42 ಪಾವತಿ ಸುದ್ದಿ ಪ್ರಕರಣ ಪತ್ತೆ
ನವದೆಹಲಿ: ಕರ್ನಾಟಕದ ವಿಧಾನಸಭಾ ಚುನಾವಣೆ ವೇಳೆ 42 ಪಾವತಿ ಸುದ್ದಿ(ಪೇಯ್ಡ್ ನ್ಯೂಸ್) ಪ್ರಕರಣಗಳು ಬೆಳಕಿಗೆ ಬಂದಿವೆ. ಇದಲ್ಲದೆ, ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 21 ಕೋಟಿಗೂ ಹೆಚ್ಚು ಹಣ ಹಾಗೂ 7.79 ಕೋಟಿ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಪಾವತಿ ಸುದ್ದಿಗೆ ಸಂಬಂಧಿಸಿ ಚುನಾವಣಾ ಆಯೋಗ ಒಟ್ಟು 76 ಶಂಕಿತ ಪ್ರಕರಣಗಳ ಕುರಿತು ಪರಿಶೀಲಿಸಿದ್ದು, 61 ನೋಟಿಸ್‌ಗಳನ್ನು ನೀಡಲಾಗಿದೆ. ಇದರಲ್ಲಿ 42 ಪಾವತಿ ಸುದ್ದಿ ಪ್ರಕರಣಗಳು ಎನ್ನುವ ತೀರ್ಮಾನಕ್ಕೆ ಆಯೋಗ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾವತಿ ಸುದ್ದಿಗೆ ಸಂಬಂಧಿಸಿದ ಅತಿ ಹೆಚ್ಚು ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆ(11 ಪ್ರಕರಣಗಳು)ಯಲ್ಲಿ ವರದಿಯಾಗಿದೆ.