ರಾಜ್ಯ ಬಿಜೆಪಿಗೆ ಪ್ರಹ್ಲಾದ್ ಜೋಶ್
ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಧಾರವಾಡ ಲೋಕಸಭಾ ಸದಸ್ಯ ಪ್ರಹ್ಲಾದ ಜೋಶಿ ಅವರನ್ನು ನೇಮಕ ಮಾಡಲಾಗಿದೆ...
ಕನ್ನಡಪ್ರಭ ವಾರ್ತೆ ನವದೆಹಲಿ ಮಾ.21
ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಧಾರವಾಡ ಲೋಕಸಭಾ ಸದಸ್ಯ ಪ್ರಹ್ಲಾದ ಜೋಶಿ ಅವರನ್ನು ನೇಮಕ ಮಾಡಲಾಗಿದೆ.
ವಿಧಾನಸಭಾ ಚುನಾವಣೆಗೆ ಕೇವಲ ನಲ್ವತ್ನಾಲ್ಕು ದಿನಗಳು ಬಾಕಿ ಇರುವ ನಿರ್ಣಾಯಕ ಹಂತದಲ್ಲಿ ರಾಜ್ಯ ಬಿಜೆಪಿ ಸಾರಥ್ಯವನ್ನು ಜೋಶಿ ವಹಿಸಿಕೊಳ್ಳುತ್ತಿದ್ದಾರೆ.
ಪರಸ್ಪರ ವಿಶ್ವಾಸದ ಕೊರತೆಯಿಂದ ಒಡೆದ ಮನೆಯಾಗಿರುವ ಬಿಜೆಪಿಯನ್ನು ಮುನ್ನಡೆಸುವುದು ಜೋಶಿ ಅವರಿಗೆ ನಿಜಕ್ಕೂ ದೊಡ್ಡ ಸವಾಲು. ಅವರ ರಾಜಕೀಯ ಜೀವನದಲ್ಲಿ ಇದು ನಿರ್ಣಾಯಕ ಜವಾಬ್ದಾರಿಯೂ ಹೌದು.
ಡಿಸಿಎಂ ಈಶ್ವರಪ್ಪ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದವರ ಸಂಖ್ಯೆ ನಾಲ್ಕು. ಮಾಜಿ ಸಿಎಂ ಸದಾನಂದಗೌಡ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಗೋವಿಂದ ಕಾರಜೋಳ ಹಾಗೂ ಪ್ರಹ್ಲಾದ ಜೋಶಿ. ಸಿಎಂ ಆಗಿದ್ದಾಗಲೇ ತಾವು ಪ್ರತಿನಿಧಿಸಿದ್ದ ಲೋಕಸಭಾ ಕ್ಷೇತ್ರವನ್ನು ಗೆದ್ದುಕೊಡಲಾಗದ ಕಾರಣಕ್ಕೆ ಡೀವಿಗೆ ವರಿಷ್ಠರು ರಾಜ್ಯಾಧ್ಯಕ್ಷ ಹೊಣೆ ನೀಡುವ ನಿರ್ಧಾರ ಕೈಬಿಟ್ಟಿದ್ದರು.
ನಳಿನ್ ಕುಮಾರ್ ಕಟೀಲ್ ಹೆಸರನ್ನು ಅನನುಭವಿ ಎಂಬ ಕಾರಣಕ್ಕೆ ಕೈಬಿಡಲಾಗಿತ್ತು. ಗೋವಿಂದ ಕಾರಜೋಳ ಅವರನ್ನು ಕೈಬಿಡಲು ಕಾರಣಗಳೇನೂ ಇರಲಿಲ್ಲ. ಆದರೆ, ಪ್ರಹ್ಲಾದ ಜೋಶಿ ಅವರನ್ನು ನೇಮಿಸಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ವರಿಷ್ಠರ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ಗೋವಿಂದ ಕಾರಜೋಳ ಆಯ್ಕೆ ಕೈಬಿಡಲಾಯಿತು.
