ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಗ್ರಹಿಸುವ ಹಾದಿಯಲ್ಲಿರುವುದರಿಂದ ಹೈಕಮಾಂಡ್ ಮುಖ್ಯಮಂತ್ರಿ ಗಾದಿಗೆ ಯಾರನ್ನು ಏರಿಸಬೇಕೆಂಬ ಬಗ್ಗೆ ಅನೌಪಚಾರಿಕವಾಗಿ ಸಮಾಲೋಚನೆ ಆರಂಭಿಸಿದೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಗಾದಿ ಏರುವ ವ್ಯಕ್ತಿಗೆ ಹೈಕಮಾಂಡ್ ಪ್ರಕಾರ ಇರಬೇಕಾದ ಒಂದೇ ಅರ್ಹತೆ ಎಂದರೆ- 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಯಾರು ಹೆಚ್ಚು ಸ್ಥಾನಗಳನ್ನು ಗೆದ್ದುಕೊಡುವುದು. ಮೂಲಗಳ ಪ್ರಕಾರ, ಹೈಕಮಾಂಡ್ ಮುಂದೆ ಮುಖ್ಯಮಂತ್ರಿ ಹುದ್ದೆಗೆ ಯಾರ ಹೆಸರೂ ಇಲ್ಲ.
ಯಾವ ನಾಯಕ ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಸ್ಥಾನಗಳನ್ನು ಗೆದ್ದುಕೊಟ್ಟಿದ್ದಾರೆ ಮತ್ತು ರಾಜ್ಯದಲ್ಲಿ ಒಟ್ಟಾರೆ ಅವರ ವರ್ಚಸ್ಸು ಎಷ್ಟು ಎಂಬುದನ್ನು ಅಳೆದು ತೂಗಿ ನಿರ್ಧರಿಸಲಾಗುತ್ತದೆ. ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದುಕೊಡುವ ಅರ್ಹತೆ ಇರುವ ವ್ಯಕ್ತಿಯನ್ನು ಕರ್ನಾಟಕದಿಂದಲೇ ಸಿಎಂ ಗಾದಿಗೆ ಏರಿಸಬಹುದು.
ಇಲ್ಲವೇ ದೆಹಲಿಯಿಂದಲೇ ಹೇರಲೂಬಹುದು! ಹೈಕಮಾಂಡ್‌ನೊಂದಿಗೆ ಇರುವ ಸಂಪರ್ಕ ಸಂಬಂಧಗಳು ಏನೇ ಇರಲಿ. ಚುನಾವಣಾ ಕಣದಲ್ಲಿ ಎಷ್ಟು ಸ್ಥಾನ ಗೆದ್ದಿರಿ? ಮುಂದೆ ಎಷ್ಟು ಸ್ಥಾನ ಗೆದ್ದುಕೊಡಬಲ್ಲಿರಿ? ಎಂಬುದಷ್ಟೆ ಮಾನದಂಡ. 'ಜೋ ಜೀತಾ ವಹೀ ಸಿಕಂದರ್..' ಅನ್ನೋ ನೀತಿಯನ್ನು ಈ ಬಾರಿ ಸ್ಪಷ್ಟವಾಗಿ ಪಾಲಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.