ವೇದಿಕೆ ಹತ್ತುವ ವೇಳೆ ಇಮ್ರಾನ್‌ಗೆ ಗಾಯ
ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ...
ಲಾಹೋರ್: ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ತೆಹ್ರೀಕ್- ಇ- ಇನ್ಸಾಫ್ ಪಕ್ಷದ ಮುಖಂಡ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಮಂಗಳವಾರ ವೇದಿಕೆ ಹತ್ತುವ ವೇಳೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
14 ಅಡಿ ಎತ್ತರದ ವೇದಿಕೆಗೆ ಇಮ್ರಾನ್ ಅವರನ್ನು ವಾಹನವೊಂದರ ಸಹಾಯದಿಂದ ಲಿಫ್ಟ್ ಮಾಡಲಾಗುತ್ತಿತ್ತು. ಈ ವೇಳೆ ಇಮ್ರಾನ್ ಹಾಗೂ ಅವರ ಅಂಗರಕ್ಷಕರು ಆಯತಪ್ಪಿ ಕುಸಿದು ಬಿದ್ದರು. ಘಟನೆಯಲ್ಲಿ ಇಮ್ರಾನ್ ತಲೆ ಮುಂಭಾಗ ಹಾಗೂ ಹಿಂಭಾಗಕ್ಕೆ ಗಂಭೀರ ಏಟು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರ ತಲೆಗೆ ಹಲವು ಹೊಲಿಗೆ ಹಾಕಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಘಟನೆ ವೇಳೆ ಇಮ್ರಾನ್ ಅವರ ಹಲವು ಬೆಂಬಲಿಗರಿಗೂ ಗಾಯಗಳಾಗಿವೆ ಎನ್ನಲಾಗಿದೆ. ಮೇ 11ರಂದು ನಡೆಯಲಿರುವ ಪಾಕಿಸ್ತಾನದ ಮುಖ್ಯ ಚುನಾವಣೆಗಾಗಿ ಇಮ್ರಾನ್ ಖಾನ್ ಅವರು ದೇಶದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರು ಭಾಷಣ ಮಾಡುತ್ತಿದ್ದಾಗ ವೇದಿಕೆ ಮೇಲೆ ಕುಸಿದು ಬಿದ್ದಿದ್ದರು. ಆಗ ವೈದ್ಯರು ಇಮ್ರಾನ್‌ಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದರು.