ನವದೆಹಲಿ: ಟಿಕೆಟ್ ಹಂಚಿಕೆಗೆ ಕಟ್ಟುನಿಟ್ಟಿನ ಮಾನದಂಡಗಳನ್ನು ರೂಪಿಸಿಕೊಂಡಿದ್ದರೂ ಕಾಂಗ್ರೆಸ್ ಹೈಕಮಾಂಡ್‌ಗೆ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಲು ಸಾಧ್ಯವಾಗಿಲ್ಲ.
ಅದಕ್ಕೆ ಮುಖ್ಯ ಕಾರಣ ಪರಸ್ಪರ ಮೇಲುಗೈ ಸಾಧಿಸಬೇಕೆಂಬ ರಾಜ್ಯ ನಾಯಕರ ಪ್ರಯತ್ನ. ಒಂದು ಕಡೆ ತಮ್ಮ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ಬೇಕೆಂದು ಮುಸ್ಲಿಂ ನಾಯಕರು ಬೇಡಿಕೆ ಇಟ್ಟಿದ್ದರೆ, ಒಕ್ಕಲಿಗರನ್ನು ಕಡೆಗಣಿಸಬೇಡಿ ಎಂಬ ಎಚ್ಚರಿಕೆಯನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನೀಡಿದ್ದಾರೆ.
ಪರಿಶೀಲನಾ ಸಮಿತಿ ಸದಸ್ಯರಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವೆ ಎದ್ದಿರುವ ಅಸಮಾಧಾನ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಟಿಕೆಟ್ ದಕ್ಕಿಸಿಕೊಳ್ಳುವ ಉಮೇದಿನಿಂದಾಗಿ ಬಿಕ್ಕಟ್ಟು ಮತ್ತಷ್ಟು ಉದ್ದೀಪಿಸಿದೆ. ಹೀಗಾಗಿ 75ಕ್ಕೂ ಹೆಚ್ಚು ಕ್ಷೇತ್ರಗಳ ಟಿಕೆಟ್ ಹಂಚಿಕೆ ಹೊಣೆಯನ್ನು ಪರೋಕ್ಷವಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಅವರ ಹೆಗಲಿಗೇರಿದೆ.
ಸೋನಿಯಾ ಅಧ್ಯಕ್ಷತೆಯಲ್ಲಿ ಸಭೆ: ಗುರುವಾರ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಸಮಿತಿ ಸಭೆ ಕೂಡಾ ಅಭ್ಯರ್ಥಿಗಳ ಪಟ್ಟಿ ಅಖೈರುಗೊಳಿಸಲಾಗಿಲ್ಲ.
ಮಾ.30ರಂದು ಮತ್ತೆ ಸಭೆ ಸೇರುವ ಸಮಿತಿಯು ಅಂದು ಪಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ. ಈ ಎರಡು ದಿನಗಳಲ್ಲಿ ಡಾ. ಪರಮೇಶ್ವರ ಮತ್ತು ಸಿದ್ದರಾಮಯ್ಯ ಅವರು ನಡುವೆ ಸೌಹಾರ್ದ ತರುವುದು ಮತ್ತು ಉಭಯ ನಾಯಕರೂ ಬೇಡಿಕೆ ಇಟ್ಟಿರುವ ಕ್ಷೇತ್ರಗಳಿಗೆ ಸರ್ವ ಸಮ್ಮತ ಅಭ್ಯರ್ಥಿ ಆಯ್ಕೆ ಮಾಡುವ ಕಸರತ್ತನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಾಡಲಿದ್ದಾರೆ. ಗುರುವಾರ ನಡೆದ ಅಭ್ಯರ್ಥಿಗಳ ಪಟ್ಟಿ ಕುರಿತು ಚರ್ಚೆ ನಡೆದಿಲ್ಲ. ಆದರೆ, ಅಭ್ಯರ್ಥಿಗಳ ಆಯ್ಕೆ ಮಾನದಂಡ, ಚುನಾವಣಾ ರಣನೀತಿ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ತಿಳಿಸಿದ್ದಾರೆ. ಮಾ.30ರಂದು ನಡೆಯಲಿರುವ ಕೇಂದ್ರ ಚುನಾವಣಾ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ. ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಲ್ಗೊಳ್ಳುತ್ತಾರೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಸಿದ್ದರಾಮಯ್ಯ- ಪರಮೇಶ್ವರ್ ಜಟಾಪಟಿ: ತಮ್ಮ ಬೆಂಬಲಿಗರಿಗೆ ಟಿಕೆಟ್ ದಕ್ಕಿಸಿಕೊಳ್ಳಲು ಪರಿಶೀಲನಾ ಸಮಿತಿ ಸಭೆಯಲ್ಲಿ ವಾಗ್ವಾದ ನಡೆಸಿದ್ದ ಸಿದ್ದರಾಮಯ್ಯ ಮತ್ತು ಡಾ. ಜಿ.ಪರಮೇಶ್ವರ ಚುನಾವಣಾ ಸಮಿತಿ ಸಭೆಯಲ್ಲಿ ತಮ್ಮ ಪಟ್ಟು ಸಡಿಲಿಸಲಿಲ್ಲ ಎನ್ನಲಾಗಿದೆ.
ಹೀಗಾಗಿ ಮತ್ತೊಂದು ಸುತ್ತಿನ ಮಾತುಕತೆ ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಒತ್ತಡ ಹೇರಿ ಅಥವಾ ಆದೇಶ ನೀಡಿ ಒಪ್ಪಿಸಿದರೆ, ಚುನಾವಣಾ ವೇಳೆಯಲ್ಲಿ ಪಕ್ಷಕ್ಕೆ ಹಾನಿ ಆಗಬಹುದಾದ ಸಾಧ್ಯತೆ ಇರುವುದರಿಂದ ಉಭಯ ನಾಯಕರೊಂದಿಗೆ ಸೌಹಾರ್ದತೆ ಮೂಡಿಸುವ ಸಲುವಾಗಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ನಮ್ಮಲ್ಲಿ ಜಗಳವಾಗಿಲ್ಲ, ಭಿನ್ನಾಭಿಪ್ರಾಯ ಇಲ್ಲ: ಸಿದ್ದರಾಮಯ್ಯ, ಪರಮೇಶ್ವರ: ತಾವು ಪರಸ್ಪರ ಜಗಳವಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳೂ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಎಐಸಿಸಿ ಚುನಾವಣಾ ಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಭಯ ನಾಯಕರು, 'ಈ ಸಂಬಂಧ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಆಧಾರ ರಹಿತ. ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಮತ್ತು ಬೆಂಗಳೂರಲ್ಲಿ ಕುಳಿತ ಕೆಲವು ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವುದು ವಿಷಾದನೀಯ ಎಂದು ಡಾ.ಪರಮೇಶ್ವರ ಹೇಳಿದರು. ನಾವಿಬ್ಬರು ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಮತ್ತು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದೇವೆ. ನಮ್ಮ ನಡುವೆ ಜಗಳ ಯಾಕೆ ಎಂದು ಪ್ರಶ್ನಿಸಿದರು.
