ಯಾರು, ಯಾರ್ಯಾರು..?
ಅಧಿಕಾರದ ದಾರಿ ಯಾರದಯ್ಯಾ...? ಇನ್ನು ಕೆಲವೇ ಹೊತ್ತಲ್ಲಿ ಈ ಪ್ರಶ್ನೆಗೆ ಉತ್ತರ ದೊರಕಲಿದೆ. ಗೆಲವಿನ ಸಂಭ್ರಮ ಯಾರದ್ದು, ಸೋಲಿನ ನಿರಾಸೆ ಇನ್ಯಾರದ್ದು ಎಂಬುದೂ...
-ಅಧಿಕಾರದ ದಾರಿ ಯಾರದಯ್ಯಾ...? ಇನ್ನು ಕೆಲವೇ ಹೊತ್ತಲ್ಲಿ ಈ ಪ್ರಶ್ನೆಗೆ ಉತ್ತರ ದೊರಕಲಿದೆ. ಗೆಲವಿನ ಸಂಭ್ರಮ ಯಾರದ್ದು, ಸೋಲಿನ ನಿರಾಸೆ ಇನ್ಯಾರದ್ದು ಎಂಬುದೂ ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ. ಒಂದೇ ಪಕ್ಷ ಸರ್ಕಾರ ರಚಿಸುತ್ತದೆಯಾ ಅಥವಾ ಯಾರ್ಯಾರು ಸೇರಿ ಸರ್ಕಾರ ರಚನೆ ಮಾಡುತ್ತಾರೆ ಎಂಬ ಕುತೂಹಲ ಮತದಾರರ ಜೊತೆ, ಅಭ್ಯರ್ಥಿಗಳಿಗೂ ಇದೆ. ಎಲ್ಲರ ಹಣೆಬರಹ ಇವತ್ತೇ ತೆರೆದುಕೊಳ್ಳಲಿದೆ.
ಕನ್ನಡಪ್ರಭವಾರ್ತೆ ಬೆಂಗಳೂರು ಮೇ 7
ರಾಜ್ಯದಲ್ಲಿ 49 ದಿನಗಳಿಂದ ನಡೆಯುತ್ತಿರುವ ಚುನಾವಣಾ ಹಬ್ಬ ಮುಕ್ತಾಯ ಹಂತ ತಲುಪಿದ್ದು, ವಿವಿಧ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಭವಿಷ್ಯ ಬುಧವಾರ ಬಯಲಾಗಲಿದೆ.
223 ವಿಧಾನಸಭಾ ಕ್ಷೇತ್ರಗಳಿಂದ 2940 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ತಮ್ಮ ಅದೃಷ್ಟವನ್ನು ಪಣಕ್ಕೆ ಒಡ್ಡಿದ್ದಾರೆ. ಮತದಾರ ಯಾರ ಕೊರಳಿಗೆ ಗೆಲುವಿನ ಹಾರ ಹಾಕಿದ್ದಾನೆ, ಇನ್ಯಾರನ್ನು ಸೋಲಿನ ಸುಳಿಗೆ ತಳ್ಳಿದ್ದಾನೆ ಎಂಬ ಕುತೂಹಲ ತಣಿಯುವುದಕ್ಕೆ ಇನ್ನುಳಿದಿರುವುದು ಕೇಲವೇ ಗಂಟೆಗಳು ಮಾತ್ರ.
ಘಟಾನುಘಟಿ ನಾಯಕರು, ಮುಖ್ಯಮಂತ್ರಿ ಹುದ್ದೆ ಏರುವ ಆಕಾಂಕ್ಷಿಗಳು ಸೇರಿದಂತೆ ಬಿಜೆಪಿಯ 222, ಬಿಎಸ್‌ಪಿ 175, ಕಾಂಗ್ರೆಸ್‌ನ 223, ಜೆಡಿಎಸ್‌ನ 221, ಎನ್‌ಸಿಪಿಯ 24, ಕೆಜೆಪಿ ಸೇರಿದಂತೆ ಉಳಿದ ಸಣ್ಣಪುಟ್ಟ ಪಕ್ಷಗಳಿಂದ 832, 1223 ಪಕ್ಷೇತರರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.
ಬುಧವಾರ ಬೆಳಗ್ಗೆ 8 ಗಂಟೆಯಿಂದ ರಾಜ್ಯದ 33 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಎಣಿಕೆ ಕೇಂದ್ರಗಳ ಬಳಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆ ಕೇಂದ್ರದ ಬಳಿ ವಿಜಯೋತ್ಸವ ಆಚರಣೆ, ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ರಾತ್ರಿ 12 ಗಂಟೆಯವರೆಗೂ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ.
12 ಸಾವಿರ ಸಿಬ್ಬಂದಿ: ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು 12 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. ಒಂದು ಕ್ಷೇತ್ರದ ಮತ ಎಣಿಕೆಗೆ 14 ಟೇಬಲ್ ಹಾಕಲಾಗಿದ್ದು, ಪ್ರತಿ ಟೇಬಲ್‌ನ ಜವಾಬ್ದಾರಿಯನ್ನು ಒಬ್ಬ ಚುನಾವಣಾಧಿಕಾರಿಗೆ ನೀಡಲಾಗಿದೆ. ಜತೆಗೆ ಒಂದು ಕ್ಷೇತ್ರಕ್ಕೆ ತಲಾ ಮೂವರು ವೀಕ್ಷಕರನ್ನು ನಿಯೋಜಿಸಲಾಗಿದೆ.
