ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಹುಲ್‌ಗೆ ಸಿಕ್ಕ ಬಲ

ಕರ್ನಾಟಕದಲ್ಲಿ ಮತ್ತೆ ಅಧಿಕಾರ ಗದ್ದುಗೆ ಏರುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಈ ಗೆಲುವು ನಿರ್ಣಾಯಕ.ಇದು ರಾಹುಲ್ ಗಾಂಧಿ ಮತ್ತು ಸೋನಿಯಾ...

Mainashree
Updated On : 9 May 2013, 12:25 pm

ನವದೆಹಲಿ: ಕರ್ನಾಟಕದಲ್ಲಿ ಮತ್ತೆ ಅಧಿಕಾರ ಗದ್ದುಗೆ ಏರುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಈ ಗೆಲುವು ನಿರ್ಣಾಯಕ.
ಇದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಗೆಲುವು. ಇತ್ತೀಚೆಗಷ್ಟೆ ಎಐಸಿಸಿ ಉಪಾಧ್ಯಕ್ಷ ಹುದ್ದೆ ಅಲಂಕರಿಸಿ ಪಕ್ಷದಲ್ಲಿ ಎರಡನೇ ಅತ್ಯುನ್ನತ ಸ್ಥಾನಕ್ಕೇರಿದ ರಾಹುಲ್ ಗಾಂಧಿ ಅವರು  ಕಾಲು ಇಟ್ಟೊಡೆಯೆಲ್ಲ ಕಾಂಗ್ರೆಸ್ ಸೋಲು ಖಚಿತ ಎಂದು ಟೀಕೆ ಮಾಡುತ್ತಿದ್ದವರಿಗೆ ಈ ಗೆಲುವು ತಕ್ಕ ಉತ್ತರ ನೀಡಿದೆ.
ಅಷ್ಟೇ ಅಲ್ಲ, ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಮತ್ತಷ್ಟು ಹುಮ್ಮಸ್ಸಿನಿಂದ ಎದುರಿಸಲು ಕಾಂಗ್ರೆಸ್‌ಗೆ ಬಲ ತಂದಂತಾಗಿದೆ. ದಕ್ಷಿಣ ಭಾರತದಿಂದ ಹೆಚ್ಚಿನ ಲೋಕಸಭಾ ಸದಸ್ಯ ಬಲ ಹೆಚ್ಚಿಸಿಕೊಳ್ಳುವ ತಂತ್ರಗಾರಿಕೆಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಆಂಧ್ರದಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿ ಇದೆ. ಆಂಧ್ರದಲ್ಲಿ ಕಳೆದುಕೊಳ್ಳುವುದನ್ನು ಕರ್ನಾಟಕದಲ್ಲಿ ತುಂಬಿಕೊಳ್ಳುವ ನಿಟ್ಟಿ ನಲ್ಲಿ ಈ ಗೆಲುವು ಸಹಕಾರಿಯಾಗಲಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರ ಪ್ರಕಾರ-  ಕಾಂಗ್ರೆಸ್ ಗೆಲುವು ಬಿಜೆಪಿ ಸಿದ್ಧಾಂತದ ಸೋಲು!
ರಾಗಾ ವರ್ಸಸ್ ನಮೋ: ಪ್ರಧಾನಿ ಹುದ್ದೆ ಪ್ರಸ್ತಾಪ ಬಂದಾಗಲೆಲ್ಲ ರಾಹುಲ್ ವರ್ಸಸ್ ಮೋದಿ ಹೆಸರುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಇನ್ನೂ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡದಿದ್ದರೂ ಈ ಇಬ್ಬರು ಅಘೋಷಿತ ಅಭ್ಯರ್ಥಿಗಳಾಗಿ ಬಿಟ್ಟಿದ್ದಾರೆ. ಈ ಇಬ್ಬರು ಅಘೋಷಿತ ಪ್ರಧಾನಿ ಅಭ್ಯರ್ಥಿಗಳು ಮುಖಾಮುಖಿಯಾದ ಮೊದಲ ಚುನಾವಣೆ ಕರ್ನಾಟಕದ್ದು. ಬಿಜೆಪಿ ಧೂಳೀಪಟ ಆಗಿರುವುದರಿಂದ ಮೊದಲ ಸುತ್ತಿನಲ್ಲಿ ಮೋದಿ ವಿರುದ್ಧ ರಾಹುಲ್ ಜಯಿಸಿದ್ದಾರೆಂದು ಹೇಳಬಹುದು.
ಅದರ ಸತ್ಯಾಸತ್ಯತೆ ಏನೇ ಇದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ದಕ್ಕಿದ ನಿರ್ಣಾಯಕ ಗೆಲುವನ್ನು ಕಾಂಗ್ರೆಸ್ ರಾಹುಲ್ ಗಾಂಧಿಗೆ ದಕ್ಕಿದ ಗೆಲುವೆಂದೇ ಭಾವಿಸಿದೆ. ಅದಕ್ಕೆ ಕಾರಣವೂ ಇದೆ. ಟಿಕೆಟ್ ಹಂಚಿಕೆ ಹಂತದಿಂದ ಪ್ರಣಾಳಿಕೆ, ಪ್ರಚಾರ ತಂತ್ರಗಳೆಲ್ಲದರಲ್ಲೂ ರಾಹುಲ್ ಗಾಂಧಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರು.      