ರೆಹಮಾನ್ ಖಾನ್ ಮಗ, ಜಾಫರ್ ಮೊಮ್ಮಗನಿಗೆ ಟಿಕೆಟ್ ನಿರಾಕರಣೆ: ತಮ್ಮ ಮೊಮ್ಮಗನಿಗೆ ಟಿಕೆಟ್ ಕೊಡಿ ಎಂಬ ಜಾಫರ್ ಷರೀಫ್ ಬೇಡಿಕೆ ಹಾಗೂ ತಮ್ಮ ಮಗನಿಗೆ ಟಿಕೆಟ್ ನೀಡಬೇಕೆಂಬ ಕೇಂದ್ರ ಸಚಿವ ರೆಹಮಾನ್ ಖಾನ್ ಅವರ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಹಿರಿಯ ನಾಯಕರು ರೆಹಮಾನ್ ಖಾನ್ ಅವರ ನಿವಾಸದಲ್ಲಿ ಸಭೆ ಸೇರಿ ತಮ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಶೇ.10ರಷ್ಟಾದರೂ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ. ಶೇ.10ರಷ್ಟು ಎಂದರೆ 25 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕೆಂಬುದು ಈ ಮುಖಂಡರ ಬೇಡಿಕೆ. ಕಳೆದ ಚುನಾವಣೆಯಲ್ಲಿ 17 ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗಿತ್ತು. ದಾವಣಗೆರೆಯಲ್ಲಿ ಸೈಪುಲ್ಲಾ ಮತ್ತು ಶಿಗ್ಗಾಂವ್‌ನಲ್ಲಿ ಅಜ್ಜಂಪೀರ್ ಖಾದ್ರಿಗೆ ಟಿಕೆಟ್ ಪಕ್ಕಾ ಆಗಿಲ್ಲ. ಮತ್ತು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್‌ಗೆ ಟಿಕೆಟ್ ನೀಡಿಲ್ಲ ಎಂಬುದು ಸೇರಿದಂತೆ ಹಲವು ದೂರು ದುಮ್ಮಾನಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
ಡಿಕೆಶಿ ಅಸಮಾಧಾನ: ಒಕ್ಕಲಿಗರಿಗೆ ಹೆಚ್ಚಿನ ಕ್ಷೇತ್ರಗಳಲ್ಲಿ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಅಸಮಾಧಾನಗೊಂಡಿದ್ದು, ಕೆಪಿಸಿಸಿ ಅಧ್ಯಕ್ಷರೊಂದಿಗೆ ಆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮಾ.30ರಂದು ಚುನಾವಣಾ ಸಮಿತಿ ಸಭೆ ನಡೆಯುವ ಮುನ್ನ ಅಸಮಾಧಾನಗೊಂಡಿರುವ ಎಲ್ಲಾ ನಾಯಕರೊಂದಿಗೆ ಅನೌಪಚಾರಿಕ ಮಾತಕತೆ ನಡೆಸಿ ಒಮ್ಮತದಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮತ್ತು ಟಿಕೆಟ್ ಹಂಚಿಕೆ ಹಂತದಲ್ಲೇ ಅಸಮಾಧಾನ ನಿವಾರಿಸಿ ಒಗ್ಗಟ್ಟಿನಿಂದ ಚುನಾವಣ ಕಣಕ್ಕಿಳಿಯುವ ತಂತ್ರ ಹೈಕಮಾಂಡ್‌ನದ್ದಾಗಿದೆ.
