ಅತಂತ್ರನಾ ಸ್ವತಂತ್ರನಾ
ಬಹುಮತದ ನಿರೀಕ್ಷೆಯಲ್ಲಿರುವ ಕಾಂಗ್ರೆಸ್, ಪ್ರತಿಷ್ಠೆ ಉಳಿಸಿಕೊಳ್ಳುವ ಆಸೆಯಲ್ಲಿರುವ ಬಿಜೆಪಿ, ಕಿಂಗ್ ಮೇಕರ್ ಆಗಬಯಸುತ್ತಿರುವ ಜೆಡಿಎಸ್ ಮತ್ತು ಕೆಜೆಪಿ. ಸೋಲು- ಗೆಲುವಿನ...
ಕನ್ನಡಪ್ರಭವಾರ್ತೆ ಬೆಂಗಳೂರು ಮೇ 7
ಬಹುಮತದ ನಿರೀಕ್ಷೆಯಲ್ಲಿರುವ ಕಾಂಗ್ರೆಸ್, ಪ್ರತಿಷ್ಠೆ ಉಳಿಸಿಕೊಳ್ಳುವ ಆಸೆಯಲ್ಲಿರುವ ಬಿಜೆಪಿ, ಕಿಂಗ್ ಮೇಕರ್ ಆಗಬಯಸುತ್ತಿರುವ ಜೆಡಿಎಸ್ ಮತ್ತು ಕೆಜೆಪಿ.
ಸೋಲು- ಗೆಲುವಿನ ಲೆಕ್ಕಾಚಾರದಲ್ಲಿರುವ ಪ್ರಮುಖ ಪಕ್ಷಗಳು ಬುಧವಾರದ ವಿಧಾನಸಭೆ ಚುನಾವಣೆ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿವೆ.
ಇನ್ನೊಂದೆಡೆ 'ಕಿಚಡಿ' ಸರ್ಕಾರ ಬಂದರೆ ತಮಗೆ ಲಾಭವಾಗಬಹುದು ಎಂಬ ಲೆಕ್ಕಾಚಾರದೊಂದಿಗೆ ಪಕ್ಷೇತರ ಅಭ್ಯರ್ಥಿಗಳೂ ಗೆಲವಿನ ಕನಸು ಕಾಣುತ್ತಿದ್ದಾರೆ.
ಎಲ್ಲರ ದೃಷ್ಟಿ ಬುಧವಾರ ಹೊರಬೀಳಲಿರುವ ಫಲಿತಾಂಶದ ಮೇಲೆಯೇ ನೆಟ್ಟಿದ್ದು, ಇದರ ಜತೆ ಜತೆಗೆ ಮುಂದೇನು ಎಂಬ ರಾಜಕೀಯ ಲೆಕ್ಕಾಚಾರಗಳೂ ತೀವ್ರಗೊಳ್ಳುತ್ತಿವೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಹಿಡಿಯುವಷ್ಟು ಬಹುಮತ ಬರಲಿದೆ ಎಂದು ಮತದಾನ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆಗಳು ಹೇಳಿವೆ.
ಈ ಹುಮ್ಮಸ್ಸಿನಲ್ಲೇ ಕಾಂಗ್ರೆಸ್ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿದೆ. ಮುಖ್ಯಮಂತ್ರಿ ಮತ್ತು ಸಚಿವ ಹುದ್ದೆಗಾಗಿ ಲಾಬಿ ಬಿರುಸಾಗಿದೆ. ಸಮೀಕ್ಷೆ ಹುಸಿ ಆಗಲಿ ಎಂದು ಬಯಸುತ್ತಿರುವ ಬಿಜೆಪಿ, ಜೆಡಿಎಸ್ ಜತೆಸೇರಿ ಅಧಿಕಾರಕ್ಕೇರುವ ಕನಸು ಕಾಣುತ್ತಿವೆ.
ಇನ್ನೊಂದೆಡೆ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಲೇ ಬಾರದು ಎನ್ನುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕೆಜೆಪಿ, ಅಗತ್ಯ ಬಿದ್ದರೆ ಕಾಂಗ್ರೆಸ್‌ಗೆ ಬೆಂಬಲ ನೀಡಿ ಅದನ್ನು ಅಧಿಕಾರಕ್ಕೆ ತರುವ ಯೋಚನೆಯಲ್ಲಿದೆ.
ಮತದಾನ ಪ್ರಮಾಣ ಹೆಚ್ಚಳ ತಂದ ಆತಂಕ: ರಾಜ್ಯದ ಇತಿಹಾಸದಲ್ಲೇ ಎರಡನೇ ಅತಿ ಹೆಚ್ಚು ಮತದಾನ ಈ ಬಾರಿ ನಡೆದಿದೆ. ಜತೆಗೆ ಅಕ್ರಮಗಳಿಗೂ ತೆರೆ ಎಳೆದಿರುವುದು ರಾಜಕೀಯ ಪಕ್ಷಗಳ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಮತ್ತೆ ಕಿಚಡಿ ಸರ್ಕಾರ ರಚಿಸಬೇಕಾದ ಪರಿಸ್ಥಿತಿ ಬರಬಹುದು ಎಂಬ ಚಿಂತೆಯೂ ಅವರನ್ನು ಕಾಡುತ್ತಿದೆ.
