ಕನ್ನಡಪ್ರಭ ವಾರ್ತೆ, ಚನ್ನಗಿರಿ, ಮೇ 7
ಮನೆ ಕಟ್ಟಿಸಿಕೊಳ್ಳಲು ಕೊಟ್ಟ ಸಾಲ ತೀರಿಸಲು ಮನೆಯಲ್ಲಿ ಕೆಲಸಕ್ಕಿಟ್ಟುಕೊಂಡಿದ್ದ 17 ವರ್ಷದ ಬಾಲಕಿಯೊಬ್ಬಳ ಮೇಲೆ 55 ವರ್ಷದ ಕಾಮುಕ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಘಟನೆ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಆರೋಪಿ ಶಿವಾನಂದಯ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬಕ್ಕೆ ಶಿವಾನಂದಯ್ಯ ಮನೆ ಕಟ್ಟಿಕೊಳ್ಳಲು 30,000 ಸಾಲ ನೀಡಿದ್ದ. ಇದನ್ನು ತೀರಿಸಲು ಕಳೆದ ಐದು ವರ್ಷದಿಂದ ಬಾಲಕಿಯನ್ನು ಮನೆಯ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ತೋಟಕ್ಕೆ ನೀರು ತರಲು ಹೋದಾಗ ಹೊಂಚು ಹಾಕಿದ ಕಾಮುಕ ಶಿವಾನಂದಯ್ಯ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಚನ್ನಗಿರಿ ಪೊಲೀಸರು ಆರೋಪಿ ಶಿವಾನಂದಯ್ಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.