ಅಧಿಕೃತ ಪ್ರಕಟ: ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಪ್ರಹ್ಲಾದ ಜೋಶಿ ಅವರ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಿದರು. ಸಂಘ ಪರಿವಾರದೊಂದಿಗೆ ಬೆಳೆದ ಜೋಶಿ ಅವರಿಗೆ ಅನಂತಕುಮಾರ್ ಅಘೋಷಿತ ರಾಜಕೀಯ ಗುರು. ಈದ್ಗಾ ಮೈದಾನದ ಹೋರಾಟದಿಂದ ಪ್ರವರ್ಧಮಾನಕ್ಕೆ ಬಂದ ಜೋಶಿ 2004ರಲ್ಲಿ ಮೊದಲ ಬಾರಿಗೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. 2009ರ ಚುನಾವಣೆಯಲ್ಲೂ ಧಾರವಾಡ ಲೋಕಸಭಾ ಕ್ಷೇತ್ರದ ಜನತೆ ಜೋಶಿ ಅವರನ್ನು ಕೈಬಿಡಲಿಲ್ಲ.
ನಿರೀಕ್ಷಿತ ಆಯ್ಕೆ: ಕೆ.ಎಸ್. ಈಶ್ವರಪ್ಪ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೇ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಷಯ ಬಂದಾಗಲೆಲ್ಲ ಜೋಶಿ ಅವರ ಹೆಸರು ಪ್ರಧಾನವಾಗಿ ಪ್ರಸ್ತಾಪವಾಗುತ್ತಿತ್ತು. ಆದರೆ, ಬದಲಾದ ರಾಜಕೀಯ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ವರಿಷ್ಠರು ನೂತನ ಅಧ್ಯಕ್ಷರ ಆಯ್ಕೆ ಮುಂದೂಡತ್ತಲೇ ಬಂದರು. ಈಶ್ವರಪ್ಪ ಸಹ ಅಧ್ಯಕ್ಷ ಸ್ಥಾನದ ಜತೆಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನಿಭಾಯಿಸಿ ಅನುಭವಿಸಿದರು. ಎರಡು ವಾರಗಳ ಹಿಂದೆ ಈಶ್ವರಪ್ಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಪಕ್ಷದ ವರಿಷ್ಠರು ರಾಜಿನಾಮೆ ಅಂಗೀಕರಿಸಿದ್ದ ಬಗ್ಗೆ ಅಧಿಕೃತವಾಗೇನೂ ಪ್ರಕಟಿಸಿರಲಿಲ್ಲ. ಆದರೆ, ವಿಧಾನಸಭಾ ಚುನಾವಣೆ ಘೋಷಣೆ ಆದ ನಂತರವೂ ಪಕ್ಷ ಸಾರಥಿಯಿಲ್ಲದ ನಾವೆಯಂತಾಗಬಾರದು ಎಂಬ ಕಾರಣಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿದೆ.
ಚಿಂತನ ಮಂಥನ: ಜೋಶಿ ನೇಮಿಸುವ ಮುನ್ನ ಅವರ ಅಘೋಷಿತ ರಾಜಕೀಯ ಗುರು ಅನಂತಕುಮಾರ್ ತಮ್ಮ ನಿವಾಸದಲ್ಲಿ ಒಂದು ಡಜನ್ ಸಂಸದರೊಂದಿಗೆ ಭೋಜನಕೂಟದ ಜತೆಗೆ ಸಮಾಲೋಚನೆ ನಡೆಸಿದರು. ಆ ಸಮಾಲೋಚನಾ ಸಭೆಯ ಏಕಂಶದ ಅಜೆಂಡಾ ಎಂದರೆ ಜೋಶಿ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕೆಂದು ಒತ್ತಡ ತರುವುದಾಗಿತ್ತು ಎನ್ನಲಾಗಿದೆ. ಸಂಸದರಾದ ಜನಾರ್ದನ ಸ್ವಾಮಿ, ರಮೇಶ್ ಕತ್ತಿ, ನಳಿನ್ ಕುಮಾರ್ ಕಟೀಲ್, ಜಿ.ಎಂ. ಸಿದ್ದೇಶ್, ಶಿವರಾಮೇಗೌಡ, ಡಿ.ಬಿ. ಚಂದ್ರೇಗೌಡ, ಪ್ರಹ್ಲಾದ ಜೋಶಿ, ಆಯನೂರು ಮಂಜುನಾಥ ಮತ್ತಿತರು ಈ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ಭೋಜನ ಕೂಟ ಮುಗಿದ ಸುಮಾರು ಎರಡು ತಾಸುಗಳ ಅಂತರದಲ್ಲಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಜೋಶಿ ಅವರನ್ನು ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಪ್ರಕಟಿಸಿದರು.
