ಕಾಂಗ್ರೆಸ್ ಇಟ್ಕೋಬೇಕು ಬಿಎಸ್‌ವೈ ಫೋಟೋ!
ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಜನತಾಪಕ್ಷ ನಿರೀಕ್ಷಿತ ಸಾಧನೆ ಮಾಡಲಾಗದಿದ್ದರೂ ಆ ಪಕ್ಷದ ಸಾರಥಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಬಲ ಶಕ್ತಿಯಾಗಿ...
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಜನತಾಪಕ್ಷ ನಿರೀಕ್ಷಿತ ಸಾಧನೆ ಮಾಡಲಾಗದಿದ್ದರೂ ಆ ಪಕ್ಷದ ಸಾರಥಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಬಲ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ.
ಚುನಾವಣೆಯಲ್ಲಿ ಕೆಜೆಪಿಗೆ ಕೇವಲ ಆರು ಸ್ಥಾನ ಸಿಕ್ಕಿರಬಹುದು. ಆದರೆ, ತಮ್ಮ ಶಕ್ತಿ ಮತ್ತು ಸಾಮರ್ಥ್ಯ ಏನು ಎಂಬುದನ್ನು ಯಡಿಯೂರಪ್ಪ ಅವರು ಮತ್ತೆ ಸಾಬೀತುಪಡಿಸಿದ್ದಾರೆ. ಬಿಜೆಪಿಯನ್ನು ನೆಲಕಚ್ಚಿಸುವಲ್ಲಿ ಅವರ ಪಾತ್ರ ಎಷ್ಟಿದೆಯೋ ಕಾಂಗ್ರೆಸ್ ಸರ್ಕಾರ ರಚನೆಗೆ ಅಗತ್ಯವಾದ ಬಹುಮತ ಪಡೆದುಕೊಳ್ಳುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಸುಳ್ಳಲ್ಲ.
ಕಾಂಗ್ರೆಸ್ಸಿಗರು ಯಡಿಯೂರಪ್ಪ ಅವರ ಫೋಟೋ ಹಾಕಿಕೊಳ್ಳಬೇಕು ಎಂದು ಆ ಪಕ್ಷದ ನಾಯಕರೊಬ್ಬರು ಈ ಹಿಂದೆ ಹೇಳಿದ್ದರು. ಆ ಮಾತು ಈಗ ಸತ್ಯವಾಗಿದೆ. ಏಕೆಂದರೆ, ಕಾಂಗ್ರೆಸ್ ಗೆಲವಿನ ದಡ ಸೇರಿಕೊಳ್ಳುವಲ್ಲಿ ಯಡಿಯೂರಪ್ಪ ಅವರ 'ಆಟ' ಕೆಲಸ ಮಾಡಿದೆ.
ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಬೇಕು ಎಂಬುದಕ್ಕಿಂತ ಮಿಗಿಲಾಗಿ ಬಿಜೆಪಿಯನ್ನು ಹೊಡೆದು ಉರುಳಿಸಬೇಕು ಎಂಬುದು ಯಡಿಯೂರಪ್ಪ ಅವರ ಗಟ್ಟಿ ನಿರ್ಧಾರವಾಗಿತ್ತು. ಅಂದುಕೊಂಡಿದ್ದನ್ನು ಅವರು ಮಾಡಿ ತೋರಿಸಿದ್ದಾರೆ. ಬಿಜೆಪಿ 50 ಸ್ಥಾನಗಳನ್ನು ದಾಟಿದರೆ ತಾವು ರಾಜಕೀಯದಿಂದಲೇ ನಿವೃತ್ತಿ ಆಗುವುದಾಗಿ ಹಾಕಿದ್ದ ಸವಾಲನ್ನೂ ಗೆದ್ದಿದ್ದಾರೆ.
ಕೆಜೆಪಿ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇತ್ತೋ ಏನೋ. ಅದರೆ, ಸಮಯದ ಅಭಾವ ಯಡಿಯೂರಪ್ಪ ಅವರನ್ನು ಕಾಡಿದ್ದಂತೂ ನಿಜ.
ಏಕೆಂದರೆ ಪಕ್ಷ ಉದಯವಾಗಿದ್ದು ಕೇವಲ ನಾಲ್ಕೂವರೆ ತಿಂಗಳ ಹಿಂದೆ. ಆದರೂ ಶೇ. 10ರಷ್ಟು ಮತಗಳನ್ನು ಪಕ್ಷ ತನ್ನದಾಗಿಸಿಕೊಂಡಿದೆ. ಇದು ಕಡಿಮೆ ಸಾಧನೆ ಏನಲ್ಲ. ಏಕೆಂದರೆ 30 ವರ್ಷದ ಇತಿಹಾಸ ಹೊಂದಿರುವ ಬಿಜೆಪಿ ಶೇ. 19.97ರಷ್ಟು ಮತಗಳನ್ನು ಪಡೆದಿದ್ದರೆ, ಜೆಡಿಎಸ್ ಪಾಲಿಗೆ ಬಂದಿರುವುದು ಶೇ.20.09ರಷ್ಟು ಮತಗಳು ಮಾತ್ರ.
