ಸಿಎಂ ಹುದ್ದೆಗಾಗಿ ಚಟುವಟಿಕೆ ಚುರುಕು
ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ನಲ್ಲಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮದೇ...
ಕ.ಪ್ರ.ವಾರ್ತೆ ಬೆಂಗಳೂರು ಮೇ 9-
ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ನಲ್ಲಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮದೇ ಆದ ರೀತಿಯಲ್ಲಿ ಕಾರ್ಯತಂತ್ರ ಆರಂಭಿಸಿದ್ದಾರೆ.
ವ್ಯಕ್ತಿಗತವಾಗಿ ಶಾಸಕರಿಗೆ ಕರೆ ಮಾಡಿ ಅವರ ವಿಶ್ವಾಸ ಗಳಿಸಲು ಪ್ರಯತ್ನ ನಡೆಸುತ್ತಿರುವ ಸಿದ್ದರಾಮಯ್ಯ ಗುರುವಾರ ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ತಮ್ಮ ಬೆಂಬಲಿಗ ಶಾಸಕರ ಸಭೆ ಕರೆದು ಚರ್ಚೆ ನಡೆಸಿದ್ದಾರೆ.
ಸುಮಾರು 70ಕ್ಕೂ ಹೆಚ್ಚು ಶಾಸಕರ ಜತೆ ಚರ್ಚೆ ನಡೆಸಿರುವ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಜತೆಯೂ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಶಾಸಕರ ಸಂಖ್ಯಾಬಲ ಲೆಕ್ಕ ಹಾಕಿರುವ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಶುಕ್ರವಾರ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಸಲಹೆ: ಈ ನಡುವೆ ಕಾಂಗ್ರೆಸ್ನ ಹೈಕಮಾಂಡ್ನ ಕೆಲ ಪ್ರಮುಖರಿಗೆ ಸಲಹೆ ನೀಡಿರುವ ಕಾಂಗ್ರೆಸ್ನ ಹಿರಿಯ ಮುಖಂಡ ಶ್ರೀನಿವಾಸ್ಪ್ರಸಾದ್, ಖರ್ಗೆ ಹಾಗೂ ಸಿದ್ದರಾಮಯ್ಯ ಇಬ್ಬರ ಜತೆಯೂ ಕುಳಿತು ಮಾತನಾಡಿಸಿ. ಇದರಿಂದ ಅನಗತ್ಯ ಗೊಂದಲಗಳು ಬಗೆಹರಿಯುತ್ತವೆ ಎಂದು ಸಲಹೆ ನೀಡಿದ್ದಾರೆ.