ಐವರು ಹಾಲಿಗಳಿಗೆ ಗೇಟ್‌ಪಾಸ್
ಕಾಂಗ್ರೆಸ್‌ನ ಐವರು ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತಿಲ್ಲ. ಚಿಂತಾಮಣಿಯ ಡಾ. ಸುಧಾಕರ್ ಟಿಕೆಟ್‌ಗಾಗಿ ಅರ್ಜಿ ಹಾಕಿಯೇ ಇಲ್ಲ. ಸುಧಾಕರ್ ಪಕ್ಷೇತರರಾಗಿ ಕಣಕ್ಕೆ ಇಳಿಯಲಿದ್ದಾರೆ. ಎನ್‌ಸಿಪಿ ಸೇರುತ್ತೇನೆ ಎನ್ನುತ್ತಿದ್ದ ಹಿರೇಕೆರೂರು ಶಾಸಕ, ನಟ ಬಿ.ಸಿ. ಪಾಟೀಲ್‌ಗೂ ಟಿಕೆಟ್ ಇಲ್ಲ. ಪಾಟೀಲ್‌ಗೆ ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕಾಗಿ ಟಿಕೆಟ್ ನೀಡುತ್ತಿಲ್ಲ. ಭದ್ರಾವತಿಯ ಸಂಗಮೇಶ್ವರ ಅವರಿಗೂ ಟಿಕೆಟ್ ನೀಡುತ್ತಿಲ್ಲ. ಅಲ್ಲಿ ಸಿದ್ದರಾಮಯ್ಯ ಅವರ ಆಪ್ತ ಸಿ.ಎಂ. ಇಬ್ರಾಹಿಂ ಕಣಕ್ಕೆ ಇಳಿಯಲಿದ್ದಾರೆ. ದೇವನೂರಿನ ವೆಂಕಟಸ್ವಾಮಿ ಮತ್ತು ಕುಣಿಗಲ್‌ನ ಬಿ.ಬಿ. ರಾಮಸ್ವಾಮಿಗೌಡ ಅವರಿಗೆ ಸ್ಥಳೀಯ ಸಂಸ್ಥೆಗಳಲ್ಲಿನ ಕಳಪೆ ಸಾಧನೆಗಾಗಿ ಟಿಕೆಟ್ ನಿರಾಕರಿಸಲಾಗಿದೆ.
ಪಕ್ಷೇತರರಿಗೆ ಟಿಕೆಟ್
ಪಕ್ಷೇತರ ಶಾಸಕರಿಗೆ ಟಿಕೆಟ್ ನೀಡಲು ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ. ಚುನಾವಣಾ ಸಮಿತಿ ಸಭೆಯಲ್ಲಿ ಮಳವಳ್ಳಿಯ ನರೇಂದ್ರಸ್ವಾಮಿ, ಪಾವಗಡದ ವೆಂಕಟರಮಣಪ್ಪ, ಹಿರಿಯೂರಿನ ಸುಧಾಕರ್ ಹಾಗೂ ಕನಕಗಿರಿಯ ಶಿವರಾಜ್ ತಂಗಡಗಿ ಅವರಿಗೆ ಟಿಕೆಟ್ ನೀಡಲು ಒಪ್ಪಿಗೆ ನೀಡಲಾಗಿದೆ. ಜೆಡಿಎಸ್ ತೊರೆದಿರುವ ಶ್ರವಣಬೆಳಗೊಳ ಪ್ರತಿನಿಧಿಸುತ್ತಿದ್ದ ಸಿ.ಎಸ್. ಪುಟ್ಟೇಗೌಡರಿಗೆ ಅದೇ ಕ್ಷೇತ್ರದಿಂದ ಟಿಕೆಟ್ ನೀಡಲು ಒಪ್ಪಿಗೆ ನೀಡಲಾಗಿದೆ.
ಸಿದ್ದರಾಮಯ್ಯ v/s ಪರಮೇಶ್ವರ್
ಬೆಂಬಲಿಗರಿಗೆ ಟಿಕೆಟ್ ದಕ್ಕಿಸಿಕೊಳ್ಳುವ ವಿಚಾರದಲ್ಲಿ ಪರಿಶೀಲನಾ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ ನಡುವೆ ನಡೆದ ಜಟಾಪಟಿಯಿಂದಾಗಿ ಟಿಕೆಟ್ ಹಂಚಿಕೆ ಅಂತಿಮವಾಗಿಲ್ಲ ಎನ್ನಲಾಗುತ್ತಿದೆ. ಆದರೆ ಇಬ್ಬರೂ ನಾಯಕರು ತಮ್ಮ ನಡುವೆ ಯಾವುದೇ ಅಸಮಾಧಾನ ಇಲ್ಲ. ಎಲ್ಲವೂ ವಿರೋಧ ಪಕ್ಷಗಳ ಮತ್ತು ಕೆಲ ನಾಯಕರ ಕುತಂತ್ರ ಎಂದಿದ್ದಾರೆ.