ಕನ್ನಡಪ್ರಭ ವಾರ್ತೆ ರೋಣ ಮೇ 7
ಕುಟುಂಬ ಕಲಹದ ಹಿನ್ನೆಲೆಯಲ್ಲಿ ಬುದ್ಧಿಮಾತು ಹೇಳಿದ ತನ್ನ ಸಹೋದರ ಸಂಬಂಧಿಗಳನ್ನೇ ಕೊಡಲಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಾಲೂಕಿನ ಸಂದಿಗವಾಡ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.
ಬಸವರಾಜ ಹೊಸೂರ ಎಂಬಾತ ಶಿವಪ್ಪ ಹೊಸೂರ (46) ಹಾಗೂ ಆತನ ಪತ್ನಿ ಚೆನ್ನವ್ವ (ಅವ್ವನೆವ್ವ) ಹೊಸೂರ (40) ಎಂಬುವರನ್ನು ಹತ್ಯೆ ಮಾಡಿ, ನಂತರ ಪೊಲೀಸರಿಗೆ ಶರಣಾಗಿದ್ದಾನೆ.
ಘಟನೆ ವಿವರ: ಬಸವರಾಜ ಹೊಸೂರ ತನ್ನ ಮಗ ಮತ್ತು ತಾಯಿಯೊಂದಿಗೆ ಮಂಗಳವಾರ ಬೆಳಗಿನ ಜಾವ ಜಗಳವಾಡುತ್ತಿದ್ದ. ಆಗ ಅಲ್ಲಿಗೆ ಬಂದ ಸಹೋದರ ಸಂಬಂಧಿ (ದೊಡ್ಡಪ್ಪನ ಮಗ) ಶಿವಪ್ಪ ಮತ್ತು ಅತ್ತಿಗೆ ಚೆನ್ನವ್ವ ಹೊಸೂರ, 'ನಿತ್ಯ ಜಗಳವಾಡುವುದು ಸರಿಯಲ್ಲ. ವಯಸ್ಸಾದ ತಾಯಿ ಮತ್ತು ಚಿಕ್ಕ ಮಕ್ಕಳಿದ್ದಾರೆ. ಅವರೊಂದಿಗೆ ಹೊಂದಿಕೊಂಡು ಹೋಗು' ಎಂದು ಬುದ್ಧಿಮಾತು ಹೇಳಿದ್ದಾರೆ. ಆಗ, ನಿಮ್ಮಿಂದಲೇ ನನ್ನ ಸಂಸಾರ ಹಾಳಾಗಿ ಹೋಗಿದೆ. ಮತ್ತೆ ಬುದ್ಧಿವಾದ ಹೇಳಲು ಬರುತ್ತಿದ್ದೀರಾ ಎಂದು ದಬಾಯಿಸಿ, ಮನೆಯಲ್ಲಿದ್ದ ಕೊಡಲಿ ತಂದು ನಡು ರಸ್ತೆಯಲ್ಲಿಯೇ ಇವರಿಬ್ಬರನ್ನೂ ಹೊಡೆದು ಸಾಯಿಸಿದ್ದಾನೆ.
ಬಸವರಾಜನ ಮೊದಲ ಪತ್ನಿ ಲಕ್ಷ್ಮವ್ವ ಹೊಸೂರ ಎರಡು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾಳೆ. ಮಕ್ಕಳಾದ ಪ್ರಶಾಂತ ಮತ್ತು ಪವಿತ್ರಾ ಅನಾಥರಾಗಬಾರದು ಎಂಬ ಕಾರಣಕ್ಕೆ ಆತನಿಗೆ ರೇಖಾ ಎಂಬಾಕೆ ಜತೆ ಎರಡನೇ ಮದುವೆ ಮಾಡಲಾಗಿತ್ತು. ಆಕೆಯೊಂದಿಗೆ ಬಸವರಾಜ ಆಗಾಗ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ರೇಖಾ ತನ್ನ ತವರುಮನೆಗೆ ತೆರಳಿದ್ದಾಳೆ.
ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ: ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಡಿವೈಎಸ್ಪಿ ಕುಂಬಾರ, ರೋಣ ಸಿಪಿಐ ಮಲ್ಲನಗೌಡ ನಾಯಕ ಮತ್ತು ಪಿಎಸ್‌ಐ ಎಂ.ಎನ್. ಹತ್ತಿಕಟಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೇಲ್ನೋಟಕ್ಕೆ ಕೌಟುಂಬಿಕ ಹಿನ್ನೆಲೆಯಿಂದ ಸಂಭವಿಸಿದ ಘಟನೆಯಂತೆ ಕಂಡು ಬಂದರೂ ಇದರ ಹಿಂದಿರುವ ಉದ್ದೇಶವನ್ನು ಪೊಲೀಸರು ತನಿಖೆಯಿಂದ ಬಹಿರಂಗ ಮಾಡಬೇಕೆಂದು ಮೃತ ಶಿವಪ್ಪನ ಮಕ್ಕಳು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.