ಕಳೆದ ಎರಡು ದಶಕಗಳಿಂದ ರಾಜ್ಯದಲ್ಲಿ ಶೇ. 65ರಷ್ಟು ಮಾತ್ರ ಮತದಾನವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಪಡೆದುಕೊಳ್ಳಬಹುದು? ಯಾರು ಅಧಿಕಾರಕ್ಕೆ ಬರಬಹುದು? ಎಂಬುದನ್ನು ನಿರೀಕ್ಷಿಸಲು ಹೆಚ್ಚು ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಈ ಬಾರಿ ಮತದಾನ ಪ್ರಮಾಣ ಶೇ. 70ನ್ನು ದಾಟಿದೆ. ಈ ಹೆಚ್ಚುವರಿ ಶೇ. 5ರಷ್ಟು ಮತ ಯಾರ ಪರವಾಗಿ ಬಿದ್ದಿದೆ ಎಂಬುದು ರಾಜಕೀಯ ಪಕ್ಷಗಳ ಪಾಲಿಗೆ ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಈ ಪ್ರಶ್ನೆಯೇ ಅವರ ಆತಂಕಕ್ಕೆ ಕಾರಣವಾಗಿರುವುದು.
ನಿರ್ಣಾಯಕವಾಗಲಿದ್ದಾರೆಯೇ ಇತರರು?: ಈ ಮಧ್ಯೆ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಪಕ್ಷೇತರರು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎಂಬ ಅನುಮಾನವೂ ಕಾಡುತ್ತಿದೆ. ಏಕೆಂದರೆ, ಅಧಿಕಾರದ ನಿರೀಕ್ಷೆಯಲ್ಲಿರುವ ಕಾಂಗ್ರೆಸ್‌ಗೇ ಆ ಬಗ್ಗೆ ಸಂಪೂರ್ಣ ವಿಶ್ವಾಸವಿಲ್ಲ. ಇಂತಿಷ್ಟೇ ಸ್ಥಾನಗಳೊಂದಿಗೆ ಅಧಿಕಾರ ಹಿಡಿಯುತ್ತೇವೆ ಎಂಬ ಗಟ್ಟಿ ವಿಶ್ವಾಸವನ್ನು ಕೈ ಪಡೆಯ ಯಾವೊಬ್ಬ ನಾಯಕನೂ ಪ್ರಕಟಿಸಿಲ್ಲ.
ಇನ್ನೊಂದೆಡೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪ್ರಚಾರ ಕೈಗೊಂಡ ಬಳಿಕ ಬಿಜೆಪಿಯೂ ಸ್ವಲ್ಪ ಮಟ್ಟಿಗೆ ತನ್ನ ಬಲ ಹೆಚ್ಚಿಸಿಕೊಂಡಿದೆ. ಬಿಜೆಪಿಯ ದುರಾಡಳಿತದಿಂದ ಘಾಸಿಗೊಂಡು ಮತದಾನದಿಂದ ದೂರ ಉಳಿಯ ಬಯಸಿದ್ದ ಬಿಜೆಪಿಯ ಸಾಂಪ್ರದಾಯಿಕ ಮತದಾರ ಮೋದಿ ಆಗಮನದ ನಂತರ ಮತಗಟ್ಟೆಯತ್ತ ಮುಖ ಮಾಡಿದ್ದು ಕಮಲ ಪಾಳಯದವರ ಮುಖ ಅರಳುವಂತೆ ಮಾಡಿದೆ. ಹೀಗಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದ್ದು, ಅಧಿಕಾರ ಹಿಡಿಯಲು ಕೆಜೆಪಿ ಅಥವಾ ಪಕ್ಷೇತರರ ನೆರವು ಬೇಕಾಗಬಹುದು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿದೆ.
ಇನ್ನೊಂದೆಡೆ ಕಾಂಗ್ರೆಸ್ ಪಡೆಯುವ ಸ್ಥಾನ 100ರೊಳಗೆ ಇರುತ್ತದೆ ಎಂಬ ಲೆಕ್ಕಾಚಾರ ಹಾಕಿರುವ ಬಿಜೆಪಿ ಮತ್ತು ಜೆಡಿಎಸ್ ಜತೆ ಸೇರಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿವೆ. ಇದಕ್ಕೆ ಬಿಎಸ್‌ಆರ್ ಕಾಂಗ್ರೆಸ್ ಮತ್ತು ಪಕ್ಷೇತರರ ನೆರವು ಪಡೆಯುವ ಬಗ್ಗೆ ಈಗಲೇ ಚಿಂತನೆ ನಡೆಸುತ್ತಿದೆ.
ರಾಜಕೀಯ ಪಕ್ಷಗಳ ಈ ಎಲ್ಲಾ ನಿರೀಕ್ಷೆ, ಕನಸು, ಯೋಚನೆ, ಚಿಂತನೆಗಳ ಪ್ರಶ್ನೆಗಳಿಗೆ ಮತದಾರರು ಬರೆದಿರುವ ಉತ್ತರಪತ್ರಿಕೆ ಬುಧವಾರ ಮೌಲ್ಯಮಾಪನವಾಗಲಿದ್ದು, ರಾಜಕೀಯ ಪಕ್ಷಗಳ ಮುಂದಿನ ಐದು ವರ್ಷಗಳ ಭವಿಷ್ಯ ಮಧ್ಯಾಹ್ನದ ವೇಳೆಗೆ ಹೊರಬೀಳಲಿದೆ.