ಲಂಕೆಗೆ ದಿಗ್ಬಂಧನ ಹಾಕಿ
ಶ್ರೀಲಂಕಾ ವಿರುದ್ಧದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆಕ್ರೋಶ ಇನ್ನೂ ನಿಂತಿಲ್ಲ. ಮಂಗಳವಾರವಷ್ಟೇ ಚೆನ್ನೈನಲ್ಲಿ ನಡೆಯಲಿರುವ ಪಂದ್ಯಗಳಲ್ಲಿ...
ಚೆನ್ನೈ/ವಾಷಿಂಗ್ಟನ್: ಶ್ರೀಲಂಕಾ ವಿರುದ್ಧದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆಕ್ರೋಶ ಇನ್ನೂ ನಿಂತಿಲ್ಲ. ಮಂಗಳವಾರವಷ್ಟೇ ಚೆನ್ನೈನಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಶ್ರೀಲಂಕಾ ಕ್ರಿಕೆಟಿಗರು ಭಾಗವಹಿಸದಂತೆ ಮಾಡಿದ್ದ ಅವರು ವಿಧಾನಸಭೆಯಲ್ಲಿ ಬುಧವಾರ ಆ ರಾಷ್ಟ್ರದ ವಿರುದ್ಧ ನಿರ್ಣಯ ಅಂಗೀಕರಿಸುವಂತೆ ಮಾಡಿದ್ದಾರೆ.
ದ್ವೀಪರಾಷ್ಟ್ರದ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಬೇಕು, ಅದನ್ನು ಮಿತ್ರ ರಾಷ್ಟ್ರ ಎಂದು ಪರಿಗಣಿಸಕೂಡದು ಹಾಗೂ ಪ್ರತ್ಯೇಕ ತಮಿಳುರಾಷ್ಟ್ರಕ್ಕಾಗಿ ವಿಶ್ವಸಂಸ್ಥೆಯಲ್ಲಿ ಜನಮತ ನಡೆಸುವಂತೆ ಗೊತ್ತುವಳಿ ಮಂಡಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ. ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಸಮ್ಮೇಳನದಲ್ಲಿ ಶ್ರೀಲಂಕಾ ವಿರುದ್ಧದ ನಿರ್ಣಯವನ್ನು ಅಂತಿಮಗೊಳಿಸುವ ಮೊದಲು ಭಾರತವನ್ನು ಅಮೆರಿಕ ಸಂಪರ್ಕಿಸಿದ್ದ ಮಾಹಿತಿ ಬಹಿರಂಗವಾಗಿದೆ.
ಮಿತ್ರ ರಾಷ್ಟ್ರ ಪಟ್ಟ ಬೇಡ: ಶ್ರೀಲಂಕಾ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ. ಜಯಲಿತಾ ಮಾತನಾಡಿ ಕೇಂದ್ರ ಶ್ರೀಲಂಕಾ ಸರ್ಕಾರ ಜನಾಂಗೀಯ ಹತ್ಯೆಯನ್ನು ನಿಲ್ಲಿಸುವ ವರೆಗೆ ಆರ್ಥಿಕ ದಿಗ್ಬಂಧನ ವಿಧಿಸಬೇಕು ಎಂದು ಒತ್ತಾಯಿಸಿದರು. ಪ್ರತ್ಯೇಕ ತಮಿಳು ರಾಷ್ಟ್ರ ಸ್ಥಾಪನೆ ಮಾಡುವಂತಾಗಲು ವಿಶ್ವಸಂಸ್ಥೆಯಲ್ಲಿ ಆ ರಾಷ್ಟ್ರದ ವಿರುದ್ಧ ನಿರ್ಣಯ ಮಂಡಿಸಬೇಕು, ಜತೆಗೆ ಮಿತ್ರ ರಾಷ್ಟ್ರ ಎಂದು ಕರೆಯುವುದನ್ನು ನಿಲ್ಲಿಸಬೇಕು ಎಂದು ಜಯಲಲಿತಾ ಒತ್ತಾಯಿಸಿದರು.
