ಮಡಿಕೇರಿ: ಬಿಜೆಪಿಯಲ್ಲಿ ಈಗ ಜಗದೀಶ ಶೆಟ್ಟರ್ ಕ್ಯಾಪ್ಟನ್‌ಶಿಪ್‌ನಲ್ಲಿ ಅನಂತಕುಮಾರ್, ಈಶ್ವರಪ್ಪ, ಸದಾನಂದಗೌಡ, ಅಶೋಕ ಎಂಬ ಐವರು ಪಾಂಡವರಿದ್ದಾರೆ. ಕಾರ್ಯಕರ್ತರೇ ಈ ಪಂಚಪಾಂಡವರಿಗೆ ಶ್ರೀಕೃಷ್ಣನಿದ್ದಂತೆ. ಇನ್ನು ಮುಂದೆ ನಾವು ಯಾವುದೇ ಕಾರಣಕ್ಕೂ ಜಗಳವಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು. ಮಡಿಕೇರಿಯಲ್ಲಿ ಶುಕ್ರವಾರ 'ವಿಜಯ ಸಂಕಲ್ಪ ಯಾತ್ರೆ' ಉದ್ಘಾಟಿಸಿ ಮಾತನಾಡಿ, ಬಿಜೆಪಿಯಿಂದ ದೇಶದಲ್ಲಿ ಪ್ರಾರಂಭವಾದ ಅಭಿವೃದ್ಧಿ ಆಧಾರದಲ್ಲಿ ಮತ ಕೇಳುವ ಪರಂಪರೆಯನ್ನು ಈ ಚುನಾವಣೆಯಲ್ಲಿಯೂ ಮುಂದುವರಿಸಿಕೊಂಡು ಹೋಗಲಾಗುವುದು. ಕಾರ್ಯಕರ್ತರು ಮತದಾರರಿಗೆ ಸರ್ಕಾರದ ಅಭಿವೃದ್ಧಿ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಬಿಜೆಪಿಗೆ ವ್ಯಕ್ತಿ ಮುಖ್ಯವಲ್ಲ: ಉಪಮುಖ್ಯಮಂತ್ರಿ ಆರ್. ಅಶೋಕ ಮಾತನಾಡಿ, ಅಧಿಕಾರ ಹಿಡಿಯಲು ಸಾಧ್ಯವೇ ಇಲ್ಲದ ಅಶಕ್ತರು ಅನಗತ್ಯವಾಗಿ ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಭಯ ಪ್ರತಿಪಕ್ಷಗಳನ್ನು ಕಾಡುತ್ತಿದೆ. ಬಿಜೆಪಿಗೆ ವ್ಯಕ್ತಿ ಮುಖ್ಯವೇ ಅಲ್ಲ, ಕಾರ್ಯಕರ್ತರನ್ನು ಆಧರಿಸಿದ ಪಕ್ಷ. ಕಾಂಗ್ರೆಸ್‌ನಲ್ಲಿ ಕಂಡುಬಂದಿರುವ ಒಳಜಗಳಗಳನ್ನು ಬಳಸಿಕೊಳ್ಳಲೂ ಬಿಜೆಪಿ ಮುಂದಾಗಿದೆ ಎಂದರು.