ಪ್ರತಿ ಮತ ಎಣಿಕೆ ಕೇಂದ್ರವನ್ನು ಬೆಂಗಳೂರಿನ ವಾರ್ತಾಭವನದಲ್ಲಿರುವ ಪ್ರಧಾನ ಕೇಂದ್ರದ ಜತೆ ಸಂಪರ್ಕಿಸಲಾಗಿದ್ದು, ಪ್ರತಿ ಕ್ಷಣದ ವಿವರ ಲಭ್ಯ. ಮುಂಚೂಣಿಯಲ್ಲಿರುವ ಮೊದಲ ನಾಲ್ವರು ಅಭ್ಯರ್ಥಿಗಳ ಹೆಸರು ಹಾಗೂ ಅವರು ಪಡೆದ ಮತಗಳ ವಿವರ ಪ್ರಧಾನ ಫಲಕದಲ್ಲಿ ಪ್ರಕಟವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಇದರ ಜತೆಗೆ ವಾರ್ತಾಭವನದಲ್ಲಿ ಬೆಳಗಾವಿ, ಬೆಂಗಳೂರು, ಮೈಸೂರು, ಧಾರವಾಡ ವಿಭಾಗವಾರು ಫಲಿತಾಂಶ, ರಾಜ್ಯದ ಒಟ್ಟಾರೆ ಫಲಿತಾಂಶ ಮತ್ತು ಟ್ರೆಂಡ್ ವಿವರ ನೀಡುವುದಕ್ಕೆ 20 ದೊಡ್ಡ ಟಿವಿಗಳನ್ನು ಅಳವಡಿಸಲಾಗಿದೆ. ಜತೆಗೆ ಗಣ್ಯರು, ಸೋತ-ಗೆದ್ದ ನಾಯಕರ ಅಭಿಪ್ರಾಯ ಸಂಗ್ರಹಣೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರಿನಲ್ಲಿ ಐದು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಿಬಿಎಂಪಿ ಕೇಂದ್ರ ವಿಭಾಗಕ್ಕೆ ಸೇರುವ ಕ್ಷೇತ್ರಗಳ ಎಣಿಕೆ - ಮೌಂಟ್ ಕಾರ್ಮಲ್ ಕಾಲೇಜು, ಬಿಬಿಎಂಪಿ ಉತ್ತರ- ಮಹಾರಾಣಿ ಕಲಾ ಕಾಲೇಜು ಪ್ಯಾಲೇಸ್ ರಸ್ತೆ, ಬಿಬಿಎಂಪಿ ದಕ್ಷಿಣ- ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜು ಜಯನಗರ ನಗರ ನಾಲ್ಕನೇ ಟಿ ಬ್ಲಾಕ್, ಬೆಂಗಳೂರು ಗ್ರಾಮಾಂತರ- ಆರ್‌ಸಿ ವಾಣಿಜ್ಯ ಕಾಲೇಜು, ಬಸವೇಶ್ವರ ವೃತ್ತ, ಬೆಂಗಳೂರು ನಗರ- ವಿಎಚ್‌ಡಿ ಹೋಮ್ ಸೈನ್ಸ್ ಕಾಲೇಜು, ಶೇಷಾದ್ರಿ ರಸ್ತೆ.
ಬೆಳಗ್ಗೆ 8ರಿಂದ ಸಾಯಂಕಾಲ 6ರ ವರೆಗೆ ಎಣಿಕೆ ಕಾರ್ಯ ನಡೆಯಲಿದೆ.
ಸಿನಿ ರಾಯಭಾರಿಗಳು ಇಲ್ಲ: ಆಯೋಗ
ಚಲನಚಿತ್ರ ತಾರೆಯರನ್ನು ಇನ್ನು ಮುಂದೆ ತನ್ನ ರಾಯಭಾರಿಯಾಗಿ ನೇಮಿಸಿಕೊಳ್ಳದಿರಲು ಚುನಾವಣಾ ಆಯೋಗ ನಿರ್ಧರಿಸಿದೆ.
ಇದು ನಟಿ ಐಂದ್ರಿತಾ ರೇ ಪ್ರಭಾವ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾರರನ್ನು ಪ್ರೇರೇಪಿಸಲು ಕೆಲ ಐಕಾನ್‌ಗಳನ್ನು ನೇಮಕ ಮಾಡಿಕೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಐಂದ್ರಿತಾ ರೇ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಆಯೋಗದ ನಿಯಮಕ್ಕೆ ವಿರುದ್ಧವಾಗಿ ಐಂದ್ರಿತಾ ಬಿಜೆಪಿ ಪರ ಪ್ರಚಾರ ನಡೆಸಿದ್ದರು. ಇದು ಚುನಾವಣಾಧಿಕಾರಿಗಳನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾವುದೇ ಚಿತ್ರ ತಾರೆಯರನ್ನು ಐಕಾನ್‌ಗಳಾಗಿ ನೇಮಿಸಿಕೊಳ್ಳದೇ ಇರಲು ನಿರ್ಧರಿಸಲಾಗಿದೆ.