ಶೆಟ್ಟರ್, ಜೋಶಿ ಒಂದೇ ಜಿಲ್ಲೆಯವರು
ಪ್ರಹ್ಲಾದ ಜೋಶಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವುದರೊಂದಿಗೆ ಮುಖ್ಯಮಂತ್ರಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಒಂದೇ ಜಿಲ್ಲೆಗೆ ಕೊಟ್ಟಂತಾಗಿದೆ. ಧಾರವಾಡ ಜಿಲ್ಲೆ ಪ್ರತಿನಿಧಿಸುತ್ತಿರುವ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾರೆ. ಜೋಶಿ ಅವರೂ ಧಾರವಾಡದವರು. ಈ ಹಿಂದೆ ಶಿವಮೊಗ್ಗ ಜಿಲ್ಲೆ ಪ್ರತಿನಿಧಿಸುತ್ತಿದ್ದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಅದೇ ಜಿಲ್ಲೆಯ ಕೆ.ಎಸ್. ಈಶ್ವರಪ್ಪ ರಾಜ್ಯಾಧ್ಯಕ್ಷರಾಗಿದ್ದರು.ಈಗ ಪರಿಸ್ಥಿತಿ ಬೇರೆ ಇದೆ. ಶೆಟ್ಟರ್ ಅವರ ಅಧಿಕಾರ ಅವಧಿ ಬಹುತೇಕ ಮುಗಿಯುತ್ತಾ ಬಂದಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆಂಬ ವಿಶ್ವಾಸ ಬಿಜೆಪಿ ನಾಯಕರಿಗೂ ಇಲ್ಲ. ಆದರೆ, ಈಗಿನ್ನೂ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಜೋಶಿ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದಷ್ಟೆ ಅಲ್ಲ, 2014ರ ಸಾರ್ವತ್ರಿಕ ಚುನಾವಣೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ.
ಅನಂತ ಕೈಯಲ್ಲಿ 'ರಾಜ್ಯ'ಕಾರಣ
ಪ್ರಹ್ಲಾದ ಜೋಶಿ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗುವುದರೊಂದಿಗೆ ರಾಜ್ಯ ಬಿಜೆಪಿ ಅನಂತಕುಮಾರ್ ಅವರ ಹಿಡಿತಕ್ಕೆ ಸಿಕ್ಕಿದೆ. ಈಶ್ವರಪ್ಪ ಅವರಿಗೆ ಚುನಾವಣಾ ಮುಗಿಯುವವರೆಗೂ ಅಧ್ಯಕ್ಷರಾಗಿ ಮುಂದುವರಿಯುವ ಆಸಕ್ತಿ ಇತ್ತು. ಆದರೆ, ಅನಂತಕುಮಾರ್ ಅವರ ಹಸ್ತಕ್ಷೇಪ ಹೆಚ್ಚಾಗಿದ್ದ ಕಾರಣ ಅವರು ರಾಜಿನಾಮೆ ನೀಡಿದ್ದಾರೆನ್ನಲಾಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಬಿಜೆಪಿಯಲ್ಲಿದ್ದಾಗ ಪರಿಸ್ಥಿತಿ ಭಿನ್ನವಾಗಿತ್ತು. ಯಡಿಯೂರಪ್ಪ ಮತ್ತು ಅನಂತಕುಮಾರ್ ಪ್ರತ್ಯೇಕ ಶಕ್ತಿ ಕೇಂದ್ರಗಳಾಗಿಯೇ ಇದ್ದರು. ಪಕ್ಷದ ವೇದಿಕೆಗಳಲ್ಲಿ ಒಂದುಗೂಡುವುದನ್ನು ಬಿಟ್ಟರೆ, ಅವರಿಬ್ಬರೆಂದೂ ಒಗ್ಗೂಡಲಿಲ್ಲ. ಪರಸ್ಪರ ಒಗ್ಗೂಡದ ಗುಣವನ್ನು ಇಬ್ಬರೂ ಮೈಗೂಡಿಸಿಕೊಂಡಿದ್ದರು. ಪಕ್ಷದ ಮೇಲೆ ಹಿಡಿತ ಸಾಧಿಸಲು ಇಬ್ಬರೂ ಹಪಹಪಿಸುತ್ತಿದ್ದರು.ಕೊನೆಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಅನಂತಕುಮಾರ್ ಕೇಂದ್ರದತ್ತ ಗಮನ ಹರಿಸಿದ್ದರು. ಆದರೂ, ಯಡಿಯೂರಪ್ಪ ಅವರ ವಿರುದ್ಧ ನಡೆದ ಭಿನ್ನಮತೀಯ ಚಟುವಟಿಕೆಗಳ ಹಿಂದೆ ಅನಂತಕುಮಾರ್ ಕೈವಾಡ ಇತ್ತೆಂದು ಇಂದಿಗೂ ಯಡಿಯೂರಪ್ಪ ನಂಬಿದ್ದಾರೆ. ಅದನ್ನು ಮಾಧ್ಯಮಗಳ ಮುಂದೆಯೂ ಹೇಳಿಕೊಂಡಿದ್ದಾರೆ. ಅದರ ಸತ್ಯಾಸತ್ಯಾತೆ ಏನೇ ಇರಲಿ, ಯಡಿಯೂರಪ್ಪ ಅತ್ತ ತೆರಳಿದ ನಂತರ ಅನಂತಕುಮಾರ್ ವಿರುದ್ಧ ಸೆಡ್ಡು ಹೊಡೆಯುವ ಯಾವ ನಾಯಕರೂ ಉಳಿದಿಲ್ಲ. ಸೆಡ್ಡು ಹೊಡೆಯಬಹುದಾದ ಈಶ್ವರಪ್ಪ ಕೂಡಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈಗ ಅವರ ಹಿಂಬಾಲಕ ಪ್ರಹ್ಲಾದ ಜೋಶಿಯೇ ರಾಜ್ಯಾಧ್ಯಕ್ಷ. ಅನಂತಕುಮಾರ್ ರಾಜ್ಯ ಬಿಜೆಪಿಯಲ್ಲೀಗ ಏಕಮೇವಾದ್ವಿತೀಯ.
ಸವಾಲುಗಳು?
ಮುಖ್ಯವಾದ ಮತ್ತು ನಿರ್ಣಾಯಕ ಸವಾಲು ರಾಜ್ಯ ವಿಧಾನಸಭಾ ಚುನಾವಣೆ. ಮತ್ತು ಈ ಚುನಾವಣೆ ಈಗಾಗಲೇ ಘೋಷಣೆ ಆಗಿರುವುದು. ಪಕ್ಷ ಒಡೆದ ಮನೆಯಾಗಿದೆ. ಒಂದು ಕಡೆ ಪಕ್ಷದ ಶಕ್ತಿಯಂತಿದ್ದ ಯಡಿಯೂರಪ್ಪ ಬೇರೆ ಮನೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನವೇ ಶ್ರೀರಾಮುಲು ಮನೆ ತೊರೆದಿದ್ದಾರೆ. ಯಡಿಯೂರಪ್ಪ ಬೇರೆ ಮನೆ ಮಾಡಿಕೊಂಡಿದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿತ್ತು.
ಬಿಎಸ್ವೈ ಒಡ್ಡಿರುವ ಜೋಳಿಗೆಗೆ ಹರಿದು ಹೋಗಲಿರುವ ಮತ ತಡೆದು ಅಧಿಕಾರಕ್ಕೆ ಬಾರದೇ ಇದ್ದರೂ ಗೌರವಯುತ ಎನ್ನಿಸುವಷ್ಟು ಕ್ಷೇತ್ರಗಳನ್ನು ಗೆಲ್ಲಬೇಕು.
ಇತ್ತ ಬಿಜೆಪಿ ಆಡಳಿತದ ಬಗ್ಗೆ ಬೇಸತ್ತ ಜನತೆ, ಪಕ್ಷದಲ್ಲಿರುವ ಮುಖಂಡರ ನಡುವಿನ ವಿಶ್ವಾಸದ ಕೊರತೆ, ಅತ್ತ ಪ್ರಬಲವಾಗುತ್ತಿರುವ ಕಾಂಗ್ರೆಸ್ ಮತ್ತು ಅದರತ್ತ ವಾಲುತ್ತಿರುವ ಜನಾಭಿಪ್ರಾಯ ಜೋಶಿ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿಗಳು.
-ರೇಣುಕಾಪ್ರಸಾದ್ ಹಾಡ್ಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.