ಸಮೀಕ್ಷೆಗಳ ಸಂತೋಷ ರಾಹುಲ್‌ಗಿಲ್ಲ
ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್‌ಗೆ ಮತದಾರ ಪ್ರಭು ಅನುಮತಿ ನೀಡಿರುವುದನ್ನು..
- 140 ಸ್ಥಾನಗಳನ್ನು ನಿರೀಕ್ಷಿಸಿದ್ದ ರಾಹುಲ್
- ಮೂರಂಕಿ ಮುಟ್ಟದಿದ್ದರೆ ಇಬ್ಬರು ನಾಯಕರ ತಲೆದಂಡ ಖಾತ್ರಿ
ನವದೆಹಲಿ: ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್‌ಗೆ ಮತದಾರ ಪ್ರಭು ಅನುಮತಿ ನೀಡಿರುವುದನ್ನು ಮತದಾನೋತ್ತರ ಸಮೀಕ್ಷೆಗಳು ದೃಢಪಡಿಸಿರುವುದರಿಂದ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಖುಷಿ ಆಗಿರಬಹುದು. ಆದರೆ, ಚುನಾವಣೆಯ ಚುಕ್ಕಾಣಿ ಹಿಡಿದಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರಿಗೆ ಖುಷಿಯಾಗಿಲ್ಲ!
ಭ್ರಷ್ಟಾಚಾರ, ಹಗರಣಗಳಿಂದ ಕುಗ್ಗಿದ್ದ ಬಿಜೆಪಿ ಮೂರು ಭಾಗವಾಗಿ ಹಂಚಿಹೋಗಿತ್ತು. ಅಂಥ ಬಿಜೆಪಿ ಸೋಲಿಸಿ ಸಾಮಾನ್ಯ ಬಹುಮತ ಪಡೆಯುವುದು ಕಾಂಗ್ರೆಸ್ ಪಾಲಿಗೆ ಗೆಲುವೇ ಅಲ್ಲ. ಚುನಾವಣೆ ಮೇಲ್ವಿಚಾರಣೆ ಹೊತ್ತುಕೊಂಡಿದ್ದ ರಾಹುಲ್ ನಿರೀಕ್ಷೆ ಇದ್ದದ್ದು 140-150 ಸ್ಥಾನಗಳು. ರಾಹುಲ್ ಆಪ್ತರ ಮಾತನ್ನೇ ನಂಬಬಹುದಾದರೆ 145 ಸ್ಥಾನಗಳು ದಕ್ಕುತ್ತವೆಂಬ ಭಾರಿ ವಿಶ್ವಾಸ ರಾಹುಲ್‌ಗೆ ಇತ್ತು. ಆದರೆ, ಭಾನುವಾರ ಮತದಾನ ಮುಗಿದ ನಂತರ ಪ್ರಕಟವಾದ ಅರ್ಧ ಡಜನ್ ಮತದಾನೋತ್ತರ ಸಮೀಕ್ಷೆಗಳ ಪೈಕಿ ಯಾವೊಂದು ಸಮೀಕ್ಷೆಯಲ್ಲೂ ಗರಿಷ್ಠ ಮಟ್ಟದಲ್ಲಿ 130ಕ್ಕೂ ಹೆಚ್ಚಿನ ಸ್ಥಾನ ದಕ್ಕುವ ಮುನ್ಸೂಚನೆ ನೀಡಿಲ್ಲ!
ಎಲ್ಲಾ ಸಮೀಕ್ಷೆಗಳನ್ನು ಸಮೀಕರಿಸಿದರೆ ಸರಾಸರಿ ಕಾಂಗ್ರೆಸ್ ದಕ್ಕುವ ಸ್ಥಾನಗಳ ಸಂಖ್ಯೆ 115 ಅಂದರೆ, ಅಧಿಕಾರ ಗದ್ದುಗೆಗೇರಲು ಬೇಕಾದ ಮ್ಯಾಜಿಕ್ ಸಂಖ್ಯೆ 113ಕ್ಕಿಂತ ಎರಡು ಕೇವಲ ಎರಡು ಸ್ಥಾನ ಹೆಚ್ಚು.
ಬುಧವಾರ ಪ್ರಕಟವಾಗುವ ಫಲಿತಾಂಶ ಅರ್ಧ ಡಜನ್ ಸಮೀಕ್ಷೆಗಳನ್ನೂ ತಲೆಕೆಳಗು ಮಾಡುವುದಿಲ್ಲ ಎಂದಿಟ್ಟುಕೊಂಡರೂ ಕಾಂಗ್ರೆಸ್ ಹೈಕಮಾಂಡ್ ನಿರೀಕ್ಷಿಸಿದ್ದಕ್ಕಿಂತ ಕಡಮೆ ಸ್ಥಾನಗಳು ದಕ್ಕುತ್ತಿವೆ.
ಒಂದು ವೇಳೆ ಸಮೀಕ್ಷೆ ಸುಳ್ಳಾಗಿ ಕಾಂಗ್ರೆಸ್ ಕೇವಲ ಎರಡಂಕಿಯಷ್ಟು (ಅರ್ಥಾತ್ 100ಕ್ಕಿಂತ ಕಮ್ಮಿ) ಸ್ಥಾನಗಳು ದಕ್ಕಿದರೆ ಈಗಾಗಲೇ ಮುಖ್ಯಮಂತ್ರಿಯಾಗುವ ಆಕಾಂಕ್ಷೆಯನ್ನು ಬಹಿರಂಗ ಪಡಿಸಿಕೊಂಡಿರುವ ಇಬ್ಬರು ದಂಡ ನಾಯಕರ ತಲೆದಂಡ ಆಗುವುದು ಖಚಿತ ಎನ್ನತ್ತವೆ ಕಾಂಗ್ರೆಸ್ ಮೂಲಗಳು. ಭಾನುವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಕರ್ನಾಟಕದ ಚುನಾವಣೆ ಕುರಿತಂತೆ ಚರ್ಚಿಸಲಾಗಿದೆ. ಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲೇಬೇಕೆಂಬ ನಿರ್ಧಾರಕ್ಕೂ ಬರಲಾಗಿದೆ. ಕೋರ್ ಕಮಿಟಿ ಸಭೆಯ ನಂತರ ರಾಹುಲ್ ಗಾಂಧಿ ಅನೌಪಚಾರಿಕ ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಬಹುತೇಕ ಸಮೀಕ್ಷೆಗಳು ಸರಳ ಬಹುಮತ ದಕ್ಕುವ ಭವಿಷ್ಯ ನುಡಿದಿರುವ ಬಗ್ಗೆ ಮತ್ತು ಕಾಂಗ್ರೆಸ್ ನಿರೀಕ್ಷಿಸುತ್ತಿರುವ ಸ್ಥಾನಗಳ ಬಗ್ಗೆಯೂ ಚರ್ಚಿಸಲಾಗಿದೆ.
ಕಾಂಗ್ರೆಸ್‌ಗೆ ಖುಷಿ ಯಾಕಿಲ್ಲ?
ಬಹುತೇಕ ಸಮೀಕ್ಷೆಗಳು ಸರಳ ಬಹುಮತದ ಭವಿಷ್ಯ ನುಡಿದಿರುವುದರಿಂದ ಗರಿಷ್ಠ ಮಟ್ಟದ ಸಂಖ್ಯೆಯನ್ನೇ ಪರಿಗಣಿಸಿದರೂ ಕಾಂಗ್ರೆಸ್‌ಗೆ ದಕ್ಕುವ ಸ್ಥಾನಗಳ ಸಂಖ್ಯೆ 120. ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಮುಳುಗಿದ್ದ ಬಿಜೆಪಿ ಸರ್ಕಾರವನ್ನು ಖೆಡ್ಡಾಕ್ಕೆ ಕೆಡವಲು ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್‌ಗಳೇ ಸಾಕು. ಕಾಂಗ್ರೆಸ್ ತನ್ನ ಶಾಸಕರ ಸಂಖ್ಯೆಯನ್ನು ದುಪ್ಪಟ್ಟು ಮಾಡಿಕೊಳ್ಳಬೇಕು ಎಂಬ ಕಷ್ಟಸಾಧ್ಯದ ಮಹಾತ್ವಾಂಕ್ಷೆ ರಾಹುಲ್ ಗಾಂಧಿ ಅವರಿಗೆ ಇತ್ತಂತೆ. ಹೀಗಾಗಿ ಸರಳ ಬಹುಮತ ಪಡೆಯುವ ನಿರೀಕ್ಷೆಯಿಂದ ಅವರಿಗೆ ಖುಷಿಯಾಗಿಲ್ಲ. ಟಿಕೆಟ್ ಹಂಚಿಕೆಯಲ್ಲಾದ ಗೊಂದಲಗಳು, ಮುಖ್ಯಮಂತ್ರಿ ಆಕಾಂಕ್ಷಿಗಳಿಂದ ಪರಸ್ಪರ ಕಾಳೆಲೆತ, ತಮ್ಮ ಅಭಿವೃದ್ಧಿ ಬಂಡವಾಳದ ಡೆವಿಡೆಂಡ್ ಅನ್ನು ಯಾರೂ ಬಳಸಿಕೊಳ್ಳುತ್ತಿಲ್ಲವೆಂಬ ಅತ್ಯಂತ ಹಿರಿಯ ನಾಯಕರ ಅಸಮಾಧಾನ, ಇಂಥವರಿಗೆ ಟಿಕೆಟ್ ಕೊಡಬಾರದೆಂದು 'ರೆಬೆಲ್' ಆದ ಪ್ರಕರಣ ಸೇರಿದಂತೆ ಹಲವು ಬೆಳವಣಿಗೆಗಳು ಹೈಕಮಾಂಡ್‌ನ ನಿರೀಕ್ಷೆಯನ್ನು ಹುಸಿಗೊಳಿಸಿರಬಹುದು. ಅವುಗಳ ಬಗ್ಗೆ ಬುಧವಾರ ಫಲಿತಾಂಶ ಪ್ರಕಟವಾದ ನಂತರ ಹೈಕಮಾಂಡ್ ಪರಾಮರ್ಶೆ ಮಾಡಲಿದೆ.
- ರೇಣುಕಾಪ್ರಸಾದ್ ಹಾಡ್ಯ