ಪಕ್ಷ ಸಂಘಟನೆಗೆ ಸಮಯ ಸಿಗಲಿಲ್ಲ ಎಂಬುದು ಒಂದು ಸಮಸ್ಯೆಯಾದರೆ ಚಿಹ್ನೆ ವಿಚಾರವೂ ಯಡಿಯೂರಪ್ಪ ಅವರಿಗೆ ತೊಡಕಾಗಿ ಪರಿಣಮಿಸಿತು. ತೆಂಗಿನಕಾಯಿ ಚಿಹ್ನೆಯಾಗಿ ಪಡೆದುಕೊಂಡ ಯಡಿಯೂರಪ್ಪ ಅವರು ಅದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಲಿಲ್ಲ. ಈ ಗೊಂದಲವೂ ಕಡಿಮೆ ಸ್ಥಾನಗಳು ಬರಲು ಕಾರಣ ಆಯಿತು.
ಸಿಕ್ಕ ಸಮಯದಲ್ಲಿ ಪಕ್ಷ ಸಂಘಟನೆಗೆ ಯಡಿಯೂರಪ್ಪ ಅವರು ಭಾರಿ ಪ್ರಯತ್ನ ಮಾಡಿದರು. ಹೀಗಾಗಿ ಅವರ ಚುನಾವಣಾ ಪ್ರಚಾರ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಿದ್ದರು. ಒಂದು ಹಂತದಲ್ಲಿ ಬಿಜೆಪಿ ನಾಯಕರ ಪ್ರಚಾರ ಸಭೆಗಳಿಗಿಂತ ಯಡಿಯೂರಪ್ಪ ಅವರ ಸಭೆಗಳಿಗೇ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರುತ್ತಿದ್ದರು. ಆದರೆ, ಚಿಹ್ನೆ ಸಮಸ್ಯೆಯಿಂದಾಗಿ ಅವು ಮತಗಳಾಗಿ ಪರಿವರ್ತನೆ ಆಗಲಿಲ್ಲ. ಆದರೂ 32 ಕ್ಷೇತ್ರಗಳಲ್ಲಿ ಕೆಜೆಪಿ ಎರಡನೇ ಸ್ಥಾನದಲ್ಲಿದೆ. ಯಡಿಯೂರಪ್ಪ ಅವರ ಸಾಮರ್ಥ್ಯ ಏನು ಎಂಬುದು ಇದರಿಂದಲೇ ತಿಳಿಯುತ್ತದೆ.
ಚಿಹ್ನೆ ವಿಚಾರದಲ್ಲಿ ಗೊಂದಲ ತಲೆದೋರದೇ ಹೋಗಿದ್ದರೆ ಇನ್ನಷ್ಟು ಸ್ಥಾನಗಳು ಕೆಜೆಪಿ ಮಡಿಲಿಗೆ ಬೀಳುವ ಸಾಧ್ಯತೆ ಇತ್ತು. ಶೇಕಡವಾರು ಮತಗಳಿಕೆ ಪ್ರಮಾಣವೂ ಜಾಸ್ತಿಯಾಗುತ್ತಿತ್ತು. ಇನ್ನು 20-30 ಕ್ಷೇತ್ರಗಳಲ್ಲಿ ಬಿಜೆಪಿ, ಕೆಜೆಪಿ ಮತಗಳು ವಿಭಜನೆ ಆಗಿದ್ದರಿಂದಲೇ ಅಲ್ಲಿ ಕಾಂಗ್ರೆಸ್ ಗೆಲವು ಸಾಧ್ಯವಾಯಿತು. ಒಟ್ಟಾರೆ ಹೇಳುವುದಾದರೆ ಕೆಜೆಪಿ ಕೇವಲ ಆರು ಸ್ಥಾನಗಳನ್ನು ಗಳಿಸಿದೆ ಎಂದ ಮಾತ್ರಕ್ಕೆ ಯಡಿಯೂರಪ್ಪ ಅವರ ಪ್ರಾಬಲ್ಯ ಅಲ್ಲಗಳೆಯಲಾಗದು. ರಾಜ್ಯ ರಾಜಕೀಯದಲ್ಲಿ ಅವರ ತೂಕ ಏನು ಎಂಬುದನ್ನು ಫಲಿತಾಂಶವೇ ಹೇಳುತ್ತಿದೆ. ಸ್ವತ: ಬಿಜೆಪಿಯವರೂ ಇದನ್ನು ಒಪ್ಪುತ್ತಾರೆ. ಕಾಂಗ್ರೆಸ್ಸಿಗರು ಅನುಮೋದಿಸುತ್ತಾರೆ.