ಕರುಣಾ ವಿರುದ್ಧ ಕೆಂಡ: 'ಡಿಎಂಕೆ ಮುಖ್ಯಸ್ಥ ಕರುಣಾನಿಧಿ ತಮಿಳರ ಹಿತಕಾಯುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ಅವರು ಕೇಂದ್ರದಲ್ಲಿ ಮತ್ತು ತಮಿಳುನಾಡಿನಲ್ಲಿ ಅಧಿಕಾರದಲ್ಲಿದ್ದಾಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಯುಪಿಎ ಸರ್ಕಾರಕ್ಕೆ ಬೆಂಬಲ ಹಿಂಪಡೆಯುವ ಮೂಲಕ ತಮಿಳರಿಗಾಗಿ ದೊಡ್ಡ ತ್ಯಾಗ ಮಾಡಿದಂತೆ ಸೋಗು ಹಾಕುತ್ತಾರೆ' ಎಂದು ಜಯ ಟೀಕಿಸಿದರು.
ಡಿಎಂಕೆ ಸಂಸದ ಬಾಲು ರೇಲ್ವೆ ಇಲಾಖೆಗೆ ಸಂಬಂಧಿಸಿದ ಸಮಿತಿಯೊಂದರ ಅಧ್ಯಕ್ಷರಾಗಿ ಮುಂದುವರಿದಿರುವ ಬಗ್ಗೆ ಮತ್ತು ಎಂ.ಕೆ.ಅಳಗಿರಿ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಭೇಟಿ ಮಾಡಿದ ಬಗ್ಗೆ ಕರುಣಾನಿಧಿ ಯಾಕೆ ಮೌನವಾಗಿದ್ದಾರೆ ಎಂದು ಜಯಲಲಿತಾ ಪ್ರಶ್ನಿಸಿದರು.
ಸಿಕ್ಕಿತು ಅನುಮತಿ
ಇದೇ ವೇಳೆ, ಐಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಶ್ರೀಲಂಕಾ ಕ್ರಿಕೆಟಿಗರಿಗೆ ಅಲ್ಲಿನ ಸರ್ಕಾರ ಬುಧವಾರ ಅಧಿಕೃತ ಅನುಮತಿ ನೀಡಿದೆ. ಆದರೆ,ಚೆನ್ನೈನಲ್ಲಿ ನಡೆಯುವ ಪಂದ್ಯಗಳಲ್ಲಿ ಭಾಗವಹಿಸದಂತೆ ಸೂಚನೆ ನೀಡಿದೆ.
ಭಾರತದ ಜತೆಗೆ ಚರ್ಚೆ ನಡೆದಿತ್ತು
ವಿಶ್ವಸಂಸ್ಥೆಯಲ್ಲಿ ಶ್ರೀಲಂಕಾ ವಿರುದ್ಧದ ನಿರ್ಣಯ ಅಂಗೀಕಾರಕ್ಕೆ ಮೊದಲು ಅಮೆರಿಕ ವು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿತ್ತು. ಈ ಅಂಶವನ್ನು ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ದಕ್ಷಿಣ ಮತ್ತು ಕೇಂದ್ರ ಏಷ್ಯಾ ವ್ಯವಹಾರ ನೋಡಿಕೊಳ್ಳುತ್ತಿರುವ ಸಹಾಯಕ ಸಚಿವ ರಾಬರ್ಟ್ ಬ್ಲೇಕ್ ತಿಳಿಸಿದ್ದಾರೆ. ಬಿಬಿಸಿ ಸಿಂಹಳೀಯ ವಿಭಾಗಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾಹಿತಿ ನೀಡಿದ್ದರು. ಮಾ.21ರಂದು ನೀಡಿದ್ದ ಸಂದರ್ಶನದ ಆಯ್ದ ಭಾಗಗಳನ್ನು ವಿದೇಶಾಂಗ ಇಲಾಖೆ ಮಂಗಳವಾರ ಬಿಡುಗಡೆ ಮಾಡಿತ್ತು.
'ಅಮೆರಿಕದ ಜತೆ ಭಾರತ ನೀಡಿರುವ ಸಹಕಾರದಿಂದ ಸಂತೋಷವಾಗಿದೆ' ಎಂದಿದ್ದಾರೆ. ಶ್ರೀಲಂಕಾ ವಿರುದ್ಧದ ನಿರ್ಣಯದ ಗಂಭೀರತೆಯನ್ನು ಭಾರತದ ಪ್ರಭಾವದಿಂದಾಗಿ ತಗ್ಗಿಸಲಾಗಿತ್ತು ಎನ್ನುವುದನ್ನು ಬ್ಲೇಕ್ ತಿರಸ್ಕರಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.