ರಿಯೊಂದಿಗೆ ಸಹೋದರನ ಆಸರೆಯಲ್ಲಿದ್ದೆ. ಸಹೋದರನನ್ನು ಬಿಟ್ಟರೆ ನನಗೆ ಬೇರೆ ಯಾರೂ ಆಸರೆಯೇ ಇಲ್ಲ.
ಅತ್ಯಾಚಾರ ಘಟನೆ ಹಿನ್ನೆಲೆಯಲ್ಲಿ ಇಟ್ನಾಳ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಗ್ರಾಮದಲ್ಲಿ ಯಾರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದಕ್ಕೆ ಆ ರೌಡಿಗಳ ಭಯವೇ ಕಾರಣ. ಅವರು ಏನೂ ಮಾಡಲು ಹೇಸುವುದಿಲ್ಲ. ದಯವಿಟ್ಟು ನಮ್ಮನ್ನು ಬದುಕಲು ಬಿಟ್ಟು ಬಿಡಿ ಎಂದು ಯುವತಿ ತಾಯಿ ಗೋಗರೆಯುತ್ತಿದ್ದಾಳೆ. ಅವರು (ಡಾಂಗೆ ಕುಟುಂಬ) ಪೊಲೀಸರನ್ನೇ ಬಿಟ್ಟಿಲ್ಲ.
ಇಂಥ ಪರಿಸ್ಥಿತಿಯಲ್ಲಿ ನಮ್ಮಂಥ ಸಾಮಾನ್ಯ ಕುಟುಂಬಕ್ಕೆ ರಕ್ಷಣೆ ಸಿಗುವುದು ಅಸಾಧ್ಯ. ನಮಗೆ ರಕ್ಷಣೆ ದೊರೆಯುತ್ತದೆ ಎಂಬ ಬಗ್ಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಎಲ್ಲಾ ಆಗಿದ್ದ ಆಗೈತಿ ಬಿಡ್ರಿ. ಈಗ ನಾವು ಸುಮ್ಮನೇ ಆಗಿ ಬಿಟ್ಟೀವಿ, ನೀವು ಸುಮ್ಮನೇ ಏನೂ ಕೇಳದೆ ಹೊರಟು ಹೋಗಿ. ನಮ್ಗೆ ಬದುಕಲು ಬಿಟ್ಟು ಬಿಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಇಂದು ಆರೋಪಿಗಳು ಕೋರ್ಟ್‌ಗೆ
ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಶದಲ್ಲಿರುವ ಮೂವರು ಆರೋಪಿಗಳನ್ನು ಸೋಮವಾರ ರಾಯಬಾಗ ತಾಲೂಕು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ರಾಯಬಾಗ ಠಾಣೆ ಸಿಪಿಐ ಎಸ್.ಡಿ. ಜಲ್ದೆ ತಿಳಿಸಿದ್ದಾರೆ. ವಿಚಾರಣೆ ಪೂರ್ಣಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖಾ ವರದಿಯನ್ನೊಳಗೊಂಡ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆಗೆ ಮನವಿ ಮಾಡಿಕೊಳ್ಳುವುದಿಲ್ಲ ಎಂದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.