ಉತ್ತರ ಪ್ರದೇಶದಲ್ಲಿ ಅನುಭವಿಸಿದ ನಿರ್ಣಾಯಕ ಸೋಲಿನಿಂದ ದಕ್ಕಿಸಿಕೊಂಡ ಅನುಭವ ಹಾಗೂ ಕಲಿತ ಪಾಠವನ್ನು ಕರ್ನಾಟಕ ರಣಕಣದಲ್ಲಿ ಬಳಸಿಕೊಂಡರು.
 ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳುವಂತೆ ಹಿಂದೆಂದೂ ರಾಹುಲ್ ಗಾಂಧಿ ಚುನಾವಣೆಯಲ್ಲಿ ಇಷ್ಟೊಂದು ಆಸಕ್ತಿ ವಹಿಸಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಈ ಗೆಲುವನ್ನು ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರಕ್ಕೆ ಜನತೆ ಬೇಸತ್ತು ನೀಡಿದ ವರ ಎಂದುಕೊಳ್ಳುತ್ತಿಲ್ಲ. ವ್ಯವಸ್ಥಿತವಾಗಿ ಚುನಾವಣೆ ನಡೆಸಿದ ರಾಹುಲ್ ಗಾಂಧಿ 'ಕೈ' ಚಳಕ ಎಂದುಕೊಳ್ಳುತ್ತಿದೆ.
ಅತ್ತ ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತಿದ್ದಂತೆ ಇತ್ತ ಎಐಸಿಸಿ ಕಚೇರಿ ಮುಂದೆ ಸಿಡಿದ ಪಟಾಕಿಗಳ ಸದ್ದು ಕಾಂಗ್ರೆಸ್ ಹೈಕಮಾಂಡ್‌ನ ಸಂಭ್ರಮವನ್ನು ಸಾರಿ ಸಾರಿ ಹೇಳುತ್ತಿತ್ತು.
ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ನಿರೀಕ್ಷೆ: ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಗ್ರಹಿಸಿದ ಕರ್ನಾಟಕದಲ್ಲಿ ಬಿಜೆಪಿ ಧೂಳಿಪಟವಾಗಿರುವುದು ಕಾಂಗ್ರೆಸ್ ಪಾಲಿಗೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗುತ್ತದೆ.
ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಕರ್ನಾಟಕದಲ್ಲಿ ಅಧಿಕಾರ ಗದ್ದುಗೆ ಬೇಕಿರುವುದು ಆ ರಾಜ್ಯದಲ್ಲಿ ಅಧಿಕಾರ ಚಲಾಯಿಸುವುದಕ್ಕಿಂತ 2014ರ ಚುನಾವಣೆಗೆ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಳ್ಳುವುದಕ್ಕೆ ಬೇಕಿದೆ. ಅಷ್ಟರ ಮಟ್ಟಿಗೆ ಕಾಂಗ್ರೆಸ್‌ನ ದೂರದೃಷ್ಟಿ ಮಹಾತ್ವಾಕಾಂಕ್ಷೆಗೆ ಕರ್ನಾಟಕ ಜನತೆ ನೀರೆರೆದಿದ್ದಾರೆ.
ಈ ಗೆಲುವು ಗಾಂಧಿ ಕುಟುಂಬ  ನಿಷ್‌ಠ ಕಾಂಗ್ರೆಸ್ ನಾಯಕರಿಗೂ ಬೇಕಿತ್ತು. ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿಯೇ ಅಭ್ಯರ್ಥಿ ಎಂದು ಘೋಷಿಸುತ್ತಿರುವ ಗಾಂಧಿ ಕುಟುಂಬ ನಿಷ್ಠ ನಾಯಕರು ಈಗ ಕರ್ನಾಟಕದ ಗೆಲುವನ್ನು ಮುಂದಿಟ್ಟುಕೊಂಡು ತಮ್ಮ ವಾದ ಸಮರ್ಥಿಸಿಕೊಳ್ಳಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಯುಪಿಎ ಸರ್ಕಾರದ ಹಗರಣಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವ ಬಿಜೆಪಿಯ ನೈತಿಕತೆಯನ್ನು ಪ್ರಶ್ನಿಸಲು ಕರ್ನಾಟಕದ ಗೆಲುವು ಕಾಂಗ್ರೆಸ್‌ಗೆ ಸಿಕ್ಕ ಹೊಸ  ಆಯುಧ. ಅಷ್ಟಕ್ಕೂ ಕರ್ನಾಟಕದಲ್ಲಿ ಬಿಜೆಪಿ ಧೂಳಿಪಟವಾಗಿದ್ದು ಭ್ರಷ್ಚಾಚಾರ, ಹಗರಣ ಸ್ವಜನಪಕ್ಷಪಾತದಿಂದಲೇ.

 ರೇಣುಕಾಪ್ರಸಾದ್ ಹಾಡ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement