ಸ್ಟಾಲಿನ್ ಮನೆಗೆ ದಾಳಿ
ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಪುತ್ರ ಸ್ಟಾಲಿನ್ ಅವರ ಚೆನ್ನೈ ನಿವಾಸದ ಮೇಲಿನ ಸಿಬಿಐ ದಾಳಿ ಬಗ್ಗೆ ಸ್ಪಷ್ಟನೆ ನೀಡುವಲ್ಲಿ ಗುರುವಾರಕೇಂದ್ರ ಸರ್ಕಾರಕ್ಕೆ ಸಾಕುಸಾಕಾಯಿತು....
ನವದೆಹಲಿ/ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಪುತ್ರ ಸ್ಟಾಲಿನ್ ಅವರ ಚೆನ್ನೈ ನಿವಾಸದ ಮೇಲಿನ ಸಿಬಿಐ ದಾಳಿ ಬಗ್ಗೆ ಸ್ಪಷ್ಟನೆ ನೀಡುವಲ್ಲಿ ಗುರುವಾರ ಕೇಂದ್ರ ಸರ್ಕಾರಕ್ಕೆ ಸಾಕುಸಾಕಾಯಿತು.
ಆಗಿದ್ದಿಷ್ಟೇ, ಗುರುವಾರ ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಸ್ಟಾಲಿನ್ ನಿವಾಸದ ಮೇಲೆ ದಾಳಿ ನಡೆಸಿದರು. ಮನೆಯೊಳಗೆ ಅವರು ಕಾಲೇ ಇಟ್ಟಿಲ್ಲ ಎಂದು ಕೇಂದ್ರ ವಿತ್ತ ಸಚಿವ ಚಿದಂಬರಂ ವಾದಿಸಿದರೂ ಸಹ ಅವರು ಆವರಣಕ್ಕಂತೂ ಕಾಲಿಟ್ಟಿದ್ದು ನಿಜವಾಗಿತ್ತು. ದಾಳಿ ಬಗ್ಗೆ ಯಾವ ಅರಿವು ಇಲ್ಲದ ಡಿಎಂಕೆ ಪಾಲಿಗೆ ಇದು ಶಾಕಿಂಗ್ ನ್ಯೂಸ್ ಆಗಿತ್ತು. ಸಿಬಿಐ ಅಧಿಕಾರಿಗಳ ಹೆಸರು ಕೇಳುತ್ತಲೇ ಡಿಎಂಕೆ ನಾಯಕರ ಬಾಯಿಯಿಂದ ಬಂದ ಮಾತು ಇದು ರಾಜಕೀಯ ಸೇಡಲ್ಲದೇ ಮತ್ತಿನ್ನೇನು?
ಸಿಬಿಐ ದಾಳಿಯಿಂದ ಸಿಟ್ಟಿಗೆದ್ದ ಸ್ಟಾಲಿನ್ ಇದು ರಾಜಕೀಯ ಸೇಡಿನ ದಾಳಿ ಎಂದರೆ, ಕರುಣಾನಿಧಿ ತುಸು ಎಚ್ಚರಿಕೆಯ ಹೇಳಿಕೆ ನೀಡಿದರು. ಈ ದಾಳಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೊತ್ತಿರಲೂ ಬಹುದು, ಗೊತ್ತಿಲ್ಲದೇ ಇದ್ದರೂ ಇರಬಹುದು. ಹೆಚ್ಚು ಎಳೆಯುವುದು ಬೇಡ ಎಂದು ಬಿಟ್ಟರು.
ದಾಳಿಗೆ ಸಿಬಿಐ ಅಧಿಕಾರಿಗಳು ನೀಡಿದ ಕಾರಣ, ಸ್ಟಾಲಿನ್ ಖರೀದಿಸಿದ ಹೊರದೇಶದ ಕಾರು. ಚೆನ್ನೈ ಸೇರಿದಂತೆ ತಮಿಳುನಾಡಿನ 19 ಕಡೆಗಳಲ್ಲಿ ವಿದೇಶಿ ಕಾರುಗಳ ಖರೀದಿ ಸಂಬಂಧ ದಾಳಿ ನಡೆಸಿದ್ದೇವೆ. ಇದರಲ್ಲಿ ಸ್ಟಾಲಿನ್ ನಿವಾಸವೂ ಒಂದು. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ ಎಂದು ಸಿಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದ ಪರದಾಟ: ಇತ್ತ ಸಿಬಿಐ ದಾಳಿ ಬಗ್ಗೆ ಡಿಎಂಕೆ ಕೋಪಗೊಂಡಿದ್ದರೆ, ಅತ್ತ ನವದೆಹಲಿಯಲ್ಲಿ ಯುಪಿಎ ಸರ್ಕಾರ ಸ್ಪಷ್ಟನೆ ನೀಡುವಲ್ಲಿ ಪರದಾಟ ಅನುಭವಿಸಿತು. ಸಿಬಿಐ ದಾಳಿ ಬಗ್ಗೆ ಗೊತ್ತಾದ ಕೂಡಲೇ ಸ್ವತಃ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರೇ ಪ್ರಧಾನಮಂತ್ರಿಗಳ ಕಾರ್ಯಾಲಯ ಸಚಿವ ವಿ. ನಾರಾಯಣಸ್ವಾಮಿ ವಿರುದ್ಧ ಗರಂ ಆದರು. ಪ್ರಧಾನಿ ಸಿಂಗ್ ಕೂಡ ಸಿಬಿಐ ದಾಳಿಯನ್ನು ದುರದೃಷ್ಟಕರ ಎಂದು ಕರೆದರು. ಈ ಬಗ್ಗೆ ಸರ್ಕಾರಕ್ಕೆ ಗೊತ್ತೇ ಇರಲಿಲ್ಲ ಎಂದರು. ಅಲ್ಲದೆ ದಾಳಿ ನಡೆಸುವ ಸಮಯವಾಗಿರಲಿಲ್ಲ, ಆದರೂ ಆಗಿ ಹೋಯಿತು ಎಂದರು.
ಹಣಕಾಸು ಸಚಿವ ಚಿದು ಕೂಡ ನಾರಾಯಣಸ್ವಾಮಿ ಜತೆ ಮಾತನಾಡಿ ಬೆಳಗ್ಗೆ 8.30 ಹೊತ್ತಿಗೇ ಸಿಬಿಐ ಅಧಿಕಾರಿಗಳು ಸ್ಟಾಲಿನ್ ನಿವಾಸದಿಂದ ನಿರ್ಗಮಿಸುವಂತೆ ಮಾಡಿದರು. ದಾಳಿ ಬಗ್ಗೆ ವಿವರಣೆ ಪಡೆದರು. ಈ ಸಿಬಿಐ ದಾಳಿ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್
ಇದು ಸಿಪಿಎಂನ ತೀಕ್ಷ್ಣ ಪ್ರತಿಕ್ರಿಯೆ. ಕೇಂದ್ರ ಹೇಗೆ ಸಿಬಿಐ ಅನ್ನು ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಇದೇ ಉದಾಹರಣೆ ಎಂದು ಪಕ್ಷದ ನಾಯಕ ಸೀತಾರಾಂ ಯೆಚೂರಿ ಆರೋಪಿಸಿದರು. ಬೆಂಬಲ ವಾಪಸ್ ತೆಗೆದುಕೊಂಡ ತಕ್ಷಣವೇ ಸರ್ಕಾರ ಈ ಕೆಲಸ ಮಾಡುವ ಮೂಲಕ ಹೆದರಿಸುತ್ತಿದೆ ಎಂದು ಆಪಾದಿಸಿದರು. ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತು. ನಾವು ಹಿಂದಿನಿಂದಲೂ ಸರ್ಕಾರ ಸಿಬಿಐ ಅನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬ ಬಗ್ಗೆ ಹೇಳುತ್ತಲೇ ಇದ್ದೇವೆ. ಇದೇ ಅದಕ್ಕೆ ಸಾಕ್ಷಿ ಎಂದು ವೆಂಕಯ್ಯ ನಾಯ್ಡು ಹೇಳಿದರು. ಬುಧವಾರವಷ್ಟೇ ವಿದೇಶಿ ಕಾರುಗಳ ಸಂಬಂಧ ಪ್ರಕರಣ ದಾಖಲಾಗಿದೆ. ಗುರುವಾರವೇ ದಾಳಿ ನಡೆಸುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದರು. ಬಿಎಸ್ಪಿಯ ಮಾಯಾವತಿ ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅದು ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುವುದು ಮಾಮೂಲಿನ ಸಂಗತಿ ಎಂದು ಟೀಕಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.